ಐದು ವರ್ಷದಲ್ಲಿ ಸಂಗೀತ ವಿವಿ ಸಾಧನೆ ಶೂನ್ಯ
ಕ.ಪ್ರ.ವಾರ್ತೆ , ಮೈಸೂರು , ಮಾ. 12
ಗಂಗಕ್ಕನ ಹೆಸರಿನ ಕರ್ನಾಟಕ ಸಂಗೀತ ವಿವಿಯ ಐದು ವರ್ಷಗಳ ಸಾಧನೆ ಶೂನ್ಯ. ಮುಂದಾದರೂ ವಿವಿಯ ಘನತೆಯನ್ನು ಉಳಿಸುವ ಕೆಲಸ ನಡೆಯಬೇಕು ಎಂದು ಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕ ಪಂಡಿತ್ ರಾಜೀವ್ ತಾರಾನಾಥ್ ಆಶಯ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯು ಬುಧವಾರ ಆಯೋಜಿಸಿದ್ದ ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ವಿವಿ ಮಾಡಬೇಕಾದ ಒಂದು ಕೆಲಸವನ್ನು ಕಳೆದ ಐದು ವರ್ಷಗಳಲ್ಲಿ ಮಾಡಿಲ್ಲ. ಈ ಹಿಂದೆ ಕುಲಪತಿಯಾಗಿದ್ದವ ನನ್ನ ಬಳಿ ಸಂಗೀತಾಭ್ಯಾಸಕ್ಕೆ ಬರುತ್ತಿದ್ದ. ಹಾಡಲೂ ಬರುತ್ತಿರಲಿಲ್ಲ. ಅಣ್ಣಾ ಎಂದು ಕರೆಯುತ್ತಿದ್ದ. ಅದು ಬೇರೆ ವಿಷಯ. ಆದರೆ ಮೈಸೂರಿನ ಸಂಗೀತ ವಿವಿ ಮತ್ತು ಧಾರವಾಡದ ಗಂಗೂಬಾಯಿ ಗುರುಕುಲದ ಕಾರ್ಯವೈಖರಿಯ ಬಗ್ಗೆ ನನಗೆ ವೈಯಕ್ತಿಕವಾಗಿ ಅಸಂತೋಷ ಇದೆ. ಕಳೆದ ಐದು ವರ್ಷದಿಂದ ಸಂಗೀತ ವಿವಿಯ ಹಿಂದೂಸ್ತಾನಿ ವಿಭಾಗಕ್ಕೆ ಒಬ್ಬರು ಪ್ರಾಧ್ಯಾಪಕರಾಗಲಿ, ಉಪನ್ಯಾಸಕರಾಗಲಿ ಇಲ್ಲ. ಅತಿಥಿ ಉಪನ್ಯಾಸಕರು ಎಂದು ನೇಮಕ ಮಾಡಿಕೊಂಡಿದ್ದಾರೆ. ಅದು ಪುಡಿಗಾಸಿಗೆ. ಒಂದು ವಿಶ್ವವಿದ್ಯಾಲಯಕ್ಕೆ ಸ್ವಾಭಿಮಾನ ಇರಬೇಕು. ಅದರದೆ ಆದ ಗಂಭೀರತೆ ಇರಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಸಾಚಾತನದಿಂದ ಕಳ್ಳತನ: ಈ ಹಿಂದೆ ಕುಲಸಚಿವರಾಗಿದ್ದ ಬಸವಣ್ಣ ಒಮ್ಮೆ ನನ್ನನ್ನು ಭೇಟಿಯಾದರು. ಸಂಗೀತ ವಿವಿಯಲ್ಲಿ ಏನೇನು ಮಾಡಬಹುದು ಎಂದು ಕೇಳಿದರು. ಮೊದಲು ಐದು ವರ್ಷದ ಕೊಳೆಯನ್ನು ತೊಳೆದುಬಿಡಿ. ಆಮೇಲೆ ನೋಡೋಣ ಎಂದಿದ್ದೆ. ಕಾಲು ಮುರಿದ ಪಿಯಾನೋ, ಕೆಟ್ಟು ಹೋದ ಲ್ಯಾಪ್ಟಾಪ್ ತಂದು ಹೊಸ ಬಿಲ್ ಹಾಕಿ ದುಡ್ಡನ್ನು ಜೇಬಿಗಿಳಿಸಿಕೊಳ್ಳಲಾಗುತ್ತಿದೆ. ಕಳ್ಳತನವನ್ನು ಮಾತ್ರ ಸಾಚಾತನದಿಂದ ಮಾಡಲಾಗುತ್ತಿದೆ ಎಂದು ತೀವ್ರವಾಗಿ ಅವರು ಬೇಸರ ವ್ಯಕ್ತಪಡಿಸಿದರು.
ಸಂಗೀತ ಶಿಕ್ಷಣದಲ್ಲಿ ಮೊದಲು ಕೇಳುವುದನ್ನು ಕಲಿಸಬೇಕು. ಐದು ವರ್ಷ ಶಿಕ್ಷಣ ಮುಗಿಯುವ ವೇಳೆಗೆ ಆತ ಪರಿಪೂರ್ಣನಾಗಿರಬೇಕು. ಆಂತರಿಕ ಪರೀಕ್ಷೆ, ಸೆಮಿಸ್ಟರ್ನಂತಹ ಪದ್ಧತಿಯಿಂದ ಯಾವುದೇ ಪ್ರಯೋಜನವಾಗದು. ಗಂಗೂಬಾಯಿ, ನಾನು ಹೇಗೆ ಕಲಿತೆವೊ ಹಾಗೆ ಕಲಿಸಬೇಕು. ನಾನು ಕೊಡುವ ಸಲಹೆಯನ್ನು ಸಾಧ್ಯವಾದರೆ ಸ್ವೀಕರಿಸಿ, ಇಲ್ಲವಾದರೆ ತಿಪ್ಪೆಗೆ ಬೀಸಾಡಿ. ಮೊದಲ ಒಂದು ವರ್ಷ ವಿದ್ಯಾರ್ಥಿಗಳಿಗೆ ಹಾಡುವುದನ್ನು ಕಲಿಸಬೇಕು. ನಾವು ಹೇಳಿಕೊಟ್ಟಂತೆ ಅವರು ಹೇಳಬೇಕು. ಎರಡನೆ ವರ್ಷ ಸಣ್ಣ ಸಣ್ಣ ಕಾರ್ಯಕ್ರಮ ಕೊಡುವಂತೆ ಮಾಡಬೇಕು. ಐದನೆ ವರ್ಷದ ವೇಳೆಗೆ ಸಾರ್ವಜನಿಕವಾಗಿ ಅವರು ಸಂಗೀತ ಕಛೇರಿ ನೀಡಬೇಕು ಎಂದರು.
ಇತರೆ ಪದವಿಯಂತೆ: ಸಂಗೀತ ಪದವಿ ಇತರೆ ಪದವಿಗಳಂತೆ ಅಲ್ಲ. ಸಂಗೀತದಲ್ಲಿ ಪ್ರತಿಯೊಂದು ಸಂಗೀತ ಕಛೇರಿಯೂ ಒಂದೊಂದು ಪರೀಕ್ಷೆ ಇದ್ದಂತೆ. ವಿವಿಯ ಕಾರ್ಯಸೌಧಗಳಲ್ಲಿ ಕುಳಿತು ಸಂಗೀತಕ್ಕೆ ಪಠ್ಯಕ್ರಮ ರೂಪಿಸುತ್ತೇವೆ ಎಂಬುದು ಮೂರ್ಖತನ. ಅಲ್ಲದೆ ಸಂಗೀತ ವಿವಿಗಳಲ್ಲಿ ಖ್ಯಾತ ಸಂಗೀತಗಾರರನ್ನು ಕರೆಯಿಸಿ ಕಾರ್ಯಕ್ರಮ ಕೊಡಿಸಬೇಕು. ಆಗ ವಿದ್ಯಾರ್ಥಿಗಳು ಅವರನ್ನು ನೋಡಿ ಕಲಿಯುತ್ತಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಸಂಗೀತ ವಿವಿಯಲ್ಲಿ ಒಂದು ಒಳ್ಳೆಯ ಸಂಗೀತ ಕಾರ್ಯಕ್ರಮ ಆಗಿದ್ದು ನೋಡಲಿಲ್ಲ ಎಂದರು.
ಗಂಗೂಬಾಯಿಯ ನೂರನೇ ವರ್ಷದ ಈ ಸಮಾರಂಭದಲ್ಲಿ ಸಂಗೀತ ಸುಧೆ ಹರಿಯಬೇಕಿತ್ತು. ದಿನದ 12 ಗಂಟೆ ಸಂಗೀತವೆ ತುಂಬಿರಬೇಕು. ವರ್ಷಕ್ಕೆ ಕನಿಷ್ಠ 2 ರಿಂದ 3 ಸಂಗೀತ ಕಾರ್ಯಕ್ರಮಗಳು ಇಲ್ಲಿ ನಡೆಯಬೇಕು. ಸಂಗೀತ ವಿವಿಗೆ ನಡೆಸಲು ಜಾಗ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ಸಂಗೀತ ವಿವಿಗೆ ಇದೆಷ್ಟೆ ಜಾಗ ಸಾಕು. ಇಲ್ಲೆ ಚಪ್ಪರ ಹಾಕಿ ಕಾರ್ಯಕ್ರಮ ನಡೆಸಿ. ಹಿಮಾಂಷು ಅವರು ವಿವಿ ಮೊಹಲ್ಲಾದಲ್ಲಿ ರಸ್ತೆ ಬದಿ ಚಪ್ಪರ ಹಾಕಿ ಪ್ರತಿ ವರ್ಷ ಒಂದು ತಿಂಗಳು ಸಂಗೀತ ಕಾರ್ಯಕ್ರಮ ನಡೆಸುತ್ತಾರೆ. ಆ ಕೆಲಸ ಸಂಗೀತ ವಿವಿಯಿಂದ ಏಕೆ ಸಾಧ್ಯವಿಲ್ಲ. ಮೊದಲು ಸಂಗೀತ ವಿವಿಯಲ್ಲಿ ಗ್ರಂಥಾಲಯ ಬೇಕು ಮತ್ತು ಸಂಗೀತ ಕಛೇರಿಗಳು ನಡೆಯಬೇಕು. ಜ.26 ಮತ್ತು ಆಗಸ್ಟ್ 15 ರಂದು ಬಾವುಟ ಹಾರಿಸಿ ಹೋಗುವುದಲ್ಲ ಎಂದು ಕಟುವಾಗಿ ಟೀಕಿಸಿದರು. ಇಷ್ಟೆಲ್ಲ ಮಾತನಾಡಿ ನನಗೆ ಏನೂ ಆಗಬೇಕಿಲ್ಲ. ಈ 82ರ ವಯಸ್ಸಿನಲ್ಲಿ ಯಾರೂ ಕರೆದು ಕೆಲಸ ಕೊಡುವುದಿಲ್ಲ. ದೇವರೊಬ್ಬ ನನಗೆ ಕೈ ಕೊಡಬಹುದಷ್ಟೆ. ಆದರೆ ನಾವು ಉತ್ತಮವಾಗಿ ಕಾರ್ಯಕ್ರಮ ನೀಡಿದರೆ ಜನ ಬಂದೆ ಬರುತ್ತಾರೆ. ಮೈಸೂರಿನ ಜನತೆ ಸಂಗೀತಕ್ಕೆ ಗೌರವ ನೀಡುತ್ತಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಅದು ಬಿಟ್ಟು ನಾವು ಕಾರ್ಯಕ್ರಮವನ್ನೇ ಮಾಡದೆ ಕೇವಲ ನಿರುತ್ಸಾಹದ ಮಾತಿನಿಂದ ಪ್ರಯೋಜನವಿಲ್ಲ ಎಂದ ಅವರು ಪ್ರಾರ್ಥನಾ ಗೀತೆ ಹಾಡಿದ ವಿದ್ಯಾರ್ಥಿನಿಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತು ಮುಗಿಸಿದರು.
ಅಪರೂಪದ ಛಾಯಾಚಿತ್ರ ಪ್ರದರ್ಶನ: ಕಾರ್ಯಕ್ರಮದ ಅಂಗವಾಗಿ ಡಾ.ಗಂಗೂಬಾಯಿ ಹಾನಗಲ್ ಅವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ನಡೆಯಿತು. ಸಂಗೀತ ಲೋಕದ ದಿಗ್ಗಜರಾದ ಪಂಡಿತ್ ಭೀಮಸೇನ ಜೋಷಿ, ಜಾಕೀರ್ ಹುಸೇನ್, ಬಿಸ್ಮಿಲ್ಲಾ ಖಾನ್, ಸವಾಯಿ ಗಂಧರ್ವ, ಲತಾ ಮಂಗೇಶ್ಕರ್, ಪಂ. ರವಿಶಂಕರ್, ಬಾಲಮುರುಳಿ ಕೃಷ್ಣ, ವಿವಿಧ ಕ್ಷೇತ್ರದ ಗಣ್ಯರಾದ ಬಾಳಠಾಕ್ರೆ, ಏಣಗಿ ಬಾಳಪ್ಪ, ಶಿವರಾಮಕಾರಂತ, ಗಿರೀಶ್ ಕಾರ್ನಾಡ್, ಡಾ.ನಾನಾ ಪಾಟೇಕರ್, ಡಾ. ರಾಜ್ಕುಮಾರ್, ವಿಷ್ಣುವರ್ಧನ್, ರಾಷ್ಟ್ರಪತಿ ಪಿ.ವಿ. ಗಿರಿ, ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ, ಪಿ.ವಿ. ನರಸಿಂಹರಾವ್, ಡಾ.ಎಪಿಜೆ ಅಬ್ದುಲ್ ಕಲಾಂ, ನಿಜಲಿಂಗಪ್ಪ, ಎಸ್.ಎಂ. ಕೃಷ್ಣ, ಬಂಗಾರಪ್ಪ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮುಂತಾದವರು ಗಂಗೂಬಾಯಿ ಅವರೊಡನೆ ತೆಗೆಸಿಕೊಂಡ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು.
ವಿದುಷಿ ಡಾ. ಸುಕನ್ಯಾ ಪ್ರಭಾಕರ್, ಬಳ್ಳಾರಿ ಎಂ. ರಾಘವೇಂದ್ರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕುಲಸಚಿವರಾದ ಪ್ರೊ.ವೈ.ಎಸ್. ಸಿದ್ದೇಗೌಡ ಮತ್ತು ಪ್ರೊ.ಎಂ.ಎಸ್. ಶೇಖರ್ ಇದ್ದರು.
ಸಂಗೀತ ವಿವಿ ಕುಲಸಚಿವರ ವರ್ಗ: ಸರ್ಕಾರಕ್ಕೆ ಅಭಿನಂದನೆ
ಮೈಸೂರು: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವಣ್ಣ ಅವರನ್ನು ವರ್ಗ ಮಾಡಿರುವ ಸರ್ಕಾರಕ್ಕೆ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ಅಭಿನಂದನೆ ಸಲ್ಲಿಸಿದೆ. ಕಳೆದ ವರ್ಷ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಹನುಮಣ್ಣನಾಯಕ ದೊರೆ ಅವರಿಗೆ ಅಪಮಾನ ಮಾಡಿದ್ದ ಬಸವಣ್ಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಅದರಂತೆ ತಮ್ಮ ಮನವಿಗೆ ಮನ್ನಣೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ವೇದಿಕೆ ಪದಾಧಿಕಾರಿಗಳಾದ ದೇವಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ರಾಜ್ಯ ಉಪಾಧ್ಯಕ್ಷ ಎಸ್.ಶ್ರೀಧರ್ ಭಟ್ಟ, ಎನ್. ಮಾದೇಶ್, ಪ್ರಕಾಶ್, ಶ್ರೀನಿವಾಸ್ ಕಡಕಳ, ಶ್ರೀನಿವಾಸಮೂರ್ತಿ, ರಘು ಕೃತಜ್ಞತೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

