ಮೈಸೂರು

'ಹಸಿವು ಮುಕ್ತ ದೇಶಕ್ಕಾಗಿ ಕಾಂಗ್ರೆಸ್ ಬೇಕು'

Published On :

ಟಿ. ನರಸೀಪುರ: ಹಸಿವು ಮುಕ್ತ ಭಾರತ ನಿರ್ಮಾಣ ಮಾಡಲು ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಪಟ್ಟಣದ ಕಾಲೇಜು ವೃತ್ತದಲ್ಲಿ ಶನಿವಾರ ಬೆಳಗ್ಗೆ ಆರಂಭವಾದ ಕಾಂಗ್ರೆಸ್‌ನ ಭಾರತ್ ನಿರ್ಮಾಣ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅನೇಕ ರಾಜಕೀಯ ಶಕ್ತಿಗಳು ಜನರ ಭಾವನಾತ್ಮಕ ಸೂಕ್ಷ್ಮ ವಿಚಾರಗಳನ್ನು ದುರ್ಬಳಕೆ ಮಾಡಿಕೊಂಡು, ಕೋಮುವಾದದ ಮೂಲಕ ಪ್ರಜಾಪ್ರಭುತ್ವ ಸ್ವರೂಪದ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿರುವ ವೇಳೆ ದೇಶ ಮತ್ತು ರಾಜ್ಯದಲ್ಲಿ ಸ್ಥಿರ ರಾಜಕಾರಣ ಅನಿವಾರ್ಯತೆ ಇದೆ ಎಂದರು.
ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಪಾದಯಾತ್ರೆ ಉದ್ಘಾಟಿಸಿ ಮಾತನಾಡಿ, ಪ್ರತಿಪಕ್ಷದಲ್ಲಿದ್ದಾಗಲೇ ಸಿಎಂ ಸಿದ್ದರಾಮಯ್ಯ ಅವರು ಮೂರು ಪಾದಯಾತ್ರೆಯನ್ನು ಯಶಸ್ವಿಗೊಳಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಲೋಕಸಭಾ ಚುನಾವಣೆಯ ಹಿನ್ನೆಲೆ ಎಐಸಿಸಿ ಮತ್ತು ಕೆಪಿಸಿಸಿ ಸೂಚನೆಯಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜನಪರ ಯೋಜನೆಗಳನ್ನು ತಿಳಿಸಲು ಭಾರತ್ ನಿರ್ಮಾಣ ಪಾದಯಾತ್ರೆಯನ್ನು ಮಾಡಲಾಗುತ್ತಿದೆ. ಕಾರ್ಯಕರ್ತರು ಕೇಂದ್ರದಲ್ಲಿ 10 ವರ್ಷ ಹಾಗೂ ರಾಜ್ಯದಲ್ಲಿ 9 ತಿಂಗಳ ಸಾಧನೆಗಳನ್ನು ಜನರಿಗೆ ತಿಳಿಸಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲುವಿಗೆ ದುಡಿಯಬೇಕೆಂದು ತಿಳಿಸಿದರು.
ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರ ನರಸೀಪುರದ ಎನ್‌ಎಚ್ 212ರ ಕಪಿಲಾ ನದಿಗೆ 64 ಕೋಟಿ ವೆಚ್ಚದಲ್ಲಿ ನೂತನ ಬೃಹತ್ ವಿನ್ಯಾಸದ ಸೇತುವೆ ನಿರ್ಮಾಣ ಮಾಡಿದೆ. ತಲಕಾಡಿನ ಪುರಾಣ ಪ್ರಸಿದ್ಧ ಶ್ರೀ ಕೀರ್ತಿ ನಾರಾಯಣ ದೇವಾಲಯ 7 ಕೋಟಿ ವೆಚ್ಚದಲ್ಲಿ ಪುನರುತ್ಥಾನ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು 500 ಕೋಟಿ ಪಿಪಿ ಪ್ರಾಜೆಕ್ಟ್‌ನಿಂದ ಮೈಸೂರು ಮತ್ತು ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮತ್ತೊಮ್ಮೆ ಲೋಕಸಭೆಗೆ ಆಯ್ಕೆ ಮಾಡಿ, ಅಭಿವೃದ್ಧಿಗೆ ದುಡಿಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಕಾಲೇಜು ವೃತ್ತದಿಂದ ಆರಂಭಗೊಂಡ ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಭಾರತ್ ನಿರ್ಮಾಣ ಪಾದಯಾತ್ರೆ ಜೋಡಿ ರಸ್ತೆ, ಬೆನಕನಹಳ್ಳಿ ಗೇಟ್, ಸೋಸಲೆ ಹಾಗೂ ವ್ಯಾಸರಾಜಪುರ ಮಾರ್ಗವಾಗಿ ಸಮಾರೋಪ ಸಮಾರಂಭ ನಡೆಯುವ ಸೋಮನಾಥಪುರ ಗ್ರಾಮಕ್ಕೆ ತೆರಳಿತು.
ಮಾಜಿ ಸಂಸದ ಎ. ಸಿದ್ದರಾಜು, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಮಾಜಿ ಶಾಸಕ ಎಸ್. ಕೃಷ್ಣಪ್ಪ, ಚಾಮರಾಜನಗರ ಎಪಿಎಂಸಿ ಅಧ್ಯಕ್ಷ ರಾಜಶೇಖರ್, ತಾಪಂ ಅಧ್ಯಕ್ಷ ನಟರಾಜು, ಜಿಪಂ ಸದಸ್ಯರಾದ ರೇಣುಕ ನಾಗರಾಜು, ಎಂ. ಸುಧಾ ಮಹದೇವಯ್ಯ, ಕೆ.ಮಹದೇವ, ಜಿಲ್ಲಾ ಎಸ್ಟಿ ಕಾಂಗ್ರೆಸ್ ಅಧ್ಯಕ್ಷ ಹೊನ್ನನಾಯ್ಕ, ರಾಜು, ಎಪಿಎಂಸಿ ಅಧ್ಯಕ್ಷ ಎಂ. ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎಚ್. ಮಂಜುನಾಥ್, ಎಸ್ಸಿ ಕಾಂಗ್ರೆಸ್ ಅಧ್ಯಕ್ಷ ಎ. ಶಿವಕುಮಾರ್, ಸಿದ್ದಶೆಟ್ಟಿ, ಶಿವಣ್ಣ, ಧನಂಜಯಕುಮಾರ್, ಅಮ್ಜದ್‌ಖಾನ್, ವೀಕ್ಷಕ ಬಸವಣ್ಣ, ತಾಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.