ಮೈಸೂರು

3 ಕಾಲೇಜಿಗೆ ಸಂಯೋಜನೆ ಮುಂದುವರಿಸದಿರಲು ನಿರ್ಧಾರ

Published On :

ಮೈಸೂರು: ಮೂರು ಕಾಲೇಜುಗಳಿಗೆ 2014-15ನೇ ಸಾಲಿಗೆ ಸಂಯೋಜನೆ ಮುಂದುವರೆಸದಿರಲು ಮೈಸೂರು ವಿಶ್ವವಿದ್ಯಾಲಯ ನಿರ್ಧರಿಸಿದೆ. ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಶಿಕ್ಷಣ ಮಂಡಳಿಯ ವಿಶೇಷ ಸಭೆಯಲ್ಲಿ ಈ ಸಂಬಂಧ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ದಕ್ಷಿಣ ಬಡಾವಣೆಯ ವಾಸವಿ ಪ್ರಥಮ ದರ್ಜೆ ಕಾಲೇಜು, ಮೈಸೂರು ನಗರದ ಗೋಕುಲಂ 3ನೇ ಹಂತದ ಗುರುಕುಲ ಕಾಲೇಜ್ ಆಫ್ ಎಜುಕೇಷನ್, ಹಾಸನ ಜಿಲ್ಲೆಯ ಅರಸೀಕೆರೆ ಬಿ.ಎಚ್. ರಸ್ತೆಯ ಅನಂತ ಸದ್ವಿದ್ಯಾ ಕಾಲೇಜ್ ಆಫ್ ಎಜುಕೇಷನ್ಗೆ ಸಂಯೋಜನೆ ಮುಂದುವರೆಸಬಾರದು ಎಂದು ಸ್ಥಳೀಯ ವಿಚಾರಣಾ ಸಮಿತಿಯು ವರದಿ ನೀಡಿತ್ತು. ಸುಧೀರ್ಘ ಚರ್ಚೆಯ ಬಳಿಕ ಈ ವರದಿಯನ್ನು ಅಂಗೀಕರಿಸಲಾಯಿತು.
ಒಂದು ಹಂತದಲ್ಲಿ ಕುಲಪತಿ ಪ್ರೊ. ರಂಗಪ್ಪ ಅವರು ಮತ್ತೊಂದು ಸಮಿತಿ ಕಳುಹಿಸಿ, ವರದಿ ತರಿಸೋಣ ಎಂದರಾದರೂ ಸಭೆಯಲ್ಲಿ ಭಾಗವಹಿಸಿದ್ದ ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರು,  ಮೂಲಭೂತ ಸೌಲಭ್ಯಗಳಿಲ್ಲದ ಸಂಸ್ಥೆಗಳಿಗೆ ಸಂಯೋಜನೆ ಮುಂದುವರೆಸಿದರೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಬಹುತೇಕ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.
ಪ್ರೊ. ಇಂಧುಮತಿ, ಪ್ರೊ. ರವಿ,. ಡಾ.ಸಿ. ಕೃಷ್ಣ, ಪ್ರೊ. ಸುರೇಶ್, ಡಾ. ಯಶೋಧರ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ. ಶ್ರೀಜಯದೇವರಾಜ ಅರಸ್ ಇದ್ದರು.

ಟಿಟಿಎಲ್ ಕಾಲೇಜಿಗೆ ಸಂಯೋಜನೆ ಬೇಡ
ಮೈಸೂರಿನ ಸರಸ್ವತಿಪುರಂನಲ್ಲಿರುವ ಟಿಟಿಎಲ್ ಕಾಲೇಜಿಗೂ ಸಂಯೋಜನೆ ಮುಂದುವರೆಸಬಾರದು ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಆಗ್ರಹಿಸಿದರು.
ಆ ಜಾಗ ಉಪ್ಪಾರ ಸಂಘಕ್ಕೆ ಸೇರಿದ್ದು, ವಿಷಯ ನ್ಯಾಯಾಲಯದಲ್ಲಿದೆ. ಯಾವಾಗ ಬೇಕಾದರೂ ಜಾಗ ನಮಗೆ ಸೇರುತ್ತದೆ. ಆದ್ದರಿಂದ ಆ ಕಾಲೇಜಿಗೆ ಬೇರೆಡೆ ಸ್ಥಳಾಂತರವಾಗುವಂತೆ ಸೂಚಿಸಬೇಕು ಎಂದು ಪಟ್ಟು ಹಿಡಿದರು. ಜಾಗದ ವಿವಾದಕ್ಕೂ ನಮಗೂ ಸಂಬಂಧವಿಲ್ಲ. ನ್ಯಾಯಾಲಯದ ನಿರ್ದೇಶನದ ಮೇರೆಗೆ ನಾವು ಸಂಯೋಜನೆ ಮುಂದುವರೆಸಿದ್ದೇವೆ. ಜಾಗದ ವಿವಾದ ಬಗ್ಗೆ ನ್ಯಾಯಾಲಯದ ತೀರ್ಪು ಬಂದ ಕೂಡಲೇ ವಿವಿ ಅಗತ್ಯ ಕ್ರಮ ವಹಿಸಲಿದೆ ಎಂದು ಕುಲಪತಿ ರಂಗಪ್ಪ ಸ್ಪಷ್ಟಪಡಿಸಿದರು. ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ. ಲಿಂಗರಾಜು ಗಾಂಧಿ ಮಾತನಾಡಿ, ವಿವಿ ವ್ಯಾಪ್ತಿಯಲ್ಲಿ ಒಟ್ಟು 199 ಕಾಲೇಜುಗಳಿವೆ. 3 ವಿವಿ ಘಟಕ ಕಾಲೇಜುಗಳು, 5 ಸ್ವಾಯತ್ತ ಕಾಲೇಜುಗಳು, ತಾತ್ಕಾಲಿಕ ಸಂಯೋಜನೆಯಡಿ ಇರುವ ಪ್ರಥಮ ದರ್ಜೆ ಕಾಲೇಜುಗಳು 142, ಶಾಶ್ವತ ಸಂಯೋಜನೆ ಹೊಂದಿರುವ ಪ್ರಥಮ ದರ್ಜೆ ಕಾಲೇಜುಗಳು 4, ತಾತ್ಕಾಲಿಕ ಸಂಯೋಜನೆಯಡಿ ಇರುವ ಶಿಕ್ಷಣ ಕಾಲೇಜುಗಳು 30, ವಾಕ್ ಮತ್ತು ಶ್ರವಣ ಸಂಸ್ಥೆಗಳು, ಹೊಟೇಲ್ ಮ್ಯಾನೇಜ್ಮೆಂಟ್ ಕಾಲೇಜುಗಳು ತಲಾ 2, ಡಿಎಫ್ಆರ್ಎಲ್- 1,  ಸಿಎಫ್ಟಿಆರ್ಐ- 1 ಎಂದು ವಿವರಿಸಿದರು. ಇವುಗಳಲ್ಲಿ ಸಂಯೋಜನೆ ಮುಂದುವರೆಸದಿರುವಂತೆ ಶಿಫಾರಸ್ ಮಾಡಿರುವ ಕಾಲೇಜು- 3, ಷರತ್ತುಬದ್ಧ ಮುಂದುವರಿಕೆಗೆ ಶಿಫಾರಸ್ ಮಾಡಿರುವ ಕಾಲೇಜುಗಳು- 18, ಅರ್ಜಿ ಸಲ್ಲಿಸದೇ ಇರುವ ಕಾಲೇಜು- 1,  ಹೊಸದಾಗಿ ಅರ್ಜಿ ಸಲ್ಲಿಸಿರುವುದು- 10, ಸ್ನಾತಕೋತ್ತರ ಕೋರ್ಸ್ಗಳ ಮುಂದುವರಿಕೆಗೆ 88 ವಿಷಯಗಳು, ಹೊಸದಾಗಿ 5 ಕೋರ್ಸ್ಗಳಿಗೆ ಅರ್ಜಿ ಬಂದಿವೆ. ಷರತ್ತುಬದ್ಧ ಮುಂದುವರಿಕೆಗೆ 8 ಕೋರ್ಸ್ಗಳಿಗೆ ಶಿಫಾರಸು ಮಾಡಲಾಗಿದೆ. 4 ಸ್ನಾತಕೋತ್ತರ ಕೋರ್ಸ್ಗಳಿಗೆ ಅರ್ಜಿ ಬಂದಿಲ್ಲ. ಹೊಸದಾಗಿ ಐದು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭಕ್ಕೆ ಶಿಫಾರಸು ಮಾಡಲಾಗಿದೆ ಎಂದರು. ಸ್ಥಳೀಯ ವಿಚಾರಣಾ ಸಮಿತಿಯ ಎಲ್ಲ ಶಿಫಾರಸುಗಳಿಗೂ ಸಭೆ ಒಪ್ಪಿಗೆ ನೀಡಿತು. ಮೈಸೂರು ವಿವಿಯಲ್ಲಿ 1 ಲಕ್ಷ ವಿದ್ಯಾರ್ಥಿಗಳಿದ್ದು, 6 ಸಾವಿರ ಮಂದಿ ಸ್ನಾತಕೋತ್ತರ ಪದವಿ ಕಲಿಯುತ್ತಿದ್ದಾರೆ ಎಂದು ಕುಲಪತಿ ಪ್ರೊ. ರಂಗಪ್ಪ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.