ಮೈಸೂರು

ದಕ್ಷಿಣ ಧ್ರುವದಿಂ.. ಉತ್ತರ ಧ್ರುವಕೆ

Published On :

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಪ್ರತಿನಿಧಿಸಿರುವವರ ಪೈಕಿ ಎಂ.ಎಸ್. ಗುರುಪಾದಸ್ವಾಮಿ, ಎಸ್.ಎಂ. ಸಿದ್ದಯ್ಯ, ಎಚ್.ಡಿ. ತುಳಸೀದಾಸ್,  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಎ.ಸಿದ್ದರಾಜು, ಕಾಗಲವಾಡಿ ಶಿವಣ್ಣ ಅವರು ಲೋಕಸಭೆಗೆ ಸೀಮಿತವಾದರೆ ಉಳಿದವರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಂದರೆ ಲೋಕಸಭೆಯಿಂದ ವಿಧಾನಸಭೆಗೆ, ವಿಧಾನಸಭೆಯಿಂದ ಲೋಕಸಭೆಗೆ ಹೋದವರು.
1952 ರಲ್ಲಿ ಆಯ್ಕೆಯಾದ ಕೆಎಂಪಿಪಿಯ ಎಂ.ಎಸ್. ಗುರುಪಾದಸ್ವಾಮಿ ಅವರು 1957 ರಲ್ಲಿ ಪಿಎಸ್ಪಿ, 1977 ರಲ್ಲಿ ಭಾರತೀಯ ಲೋಕದಳ, 1980 ರಲ್ಲಿ ಜನತಾಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ಮತ್ತೆ ನೇರ ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. ಹೀಗಾಗಿ ಅವರು ರಾಜ್ಯದಿಂದ ಹಾಗೂ ಉತ್ತರ ಪ್ರದೇಶದಿಂದ ನಾಲ್ಕು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ಆ ಚುನಾವಣೆಯಲ್ಲಿ ಅವರೊಂದಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಎನ್. ರಾಚಯ್ಯ ಅವರು ಮತ್ತೆ ಲೋಕಸಭೆಗೆ ಸ್ಪರ್ಧಿಸಲಿಲ್ಲವಾದರೂ ಹುಣಸೂರಿನಿಂದ ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ವಿಧಾನಸಭೆಗೆ, ನಂತರ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.
1957 ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಎಂ.ಶಂಕರಯ್ಯ, 1962 ರಲ್ಲಿ ಅದೇ ಪಕ್ಷದಿಂದ ಪುನಾರಾಯ್ಕೆಯಾದರು. ನಂತರ ವಿಧಾನ ಪರಿಷತ್ ಸದಸ್ಯರಾಗಿದ್ದರು. 1957ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಅದೇ ಪಕ್ಷದ ಎಸ್.ಎಂ. ಸಿದ್ದಯ್ಯ ಅವರು ನಂತರ ಮೂರು ಅವಧಿಗೆ ಅಂದರೆ 1962, 1967, 1971ರಲ್ಲಿ ಚಾಮರಾಜನಗರದಿಂದ ಲೋಕಸಭಾ ಸದಸ್ಯರಾಗಿದ್ದರು.
ಮೂರು ಅವಧಿಗೆ ರಾಜ್ಯಸಭಾ ಸದಸ್ಯರು: 1967, 1971, 1977 ರಲ್ಲಿ ಸತತ ಮೂರು ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಎಚ್.ಡಿ. ತುಳಸೀದಾಸ್ ಅವರು ಲೋಕಸಭೆಗೆ ಸೀಮಿತವಾಗಿದ್ದರು. 1980ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಆಯ್ಕೆಯಾದ ಎಂ. ರಾಜಶೇಖರಮೂರ್ತಿ ಅವರು ಯಳಂದೂರು, ಟಿ. ನರಸೀಪುರ, ಚಾಮುಂಡೇಶ್ವರಿಯಿಂದ ವಿಧಾಸಭೆಗೆ, ನಂತರ ಮೂರು ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
1984, 1989, 1996, 1999- ಹೀಗೆ ನಾಲ್ಕು ಬಾರಿ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಲೋಕಸಭೆಗೆ ಸೀಮಿತವಾಗಿದ್ದರು. 1991 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾದ ಚಂದ್ರಪ್ರಭಾ ಅರಸು ಅವರು ಅದಕ್ಕೂ ಮೊದಲು ಹುಣಸೂರಿನಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 1998, 2004 ರಲ್ಲಿ ಬಿಜೆಪಿ ಟಿಕೆಟ್ ಮೇಲೆ ಆಯ್ಕೆಯಾದ ಸಿ.ಎಚ್. ವಿಜಯಶಂಕರ್ ಅವರು 1994 ರಲ್ಲಿ ಹುಣಸೂರಿನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಹಾಲಿ ವಿಧಾನ ಪರಿಷತ್ ಸದಸ್ಯರು. 2009 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾದ ಎಚ್. ವಿಶ್ವನಾಥ್ ಅವರು ಇದಕ್ಕೂ ಮೊದಲು 1978, 1989, 1999 ರಲ್ಲಿ ಕೆ.ಆರ್. ನಗರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಚಾಮರಾಜನಗರದಿಂದ 1977ರಲ್ಲಿ ಆಯ್ಕೆಯಾಗಿದ್ದ ಬಿ. ರಾಚಯ್ಯ ಅವರು ಅದಕ್ಕೂ ಮೊದಲು ಚಾಮರಾಜನಗರ, ಸಂತೇಮರಹಳ್ಳಿಯಿಂದ, ನಂತರವೂ ಸಂತೇಮರಹಳ್ಳಿಯಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 1980, 1984, 1989, 1991, 1999 ರಲ್ಲಿ ಚಾಮರಾಜನಗರದಿಂದ ಆಯ್ಕೆಯಾಗಿದ್ದ ವಿ.ಶ್ರೀನಿವಾಸಪ್ರಸಾದ್ ಅವರು 2008, 2013 ರಲ್ಲಿ ನಂಜನಗೂಡಿನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 1996, 1998 ರಲ್ಲಿ ಚಾಮರಾಜನಗರದಿಂದ ಆಯ್ಕೆಯಾದ ಎ.ಸಿದ್ದರಾಜು, 2004 ರಲ್ಲಿ ಆಯ್ಕೆಯಾದ ಕಾಗಲವಾಡಿ ಶಿವಣ್ಣ ಲೋಕಸಭೆಗೆ ಸೀಮಿತರು. 2009 ರಲ್ಲಿ ಆಯ್ಕೆಯಾದ ಆರ್. ಧ್ರುವನಾರಾಯಣ 2004 ರಲ್ಲಿ ಸಂತೇಮರಹಳ್ಳಿ, 2008 ರಲ್ಲಿ ಕೊಳ್ಳೇಗಾಲದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.