ಎಸ್ಐ ಸೇರಿದಂತೆ ಆರು ಪೊಲೀಸರ ಅಮಾನತು
ಮೈಸೂರು: ಕೇರಳದ ಖಾಸಗಿ ಬಸ್ನಲ್ಲಿ ಹಣ ದೋಚಿರುವ ಆರೋಪ ಹೊತ್ತಿರುವ ಎಸ್ಐ ಸೇರಿದಂತೆ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಅಭಿನವ್ ಖರೆ ತಿಳಿಸಿದರು.
ಎಸ್ಐ ಜಗದೀಶ್, ಪೇದೆಗಳಾದ ಅಶೋಕ್, ಸತೀಶ್, ಲತೀಫ್, ರವಿ ಮತ್ತು ಮನೋಹರ್ ಎಂಬವರನ್ನು ಅಮಾನತುಗೊಳಿಸಲಾಗಿದೆ. ಈ 6 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಶೋಧ ಮುಂದುವರಿಸಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ.4ರ ಬೆಳಗಿನ ಜಾವ ಖಾಸಗಿ ಬಸ್ ಮೇಲೆ ದಾಳಿ ಮಾಡಿ 2.27 ಕೋಟಿ ವಶಪಡಿಸಿಕೊಂಡು, 20 ಲಕ್ಷ ಮಾತ್ರ ಸಿಕ್ಕಿರುವುದಾಗಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಹಣ ತಮ್ಮದೆಂದು ಹೇಳಿಕೊಂಡು ಮೂವರು ಚಿನ್ನದ ವ್ಯಾಪಾರಿಗಳು ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಪೊಲೀಸರ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಎಸ್ಐ ಸೇರಿದಂತೆ 6 ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.
ಖಾಸಗಿ ಬಸ್ನಲ್ಲಿ ಹಣ ಸಾಗಿಸುತ್ತಿರುವ ವಿಚಾರವನ್ನು ಪೊಲೀಸರಿಗೆ ಮಾಹಿತಿ ನೀಡಿ, 15 ಲಕ್ಷ ಪಡೆದಿದ್ದ ಕುಶಾಲನಗರ ಮೂಲದ ಸಲೀಂ ಮತ್ತು ಶರೀಫ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 8 ಲಕ್ಷ . ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪ್ರಕರಣ ಕುರಿತು ಎಸ್ಪಿ ಹೇಳಿದ್ದು: ಕೇರಳದ ಖಾಸಗಿ ಬಸ್ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಬಾತ್ಮೀದಾರರಾದ ಸಲೀಂ ಮತ್ತು ಶರೀಫ್ ಎಂಬವರಿಂದ ಪೊಲೀಸರಿಗೆ ಲಭಿಸಿತ್ತು. ಜ.4ರ ಬೆಳಗಿನ ಜಾವ ಇಲವಾಲಕ್ಕೆ ಬಸ್ ಬಂದಾಗ ಎಸ್ಐ ಜಗದೀಶ್, ಪೇದೆಗಳಾದ ಲತೀಫ್, ಸತೀಶ್, ಅಶೋಕ್, ರವಿ, ಮನೋಹರ ಬಸ್ನ ಮೇಲೆ ದಾಳಿ ನಡೆಸಿದರು.
ಸತೀಶ್ಗೆ ಪರಿಚಯಸ್ಥರಾದ ಸಲೀಂ ಮತ್ತು ಶರೀಫ್ ಬೆಂಗಳೂರಿನಿಂದ ಹೊರಟ ಬಸ್ ಪ್ರತಿ ಊರು ತಲುಪಿದಾಗಲೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಸ್ನಲ್ಲಿಯೇ ಇದ್ದ ಈ ಇಬ್ಬರು, ಶ್ರೀರಂಗಪಟ್ಟಣದಲ್ಲಿ ಇಳಿದು ಕಾರಿನಲ್ಲಿ ಹೊರಟರು. ನಂತರ ಬಸ್ ಹಿಂಬಾಲಿಸಿದ್ದರು.
ಬಸ್ ಇಲವಾಲಕ್ಕೆ ಬಂದಾಗ ಬಾತ್ಮೀದಾರರ ಮಾಹಿತಿಯಂತೆ ಪೊಲೀಸರು ತಪಾಸಣೆ ನಡೆಸಿದರು. ಬಸ್ನ ಲಗೇಜ್ ಬಾಕ್ಸ್ನಲ್ಲಿ ಇರಿಸಲಾಗಿದ್ದ ಹಣ ಪತ್ತೆಯಾಯಿತು. ಪೊಲೀಸರು ಬೆಳಗಿನ ಜಾವ 1.30ಕ್ಕೆ ದಾಳಿ ನಡೆಸಿದರು. ಇದಾದ ಎರಡು ಗಂಟೆಯವರೆಗೂ ಅಂದರೆ 3.30 ರವರೆಗೆ ಪ್ರಕರಣ ಕುರಿತು ಎಸ್ಐ ಜಗದೀಶ್ ಮತ್ತು ಸಿಬ್ಬಂದಿ ಮೇಲಧಿಕಾರಿಯಾದ ಎಸ್ಪಿ ಅಭಿನವ್ ಖರೆ, ಡಿವೈಎಸ್ಪಿ ಶ್ರೀಹರಿ ಬರಗೂರು ಅವರಿಗೆ ಮಾಹಿತಿ ನೀಡಿಲ್ಲ. ಬಸ್ ತಪಾಸಣೆಯ ವಿಡಿಯೋ ದಾಖಲಿಸದೇ, ಚಾಲಕ ಹಾಗೂ ಕ್ಲೀನರ್ ಅನ್ನು ಠಾಣೆಗೆ ಕರೆತಂದ ಬಳಿಕ ವಿಡಿಯೋ ಮಾಡಿದ್ದಾರೆ.
ಬೆಳಗಿನ ಜಾವ 3.30ಕ್ಕೆ ಎಸ್ಐ ಜಗದೀಶ್ ಅವರು ನನಗೆ ಕರೆ ಮಾಡಿ 20 ಲಕ್ಷ ವಶಪಡಿಸಿಕೊಂಡಿರುವುದಾಗಿ ಮಾಹಿತಿ ನೀಡಿದರು. ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದೆ ಎಂದು ಎಸ್ಪಿ ಅಭಿನವ್ ಖರೆ ತಿಳಿಸಿದರು.
ವ್ಯಾಪಾರಿಗಳು ಬಂದರು: ಹೀಗಿರುವಾಗ ಜ.7 ರಂದು ಕೇರಳದ ಚಿನ್ನದ ವ್ಯಾಪಾರಿಗಳಾದ ಸೈಯುದ್ದೀನ್, ಜಂಷೀರ್ ಮತ್ತು ಬಾಬು ಎಂಬವರು ನನ್ನನ್ನು ಭೇಟಿಯಾದರು. ಬಸ್ನಲ್ಲಿ ಸಿಕ್ಕ ಹಣ ನಮಗೆ ಸೇರಿದ್ದು, ಪೊಲೀಸರು 2.27 ಕೋಟಿ ವಶಪಡಿಸಿಕೊಂಡಿದ್ದಾರೆ. ಆದರೆ, ಎಫ್ಐಆರ್ನಲ್ಲಿ ಕೇವಲ 20 ಲಕ್ಷ ಮಾತ್ರ ದಾಖಲಿಸಿದ್ದಾರೆ ಎಂದು ದೂರು ನೀಡಿದರು. ಹಣದ ಸಂಬಂಧ ದಾಖಲೆ ನೀಡುವಂತೆ ಸೂಚಿಸಿದ್ದೆ. ಅದರಂತೆ ಬಸ್ನಲ್ಲಿದ್ದ ಹಣದ ಸಂಬಂಧ ಸೂಕ್ತ ದಾಖಲೆಯನ್ನು ಅವರು ಸಲ್ಲಿಸಿದ್ದರು. ದಾಖಲೆ ಪ್ರಕಾರ ತೆರಿಗೆ ವಂಚಿಸುವ ಸಲುವಾಗಿ ಚಿನ್ನ ಮಾರಾಟ ಮಾಡಿದ 2.27 ಕೋಟಿ ಕಳ್ಳ ಮಾರ್ಗದಲ್ಲಿ ಸಾಗಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಎಸ್ಪಿ ಹೇಳಿದರು.ಹಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಾಲ್ವರ ಪೈಕಿ ಸಲೀಂ ಮತ್ತು ಷರೀಫ್ ಎಂಬವರು ಪೇದೆಗಳಾದ ಸತೀಶ್ ಮತ್ತು ಲತೀಫ್ ಎಂಬವರಿಂದ ಜ.5 ರಂದು ಎಪಿಎಂಸಿ ಚೆಕ್ಪೋಸ್ಟ್ ಸಮೀಪಕ್ಕೆ ಬಂದು 15 ಲಕ್ಷ ಪಡೆದಿದ್ದಾರೆ. ಈ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 8 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಉಳಿದ 7 ಲಕ್ಷ ಖರ್ಚು ಮಾಡಿದ್ದಾರೆ. ಉಳಿದ ಇಬ್ಬರು ಮಾಹಿತಿದಾರರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಡಿವೈಎಸ್ಪಿಗಳಾದ ಶ್ರೀಹರಿ ಬರಗೂರು, ನಂಜುಂಡ ಇದ್ದರು.
ಪ್ರಾಮಾಣಿಕ ತನಿಖೆ ಮಾಡುತ್ತಿದ್ದೇವೆ: ಎಸ್ಪಿ, ಡಿವೈಎಸ್ಪಿ
ಮೈಸೂರು: ಈ ಪ್ರಕರಣದಲ್ಲಿ ಎಸ್ಪಿ, ಡಿವೈಎಸ್ಪಿ ಸೇರಿದಂತೆ ಹಲವರು ಹಣ ಪಡೆದಿದ್ದಾರೆ ಎಂದು ಸಾಕಷ್ಟು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಈ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ. ಬಸ್ನ ಮೇಲೆ ದಾಳಿ ನಡೆಸುವ ಬಗ್ಗೆ ಎಸ್ಐ ಜಗದೀಶ್ ಮತ್ತು ಸಿಬ್ಬಂದಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಎಸ್ಪಿ ಅಭಿನವ್, ಡಿವೈಎಸ್ಪಿ ಶ್ರೀಹರಿ ಬರಗೂರು ಸ್ಪಷ್ಟಪಡಿಸಿದರು. ಚಿನ್ನದ ವ್ಯಾಪಾರಿಗಳು ನೀಡಿರುವ ದೂರಿನನ್ವಯ ಪೊಲೀಸರ ವಿರುದ್ಧವೇ ಪ್ರಕರಣ ದಾಖಲಿಸಿದ್ದೇವೆ. ಆ ವೇಳೆಯಲ್ಲಿ ನಮಗೆ ಸಾಕಷ್ಟು ಆಧಾರಗಳು ಸಿಕ್ಕಿರಲಿಲ್ಲ. ಹೀಗಾಗಿ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಆದರೆ, ಈಗ ಇಬ್ಬರು ಮಾಹಿತಿದಾರರನ್ನು ಬಂಧಿಸಿ, ಹಣ ವಶಪಡಿಸಿಕೊಳ್ಳಲಾಗಿದೆ. ಅವರಿಂದ ಮಾಹಿತಿ ಕಲೆ ಹಾಕಲಾಗಿದೆ. ಹೀಗಾಗಿ ತಲೆಮರೆಸಿಕೊಂಡಿರುವ ಎಸ್ಐ ಸೇರಿದಂತೆ 6 ಮಂದಿ ಪೊಲೀಸರನ್ನು ಬಂಧಿಸಲು ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲು ಶಿಫಾರಸು ಸಹ ಮಾಡಲಾಗಿದೆ ಎಂದು ಎಸ್ಪಿ ಅಭಿನವ್ ಖರೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

