ಮೈಸೂರು ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಅದು ಜಾಫರ್ ಷರೀಫ್ ಆಗಿರಬಹುದು ಅಥವಾ ಮತ್ಯಾರಾದರು ಆಗಿರಬಹುದು. ಒಟ್ಟಿನಲ್ಲಿ ಸೋಮವಾರ ತನಕ ಕಾಯುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ಶುಕ್ರವಾರ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಕ್ಕಾಗೆ ಹೋಗಿರುವ ಷರೀಫರು ಭಾನುವಾರ ಆಗಮಿಸುವರು. ಅವರು ಸ್ಪರ್ಧಿಸುವುದು ಖಚಿತ. ಈ ಬಗ್ಗೆ ಪಕ್ಷದ ವರಿಷ್ಠರೆ ತಿಳಿಸುವರು. ನೀವೆಲ್ಲ ಕಾದು ನೋಡಿ ಎನ್ನುತ್ತಿದ್ದಂತೆ, ಮಾಧ್ಯಮದವರು ನೀವು ಆಕಾಂಕ್ಷಿಗಳು ಎಂಬ ಮಾಹಿತಿ ಇದೆ ಎಂದಾಗ ಕಾದು ನೋಡಿ ಎಂದಷ್ಟೇ ಉತ್ತರಿಸಿದರು.
ಕಳೆದ 10 ವರ್ಷಗಳಲ್ಲಿ ದೇಶ ಆಳಿದ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಆ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರು ಚುನಾವಣೆಗೆ ನಿಲ್ಲಲು ಹೆದರುತ್ತಿದ್ದಾರೆ. ನಮ್ಮ ಪಕ್ಷ ರಾಜ್ಯದಲ್ಲಿ 15 ರಿಂದ 20 ಸೀಟು ಗೆಲ್ಲಲಿದೆ. ಇಂದು ಬಿಜೆಪಿ ಸೇರಿದಂತೆ ಮತೀಯ ಶಕ್ತಿಗಳು ಬೆಳೆದಿವೆ ಎಂದರೆ ಅದಕ್ಕೆ ಕಾಂಗ್ರೆಸ್ ಹಾಕಿದ ಮೇವು ಕಾರಣ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುವ ಜನರು ಜೆಡಿಎಸ್ ಬೆಂಬಲಿಸುವ ವಿಶ್ವಾಸವಿದೆ ಎಂದರು.
ಸಿಎಂ ದ್ವೇಷ ಸಾಧಿಸುತ್ತಿದ್ದಾರೆ; ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳಾದರೂ ಅಭಿವೃದ್ಧಿ ಮಾಡುತ್ತಿಲ್ಲ. ಹಾಸನದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದರೂ ಅದನ್ನು ನೀಗಿಸಲು 29 ಕೋಟಿ ಅನುದಾನ ಘೋಷಿಸಿದ್ದಾರೆಯೇ ಹೊರತು, ಬಿಡುಗಡೆ ಮಾಡಿಲ್ಲ. ಒಬ್ಬ ಮಾಜಿ ಪ್ರಧಾನಿಯನ್ನು ಸೋಲಿಸಲು ಸಿಎಂ ಹೋರಾಡುತ್ತಿದ್ದಾರೆ. ಹಾಸನದ ಅಭ್ಯರ್ಥಿ ಎ.ಮಂಜು ಬಿಜೆಪಿಯವರ ಕಾಲು ಕಟ್ಟುತ್ತಿದ್ದಾರೆ. ಮತೀಯ ಶಕ್ತಿಗಳಿಗೆ ಶರಣಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮೇಯರ್ ಎನ್.ಎಂ. ರಾಜೇಶ್ವರಿ, ಉಪಮೇಯರ್ ವಿ.ಶೈಲೇಂದ್ರ, ಪಾಲಿಕೆ ಸದಸ್ಯರಾದ ಸಂದೇಶ್ಸ್ವಾಮಿ, ಆರ್. ಲಿಂಗಪ್ಪ, ಕೆ.ಟಿ. ಚೆಲುವೇಗೌಡ, ನಗರಾಧ್ಯಕ್ಷ ರಾಜಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

