ಮೈಸೂರು

ಸಮಸ್ಯೆಗಳ ತೊಟ್ಟಿಲಾದ ಸರಸ್ವತಿಪುರಂ ಹಾಸ್ಟೆಲ್

Published On :

ಮೈಸೂರು: ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರಸ್ವತಿಪುರಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಹಾಸ್ಟೆಲ್ ಸಮಸ್ಯೆ ತೊಟ್ಟಿಲಾಗಿ ಪರಿಣಮಿಸಿದೆ ಎಂದು ಆರೋಪಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ (ಎಐಡಿವೈಒ) ಕಾರ್ಯಕರ್ತರು ಬುಧವಾರ ಪ್ರತಿಭಟಿಸಿದರು.
ಈ ಹಿಂದೆ ತೊಣಚಿಕೊಪ್ಪಲಿನಲ್ಲಿದ್ದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಸರಸ್ವತಿಪುರಂ 8ನೇ ಮುಖ್ಯರಸ್ತೆಯಲ್ಲಿರುವ ಹೊಸ ಬಾಡಿಗೆ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ವರ್ಗಾಯಿಸಲಾಗಿತ್ತು. ಕಳೆದ 8 ತಿಂಗಳಿಂದ ಈ ಕಟ್ಟಡದಲ್ಲಿ ಊಟದ ವ್ಯವಸ್ಥೆ, ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಿಲಯಪಾಲಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜವರೇಗೌಡ ಅವರು ನಿಲಯಪಾಲಕ ರಾಮಯ್ಯ ಅವರನ್ನು ಕರೆಸಿ ವಿಚಾರಿಸಿದಾಗ ಉತ್ತರ ಕೊಡದೆ ಸುಮ್ಮನಾದರು. ಅಲ್ಲದೇ ಉದ್ಭವಿಸಿರುವ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆ ನೇತೃತ್ವವನ್ನು ಎಐಡಿವೈಒ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಮೇಟಿ, ಕಾರ್ಯದರ್ಶಿ ಟಿ.ಆರ್. ಸುನೀಲ್ ವಹಿಸಿಕೊಂಡಿದ್ದರು.
ಸಂವಿಧಾನ ಕುರಿತು ವಿಶೇಷ ಉಪನ್ಯಾಸ
ಮೈಸೂರು: ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನ ಹೊಂದುವುದು ಅಗತ್ಯ ಎಂದು ಜೆಎಸ್‌ಎಸ್ ಕಾನೂನು ಕಾಲೇಜಿನ ಸಹಪ್ರಾಧ್ಯಾಪಕ ಡಾ.ಎಸ್. ನಟರಾಜು ಹೇಳಿದರು. ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕಾನೂನು ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ರಚನೆಯ ಇತಿಹಾಸವನ್ನು ತಿಳಿಸುತ್ತಾ, ಬೆನಗಲ್ ನರಸಿಂಗರಾವ್ ಮತ್ತು ತಂಡ ಸಂವಿಧಾನದ ಪ್ರಥಮ ಕರಡನ್ನು ತಯಾರಿಸಿದ್ದು, ನಂತರ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ತಂಡ ಮೊದಲ ಕರಡಿನ ಆಧಾರದ ಮೇಲೆ ಅಂತಿಮ ಸ್ವರೂಪದ ಕರಡನ್ನು ತಯಾರಿಸಿದರು. ದೇಶ ಇದನ್ನು 26 ಜನವರಿ 1950ರಲ್ಲಿ ಅಂಗೀಕರಿಸಿ ದೇಶ ಗಣರಾಜ್ಯವಾಗಿ ಹೊರಹೊಮ್ಮಿತು. ಭಾರತದ ಸಂವಿಧಾನದ ಮೂಲ ಲಕ್ಷಣಗಳನ್ನು ಸವಿಸ್ತಾರವಾಗಿ ವಿವರಿಸಿ, ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು ಸಂವಿಧಾನದ ಆತ್ಮ ಎಂದು ತಿಳಿಸಿದರು. ಪ್ರಾಂಶುಪಾಲ ಪ್ರೊ.ಕೆ.ವಿ. ಪ್ರಭಾಕರ, ಕಾನೂನು ವಿಭಾಗದ ಮುಖ್ಯಸ್ಥೆ ವಾಣಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಭಾಗದ ಅಧ್ಯಾಪಕಿ ಪ್ರಿಯ ಎ. ಜಗದೀಶ್ ಕಾರ್ಯಕ್ರಮ ಸಂಯೋಜಿಸಿದರು.
ಚುನಾವಣಾ ಅಕ್ರಮ: ಮಾಹಿತಿ ನೀಡಲು ಮನವಿ
ಹುಣಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಹುಣಸೂರು ಉಪ ವಿಭಾಗ ಮಟ್ಟದ ಐದು ತಾಲೂಕು ಕೇಂದ್ರಗಳಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, ಅಕ್ರಮ ಕುರಿತು ಸಾರ್ವಜನಿಕರು ಮಾಹಿತಿ ನೀಡಬಹುದು ಎಂದು ಅಬಕಾರಿ ಉಪ ಅಧೀಕ್ಷಕರು ತಿಳಿಸಿದ್ದಾರೆ. ಹುಣಸೂರು ಉಪ ವಿಭಾಗ ನಿಯಂತ್ರಣ ಕೊಠಡಿ 08222- 252434, ನಿರೀಕ್ಷಕರು ಕೆ.ಶ್ರೀನಿವಾಸ ಮೊ. 9449597185, ಕೃಷ್ಣೇಗೌಡ 9590646746, ಹುಣಸೂರು ವಲಯ ಕಚೇರಿ 08222- 251690, ನಿರೀಕ್ಷಕರು ಧರಣಿಕುಮಾರ್ ಮೊ. 9449219257, ವಿ. ಲೋಕೇಶ್ ಮೊ. 9611220129, ಪಿರಿಯಾಪಟ್ಟಣ ಕಚೇರಿ 08223- 273373, ನಿರೀಕ್ಷಕರು ಎ.ವಿ. ಗಿರೀಶ್ ಮೊ. 9844644056, ಜಾನ್ ಮಥಾಯ್ ಮೊ. 9880066526, ಕೆ.ಆರ್. ನಗರ ಕಚೇರಿ 08223-264801, ನಿರೀಕ್ಷಕರು ರೇವಣ್ಣ ಮೊ. 9980358515, ಮೋಹನ್ ಮೊ. 9945534218, ಎಚ್.ಡಿ. ಕೋಟೆ ಕಚೇರಿ 08228- 257095, ನಿರೀಕ್ಷಕರು ಆನಂದಕುಮಾರ್ ಮೊ. 9845904954, ಎಚ್.ಕೆ. ರಾಜಪ್ಪ ಮೊ. 8892823488 ಅಬಕಾರಿ ಉಪ ಅಧೀಕ್ಷಕರು ಮೊ. 9449597184 ಸಂಪರ್ಕಿಸಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಅಬಕಾರಿ ಉಪ ಅಧೀಕ್ಷಕ ಆರ್. ನಾಗಶಯನ ತಿಳಿಸಿದ್ದಾರೆ.
ಹಸ್ತಿಕೇರಿ ಮಠದಲ್ಲಿ ಆರೋಗ್ಯ ತಪಾಸಣೆ ಶಿಬಿರ
ತಲಕಾಡು: ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಆರೋಗ್ಯ ಉಚಿತ ತಪಾಸಣೆ ಶಿಬಿರಗಳ ಸದುಪಯೋಗಕ್ಕೆ ಜನರು ಮುಂದಾಗುವಂತೆ ತಾಪಂ ಸದಸ್ಯ ಟಿ.ಎಸ್. ಸುಬ್ರಮಣ್ಯ ಕರೆ ನೀಡಿದರು.
ಪಟ್ಟಣದ ಹಸ್ತಿಕೇರಿ ಮಠದಲ್ಲಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ, ಮೈಸೂರು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಜೆಎಸ್‌ಎಸ್ ಕಣ್ಣಿನ ಆಸ್ಪತ್ರೆ ಹಾಗೂ ಅಸ್ತಿಕೇರಿ ಮಠದ ಜೀರ್ಣೋದ್ಧಾರ ಸಮಿತಿ ಸಂಯುಕ್ತವಾಗಿ ಏರ್ಪಡಿಸಿದ್ದ ಬೃಹತ್ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಾಂತರ ಜನರಿಗೆ ಕಣ್ಣಿನ ಸಮಸ್ಯೆ ತುಂಬಾ ಇದೆ. ಸರ್ಕಾರದ ಯೋಜನೆಗಳು ಜನಸಾಮಾನ್ಯರನ್ನು ಪೂರ್ಣವಾಗಿ ತಲುಪುತ್ತಿಲ್ಲ. ಜನರ ದೃಷ್ಟಿ ಸಮಸ್ಯೆಗಳು ದೂರವಾಗುತ್ತಿಲ್ಲ. ಆದ್ದರಿಂದ ಹಳ್ಳಿಯ ಜನರು ಸಂಘ ಸಂಸ್ಥೆಗಳು ಮತ್ತು ಮಠಮಾನ್ಯಗಳು ಏರ್ಪಡಿಸುವ ಇಂತಹ ಆರೋಗ್ಯ ಶಿಬಿರಗಳ ಪೂರ್ಣ ಲಾಭವನ್ನು ಪಡೆಯಲಿ ಎಂದು ಹೇಳಿದರು.
ಹಸ್ತಿಕೇರಿ ಮಠದ ಪೀಠಾಧಿಕಾರಿ ಡಾ.ಸಿದ್ಧಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಂಗಳೂರಿನ ಮೆಲ್ಲರಿ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕೊಯಮತ್ತೂರಿನ ಅರವಿಂದ ಆಸ್ಪತ್ರೆಯ ಡಾ.ಉಮ್ಮರ್ ಷರೀಫ್ ಮತ್ತು ತಂಡ, ಜೆಎಸ್‌ಎಸ್ ಕಾಲೇಜಿನ ಡಾ. ಓಂಪ್ರಕಾಶ್ ಮತ್ತು ತಂಡ ಭಾಗವಹಿಸಿದ್ದರು.
ಇದೇ ವೇಳೆ ದಾನಿ ಬಿ.ಶಿವಪ್ರಸಾದ್ ತಂದೆಯ ಹೆಸರಲ್ಲಿ ಕಟ್ಟಿಸಲಿರುವ ಅತಿಥಿ ಕೊಠಡಿಯ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿದರು. ಜ್ಯೋತಿ ಮತ್ತು ತಂಡ ಪ್ರಾರ್ಥಿಸಿದರು. ಮಠದ ಕಾರ್ಯದರ್ಶಿ ಟಿ.ಎನ್. ದಾಸೇಗೌಡ, ಸ್ವಾಗತಿಸಿ, ವಂದಿಸಿದರು.
ನಾಳೆ ಮಹಿಳಾ ದಿನಾಚರಣೆ
ಕೆ.ಆರ್. ನಗರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಯನ ವಿಭಾಗ ಮತ್ತು ಮೈಸೂರಿನ ವಿಸ್ಮಯ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಮಾ.14ರ ಬೆಳಗ್ಗೆ 10.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಮೈಸೂರು ಸ್ತ್ರೀವಾದಿ ಚಿಂತಕರಾದ ಡಾ.ಹಾಲತಿ ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸುವರು. ಪ್ರಾಂಶುಪಾಲ ಡಾ.ಎಂ.ಎಚ್. ಕೊಂಡರಸಯ್ಯ ಅಧ್ಯಕ್ಷತೆ ವಹಿಸುವರು. ಹೊಳೆನರಸಿಪುರ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಭಾರತಿ ಮಹದೇವ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾದಯ್ಯ ಭಾಗವಹಿಸುವರು.
ವಹಿದಾಬಾನು ಅಧ್ಯಕ್ಷೆ ಧನಲಕ್ಷ್ಮಮ್ಮ ಉಪಾಧ್ಯಕ್ಷೆ
ಹುಣಸೂರು: ಹುಣಸೂರು ಪುರಸಭೆ ಅಧ್ಯಕ್ಷರಾಗಿ 19ನೇ ವಾರ್ಡ್‌ನ ಸದಸ್ಯೆ ಕಾಂಗ್ರೆಸ್‌ನ ವಹಿದಾಬಾನು ಹಾಗೂ ಉಪಾಧ್ಯಕ್ಷ ಗಾದಿಗೆ 16ನೇ ವಾರ್ಡ್‌ನ ಧನಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರು ಮಾತ್ರ ನಾಮುಪತ್ರ ಸಲ್ಲಿಸಿದ್ದರಿಂದಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಹಸೀಲ್ದಾರ್ ಎನ್. ವೆಂಕಟಾಚಲಪ್ಪ ಘೋಷಿಸಿದರು. ಅಧ್ಯಕ್ಷ ಸ್ಥಾನ ಬಿಸಿಎಂ ಎ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ನ 15, ಜೆಡಿಎಸ್‌ನ 9, ಪಕ್ಷೇತರರು 3 ಮಂದಿ ಸೇರಿದಂತೆ 27 ಸದಸ್ಯರ ಪೈಕಿ 26 ಸದಸ್ಯರು, ಶಾಸಕ ಎಚ್.ಪಿ. ಮಂಜುನಾಥ್, ಸಂಸದ ಎಚ್. ವಿಶ್ವನಾಥ್ ಇದ್ದರು. 11ನೇ ವಾರ್ಡಿನ ಜೆಡಿಎಸ್ ಸದಸ್ಯ ಮಹಮದ್ ಷಫಿ ಮಾತ್ರ ಗೈರು ಹಾಜರಾಗಿದ್ದರು. ಮುಖ್ಯಾಧಿಕಾರಿ ರಮೇಶ್ ಇದ್ದರು.
ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪುರಸಭಾ ಸದಸ್ಯರು ಅಭಿನಂದಿಸಿದರು. ಸಾರ್ವಜನಿಕರ ಸೇವೆಗೆ ಬದ್ಧತೆಯಿಂದ ಕೆಲಸ ಮಾಡುವಂತೆ ಶಾಸಕ ಎಚ್.ಪಿ. ಮಂಜುನಾಥ್ ಮತ್ತು ಸಂಸದ ಎಚ್. ವಿಶ್ವನಾಥ್ ಸೂಚಿಸಿ, ಶುಭ ಕೋರಿದರು.
ಮಾನವೀಯ ಗುಣಗಳ ಬಗ್ಗೆ ಜಾಗೃತಿ ಮೂಡಿಸಿ
ಪಿರಿಯಾಪಟ್ಟಣ: ಮಾನವರಲ್ಲಿ ಮಾನವೀಯ ಗುಣಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗುರು ಆಚಾರ್ಯ ತುಳಸಿ ಅವರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಗುರು ಆಚಾರ್ಯ ತುಳಸಿ ಅವರ ಸುಶಿಷ್ಯೆ ಶ್ರಮಣಿ ಕಂಚನ್ ಪ್ರಜ್ಞಾಜಿ ಹೇಳಿದರು.
ಪಟ್ಟಣದ ಜೈನ ಭವನದಲ್ಲಿ ಗುರು ಆಚಾರ್ಯ ತುಳಸಿ ಅವರ 101ನೇ ವರ್ಷದ ಜನ್ಮಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಣುವ್ರತ ಸಂಕಲ್ಪ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಅವರು ಮಾತನಾಡಿದರು. ಜೈನ ಸಮುದಾಯದ ಶ್ವೇತಾಂಬರ 13ನೇ ಪಂಥದ ಗುರು ಆಚಾರ್ಯ ತುಳಸಿ ಅವರ ಅಣುವ್ರತ ನಿಯಮಾನುಸಾರ ರಾಷ್ಟ್ರಾದ್ಯಂತ ನಾಲ್ಕು ವಾಹನಗಳ ಮೂಲಕ ಸಂಚರಿಸಿ ಮಾನವರಲ್ಲಿ ಮಾನವೀಯ ಗುಣಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಯಾತ್ರೆಯ ಉದ್ದೇಶ ಪ್ರಾಣಿ ಪಕ್ಷಿಗಳ ಹತ್ಯೆ ಮಾಡುವುದನ್ನು ತಡೆಗಟ್ಟುವ ಬಗ್ಗೆ, ಭ್ರೂಣ ಹತ್ಯೆ ಮಾಡದಿರುವ ಬಗ್ಗೆ, ಹಿಂಸೆ, ಹೊಡೆದಾಟಗಳಲ್ಲಿ ತೊಡಗದಂತೆ, ವಿಶ್ವಶಾಂತಿ ಹಾಗೂ ನಿಶಸ್ತ್ರೀಕರಣವನ್ನು ಬೆಂಬಲಿಸುವಂತೆ ಮಾಡುವುದು, ಮಾನವರಲ್ಲಿ ಮೇಲು ಕೀಳರಿಮೆಯನ್ನು ತೊಡೆದು ಹಾಕುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಗುರು ಆಚಾರ್ಯ ತುಳಸಿ ಅವರ ಸುಶಿಷ್ಯೆಯರಾದ ಗೌತಮ್ ಪ್ರಜ್ಞಾಜಿ, ರಶ್ಮಿ ಪ್ರಜ್ಞಾಜಿ ಪ್ರವಚನ ನೀಡಿದರು. ಜೈನ ಸಮುದಾಯದ ಮುಖಂಡರಾದ ನೈನಾಲಾಲ್ ಜೈನ್, ನೇಮಿಚಂದ್ ಜೈನ್, ಅರ್ಜುನ್‌ಲಾಲ್‌ಜೈನ್, ಬೈರ್‌ಚೆಂದ್ ಜೈನ್, ಮನೋಹರ್‌ಲಾಲ್ ಜೈನ್, ಸುರೇಶ್ ಜೈನ್ ಇದ್ದರು.
ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ
ಕಿತ್ತೂರು: ಸರ್ಕಾರ ಗ್ರಾಮಾಂತರ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಅಕ್ಷರ ದಾಸೋಹವು ಪ್ರಮುಖವಾಗಿದೆ. ಇದರ ಸದುಪಯೋಗ ಸರ್ವರಿಗೂ ತಲುಪುವಂತಾಗಬೇಕೆಂದು ಪುಟ್ಟತಾಯಮ್ಮ ಸ್ಮಾರಕ ಪ್ರೌಢಶಾಲೆ ಸಂಸ್ಥೆಯ ಅಧ್ಯಕ್ಷ ಕೆ.ಸಿ. ಪುಟ್ಟಸಿದ್ದಶೆಟ್ಟಿ ಅಭಿಪ್ರಾಯಪಟ್ಟರು.
ಪುಟ್ಟತಾಯಮ್ಮ ಸ್ಮಾರಕ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಂಸ್ಥೆಯು ಕಳೆದ 15 ವರ್ಷಗಳಿಂದಲೂ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಬಂದಿರುವುದನ್ನು ಗಮನಿಸಿದ ಸರ್ಕಾರ, ಅನುದಾನಿತ ಸಂಸ್ಥೆಯ ಮಾನ್ಯತೆ ನೀಡಿದ್ದು, ಅದರ ಅಂಗವಾಗಿ ಈಗ ಅಕ್ಷರ ದಾಸೋಹಕ್ಕೆ ಚಾಲನೆ ನೀಡಲಾಗಿದೆ. ಶಾಲೆಯ ಶಿಕ್ಷಕರು ಇನ್ನು ಮುಂದೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮವಾದ ಮಧ್ಯಾಹ್ನದ ಊಟವನ್ನು ನೀಡುವುದರ ಮೂಲಕ ಶಾಲೆಯನ್ನು ಅಭಿವೃದ್ಧಿ ಮಾಡಬೇಕೆಂದು ಸಲಹೆ ನೀಡಿದರು. ಪಿರಿಯಾಪಟ್ಟಣ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಸ್. ರಾಮಲಿಂಗು ಮಾತನಾಡಿ, ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದಾಗಿ ಸಮಾಜದಲ್ಲಿ ಅನಕ್ಷರತೆ ಹೋಗಲಾಡಿಸುವಲ್ಲಿ ಗಮನಾರ್ಹವಾದ ಕೊಡುಗೆ ನೀಡುತ್ತಿದ್ದು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೇವಲ ಶಿಕ್ಷಣದ ಮೂಲ ಮಂತ್ರವನ್ನಿಟ್ಟುಕೊಂಡು ಸಾಮಾಜಿಕ ಬದಲಾವಣೆಗೆ ಎಲ್ಲರೂ ಭಾಗಿಯಾಗಬೇಕೆಂದು ಮನವಿ ಮಾಡಿದರು. ಸಂಸ್ಥೆಯ ದಾನಿಗಳಾದ ಚಿಕ್ಕಣ್ಣಶೆಟ್ಟಿ, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವರಾಜು, ಉಪಪ್ರಾಂಶುಪಾಲ ಅಶೋಕ್, ಮುಖ್ಯ ಶಿಕ್ಷಕರಾದ ಕೆ.ಸಿ. ಪ್ರಕಾಶ್, ರಾಮಚಂದ್ರ, ಶಿಕ್ಷಕರಾದ ಮಹೇಶ್ ಇದ್ದರು.
ಟಿಬೆಟ್ ಮಹಿಳೆಯರ ಮೆರವಣಿಗೆ
ಮೈಸೂರು: ರಾಷ್ಟ್ರೀಯ ಟಿಬೆಟಿಯನ್ ಮಹಿಳಾ ಸಂಘಟನೆಯ 55ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರಾಂತೀಯ ಮಹಿಳಾ ಸಂಘಟನೆಯವರು ಬುಧವಾರ ಶಾಂತಿಯುತ ಮೆರವಣಿಗೆ ಹಮ್ಮಿಕೊಂಡಿದ್ದರು.
ಬೈಲಕುಪ್ಪೆ, ಹುಣಸೂರು ಮತ್ತು ಕೊಳ್ಳೇಗಾಲದ ಟಿಬೆಟ್ ಕ್ಯಾಂಪ್‌ಗಳಿಂದ ಆಗಮಿಸಿದ್ದ ನೂರಾರು ಮಂದಿ ಟಿಬೆಯನ್ ಮಹಿಳೆಯರು, ಬಾಯಿಗೆ ಕಪ್ಪು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಗಾಂಧಿ ಚೌಕ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ತಮ್ಮ ಮನವಿ ಸಲ್ಲಿಸಿದರು. ಟಿಬೆಟಿಯನ್ನರ ಮೇಲೆ ಚೀನಾ ದಬ್ಬಾಳಿಕೆ ಖಂಡಿಸಿದ ಅವರು, ಟಿಬೆಟ್ ಧರ್ಮಗುರು ದಲೈ ಲಾಮಾ ಅವರು ಟಿಬೆಟ್ ಮನಸ್ಥಿತಿಯನ್ನು ಚೀನಾ ಆಡಳಿತಕ್ಕೆ ಮನದಟ್ಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ವಿಶ್ವದ ಶಾಂತಿಪ್ರಿಯ ರಾಷ್ಟ್ರಗಳು, ಸಂಘಟನೆಗಳು ಕೈಜೋಡಿಸಬೇಕು ಎಂದು ಅವರು ಕೋರಿದರು. ಪ್ರಾಂತೀಯ ಮಹಿಳಾ ಸಂಘಟನೆಯ ಮುಖಂಡರಾದ ತ್ಸೇರಿಂಗ್ ಲಾಮೋ, ತೆಂಜೀಮ್ ದೊಲ್ಮಾ ನೇತೃತ್ವ ವಹಿಸಿದ್ದರು.
ನಾಳೆ ದೀಪೋತ್ಸವ
ಮೈಸೂರು: ಎನ್.ಆರ್. ಮೊಹಲ್ಲಾದ ಅಂಬಾಭವಾನಿ ದೇವಸ್ಥಾನದಲ್ಲಿ ಮಾ.14ರ ಸಂಜೆ 7ಕ್ಕೆ ಮೋಹನರಾವ್ ಗುರುಸ್ವಾಮಿ ನೇತೃತ್ವದಲ್ಲಿ ದೀಪೋತ್ಸವ, ಮಾ.15ರ ಬೆಳಗ್ಗೆ 9ಕ್ಕೆ ಇರುಮುಡಿ ಪೂಜಾ ಮಹೋತ್ಸವ, ಮಧ್ಯಾಹ್ನ 1ಕ್ಕೆ ಮಹಾಮಂಗಳಾರತಿ ಏರ್ಪಡಿಸಲಾಗಿದೆ.
ವಿಚಾರ ಸಂಕಿರಣ
ರೋಟರಿ ಮೈಸೂರು ಉತ್ತರ ವತಿಯಿಂದ ಮಾ.14ರ ಸಂಜೆ 6.30ಕ್ಕೆ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಕೇಂದ್ರದಲ್ಲಿ ಶಾಂತಿ ಮತ್ತು ಸಂಘರ್ಷ ತಡೆ- ಒಂದು ಚಿಂತನೆ ಕಾರ್ಯಕ್ರಮ ಏರ್ಪಡಿಸಿದ್ದು, ಹಿರಿಯ ಕಾನೂನು ತಜ್ಞ ಡಾ. ಸಿಕೆಎನ್ ರಾಜಾ, ಪ್ರೊ.ಮುಜಾಫರ್ ಅಸಾದಿ, ಲೆಸ್ಲಿ ಮೊರಾಸ್, ಜಿ. ಶಿವಲಿಂಗಸ್ವಾಮಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.