ಮೈಸೂರು

ನೀತಿಸಂಹಿತೆಯ ಕಟ್ಟುನಿಟ್ಟಿನ ಜಾರಿಗೆ ಸೂಚನೆ

Published On :

ಹುಣಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳು ಹಾಗೂ ಚುನಾವಣಾ ಮುಖ್ಯ ತರಬೇತುದಾರರಿಗೆ ಚುನಾವಣಾ ನೀತಿಸಂಹಿತೆಯ ಕಟ್ಟುನಿಟ್ಟಿನ ಜಾರಿ ಕುರಿತಂತೆ ಒಂದು ದಿನದ ತರಬೇತಿ ಕಾರ್ಯಾಗಾರವು ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ತರಬೇತುದಾರ ಹಾಗೂ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಂ. ಮಂಜುನಾಥ್, ಮಾ.5ರಿಂದಲೇ ಚುನಾವಣಾ ನೀತಿಸಂಹಿತೆ ಜಾರಿಯಾಗಿದ್ದು, ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿ ಎಲ್ಲ ಅಧಿಕಾರಿಗಳ ಕರ್ತವ್ಯವಾಗಿದೆ. ತಾಲೂಕಿನಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ನೇತೃತ್ವದಲ್ಲಿ ನಾಲ್ಕು ಫ್ಲೈಯಿಂಗ್ ಸ್ಕ್ವಾಡ್, ಮೂರು ಸ್ಟಾಟಿಕ್ ಸರ್ವೇಲೆನ್ಸ್ ತಂಡಗಳು ಹಾಗೂ 12 ಸೆಕ್ಟರ್ ಅಧಿಕಾರಿಗಳು ಹಾಗೂ 12 ಪೆಟ್ರೋಲಿಂಗ್ ಅಧಿಕಾರಿಗಳನ್ನು ನೇಮಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಿದ್ದಾರೆ. ಈ ಎಲ್ಲ ಅಧಿಕಾರಿಗಳಿಗೂ ಸೂಕ್ತ ತರಬೇತಿ ನೀಡಲಾಗುತ್ತದೆ ಎಂದರು.
ಮುಖ್ಯ ತರಬೇತುದಾರ ಪುಟ್ಟಶೆಟ್ಟಿ ಚುನಾವಣೆ ಪ್ರಚಾರದಲ್ಲಿ ಬಳಸುವ ಬಂಟಿಂಗ್‌ಗಳು, ಪೋಸ್ಟರ್‌ಗಳು, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿನ ಅಭ್ಯರ್ಥಿಗಳ ಪ್ರಚಾರಗಳ ಕುರಿತಂತೆ ಚುನಾವಣಾ ಆಯೋಗ ವಿವಿಧ ನೀತಿಗಳನ್ನು ಅಳವಡಿಸಿದ್ದು, ಎಸ್‌ಎಂಎಸ್‌ಗಳು, ಅಂತರ್ಜಾಲ ಬಳಕೆ ಇವುಗಳ ಮೂಲಕ ಪ್ರಚಾರ ಮಾಡುವಾಗ ಆಗಬಹುದಾದ ನೀತಿಸಂಹಿತೆ ಉಲ್ಲಂಘನೆಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಪುರಸಭಾ ಮುಖ್ಯಾಧಿಕಾರಿ ರಮೇಶ್, ಕಾಲೇಜು ಪ್ರಾಂಶುಪಾಲೆ ಪ್ರೊ.ಎಂ.ಆರ್. ಸೌಭಾಗ್ಯ, ಚುನಾವಣಾ ಶಿರಸ್ತೇದಾರ್ ಪುಟ್ಟರಾಜು, ಕಾಲೇಜು ಅಧ್ಯಾಪಕರಾದ ಆನಂದ್, ಚಂದ್ರಕಾಂತ್, ವಿಶ್ವನಾಥ್, ಶ್ರೀನಿವಾಸ್, ವಿಜಯಲಕ್ಷ್ಮೀ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಇದೇ ವೇಳೆ ಚುನಾವಣಾ ನೀತಿ ಸಂಹಿತೆಯ ಕುರಿತಂತೆ ಕಿರುತೆರೆಯಲ್ಲಿ ಪವರ್ ಪಾಯಿಂಟ್ ಕಾರ್ಯಕ್ರಮದ ಮೂಲಕ ಮಾಹಿತಿ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.