ಮೂಲಸೌಕರ್ಯ ವಂಚಿತ ಮಾಳನಾಯಕನಹಳ್ಳಿ ಗ್ರಾಮ
ಭೇರ್ಯ: ಕೆ.ಆರ್. ನಗರ ತಾಲೂಕಿನ ಮಾಳನಾಯಕನಹಳ್ಳಿ ಗ್ರಾಮ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಇಲ್ಲಿನ ಜನರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಕಲ್ಲೆದ್ದ ರಸ್ತೆ ಒಂದೆಡೆಯಾದರೆ, ಕೊಳಚೆ ನೀರು ಚರಂಡಿಯಲ್ಲಿ ನಿಂತು ದುರ್ನಾತ ಬೀರುತ್ತಿದ್ದು, ಇಲ್ಲಿನ ಜನರ ನೆಮ್ಮದಿಗೆ ಭಂಗತಂದಿದೆ. ಇದರಿಂದ ಗ್ರಾಮಸ್ಥರು ಅವ್ಯವಸ್ಥೆ ನಡುವೆ ಜೀವನ ಸಾಗಿಸುವಂತಾಗಿದೆ. ಮಿರ್ಲೆ ಗ್ರಾಪಂ ವ್ಯಾಪ್ತಿಯ ಈ ಗ್ರಾಮದಲ್ಲಿ ಸುಮಾರು 100 ಮನೆಗಳಿದ್ದು, 700ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಮರೀಚಿಕೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಚರಂಡಿ ಅವ್ಯವಸ್ಥೆ ಗ್ರಾಮದ ದೊಡ್ಡ ಸಮಸ್ಯೆಯಾಗಿದೆ. ಕೆಲವೆಡೆ ಚರಂಡಿಯೇ ಇಲ್ಲ. ಇರುವ ಕೆಲವೇ ಕೆಲ ಚರಂಡಿಗಳು ಕೆಸರು, ಕಸಕಡ್ಡಿಯಿಂದ ಮುಚ್ಚಿವೆ. ಇದರಿಂದಾಗಿ ಕೊಳಚೆ ನೀರು ಅಲ್ಲಲ್ಲಿ ಒಂದೆಡೆ ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದ್ದು, ರಸ್ತೆ ಮೇಲೂ ಹರಿಯುತ್ತದೆ. ಮಳೆಗಾಲದಲ್ಲಂತೂ ಸಂಪೂರ್ಣ ರಾಡಿಯಾಗುವ ರಸ್ತೆಗೆ ಕೊಳಚೆ ಸೇರ್ಪಡೆಯಾಗಿ ಇಡೀ ಗ್ರಾಮದ ನೈರ್ಮಲ್ಯ ಹದಗೆಡಲಿದೆ. ಅಲ್ಲದೆ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭೀತಿಗೆ ಒಳಗಾಗಿದ್ದಾರೆ.
ಗ್ರಾಮದಲ್ಲಿನ ಬೀದಿಗಳಲ್ಲಿ ಕಲ್ಲುಗಳು ಎದ್ದಿವೆ. ಮಕ್ಕಳು, ವೃದ್ಧರು ಎಡವಿ ಗಾಯಗೊಂಡಿದ್ದಾರೆ. ಹೆಚ್ಚು ಮಳೆಯಾದಾಗ ರಸ್ತೆಯಲ್ಲೇ ನೀರು ಸಂಗ್ರಹಗೊಂಡು ಪಾದಚಾರಿಗಳು ಹಾಗೂ ವಾಹನ ಸವಾರರು ಹರಸಾಹಸ ಪಡಲೇಬೇಕು. ಮೆಟ್ಲಿಂಗ್ ಮಾಡಲು ಅವಕಾಶವಿದ್ದರೂ ಸಂಬಂಧಿಸಿದವರು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
ಶಾಲೆ ಪಕ್ಕದಲ್ಲೇ ಕಸ: ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲೇ ಇಡೀ ಗ್ರಾಮದ ಕಸ ರಾಶಿಬಿದ್ದಿದ್ದು, ತೆರವು ಮಾಡಲು ಮುಂದಾಗಿಲ್ಲ. ಕಸದಿಂದ ಹೊರಹೊಮ್ಮುವ ದುರ್ವಾಸನೆಯಿಂದಾಗಿ ವಿದ್ಯಾರ್ಥಿಗಳು ಮೂಗುಮುಚ್ಚಿ ಪಾಠ ಕೇಳುವಂತಾಗಿದೆ. ಇನ್ನು ಈ ಮಾರ್ಗದಲ್ಲಿ ಸಾರಿಗೆ ಬಸ್ ಸಂಚಾರ ವಿರಳ. ಸಕಾಲಕ್ಕೆ ಸಾರಿಗೆ ಸೌಕರ್ಯವಿಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆ ಎದುರಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೋಗಿಗಳು ಪರದಾಡುವಂತಾಗಿದೆ. ದುಪ್ಪಟ್ಟು ಹಣತೆತ್ತು ಗೂಡ್ಸ್ ವಾಹನಗಳಲ್ಲಿ ತೆರಳಬೇಕಿದೆ. ಈ ಎಲ್ಲ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕು. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಮಾಳನಾಯಕನಹಳ್ಳಿ ಗ್ರಾಮದ ರಸ್ತೆಗಳನ್ನು 2014-15ನೇ ಸಾಲಿನ ಯೋಜನೆಯಲ್ಲಿ ಅಭಿವೃದ್ಧಿ ಮಾಡಲಾಗುವುದು. 13ನೇ ಹಣಕಾಸು ಯೋಜನೆ ಅನುದಾನದಲ್ಲಿ ಇಲ್ಲಿನ ಚರಂಡಿಗಳ ಅಭಿವೃದ್ಧಿ, ಘನತ್ಯಾಜ್ಯ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ತಿಳಿಸಿದರು.
-ಭೇರ್ಯ ಮಹೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

