ಮೈಸೂರು

ಕುಕ್ಕರಹಳ್ಳಿ ಕೆರೆ ಸಮೀಪ ಕಾಂಗ್ರೆಸ್ ಮತಯಾಚನೆ

Published On :

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕುಕ್ಕರಹಳ್ಳಿ ಕೆರೆಗೆ ವಾಯುವಿಹಾರಕ್ಕೆ ಆಗಮಿಸುವ ಸಾರ್ವಜನಿಕರಲ್ಲಿ ಮತಯಾಚಿಸಿದರು.
ಸಾಮಾಜಿಕ ಕಳಕಳಿ ಮತ್ತು ಚಿಂತನಾ ಶಕ್ತಿಯುಳ್ಳ ಎಚ್.ವಿಶ್ವನಾಥ್ ಅವರನ್ನು ಜನತೆ ಬೆಂಬಲಿಸಬೇಕು ಎಂದು ಮನವಿ ಮಾಡಿದ ಪಕ್ಷದ ಕಾರ್ಯಕರ್ತರು, ವಿಶ್ವನಾಥ್ ಅವರು ಸಚಿವರಾಗಿ ಜಾರಿಗೆ ತಂದ ಅನೇಕ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ ಸಂಸದರಾದ ಬಳಿಕ ಈ ಭಾಗಕ್ಕೆ 14 ಹೊಸ ರೈಲುಗಳು, ವಿಮಾನ ನಿಲ್ದಾಣ ಕಾರ್ಯಾರಂಭ, ರಸ್ತೆ, ಸಮುದಾಯ ಭವನ ನಿರ್ಮಾಣ, ತಂಬಾಕು, ಕಾಫಿ ಬೆಳೆಗಾರರು ಮತ್ತು ಜೇನು ಸಾಕಾಣಿಕೆದಾರರ ಸಮಸ್ಯೆಗಳ ಕುರಿತು ಸ್ಪಂದಿಸಿರುವುದಾಗಿ ತಿಳಿಸಿದರು. ಈ ವೇಳೆ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಮಹದೇವ, ಮಾಜಿ ಮೇಯರ್‌ಗಳಾದ ಟಿ.ಬಿ. ಚಿಕ್ಕಣ್ಣ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮುಖಂಡರಾದ ಡಿ.ಸಿ. ಕಾಂತರಾಜು, ಡಿ.ಸಿ. ಚಂದ್ರಕುಮಾರ್, ಹೇಮಲತಾ ಇದ್ದರು.



ವಿದ್ಯುತ್ ಪೂರೈಕೆ ವ್ಯತ್ಯಯ ಇಂದು
ಮೈಸೂರು: ರಾಮಕೃಷ್ಣನಗರದ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಹುಡ್ಕೋ ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಈ ಕೆಳಕಂಡ ಪ್ರದೇಶಗಳಿಗೆ ಮಾ.27ರ ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ವಿ.ವಿ. ಮೊಹಲ್ಲಾ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ. ಬಿಇಎಂಎಲ್ ಲೇಔಟ್ ಶ್ರೀರಾಂಪುರ, ಎಲ್‌ಐಸಿ ಕಾಲೋನಿ ಶ್ರೀರಾಂಪುರ, ಬ್ಯಾಂಕ್ ಕಾಲೋನಿ ಶ್ರೀರಾಂಪುರ, ಮಧುವನ ಲೇಔಟ್, ಶ್ರೀರಾಂಪುರ 1ನೇ ಮತ್ತು 2ನೇ ಹಂತ, ದೇವಯ್ಯನಹುಂಡಿ, ಪ್ರೀತಿ ಲೇಔಟ್, ಮುನಿನಾರಾಯಣಪ್ಪ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಕಾಂಗ್ರೆಸ್ ಸೇರಿದ ಗೋಪಾಲ ಪೂಜಾರಿ
ಮೈಸೂರು: ಕರ್ನಾಟಕ ರಾಜ್ಯ ಮೂಲ ಅರಣ್ಯ ಆದಿವಾಸಿ ಜೇನು ಕುರುಬರ ಸಂಘದ ರಾಜ್ಯಾಧ್ಯಕ್ಷ ಗೋಪಾಲ ಪೂಜಾರಿ ಅವರು ಬಿಎಸ್ಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.ಈ ಸಂಬಂಧ ಬುಧವಾರ ಸುದ್ದಿಗೋಷ್‌ಠಿಯಲ್ಲಿ ಮಾತನಾಡಿದ ಗೋಪಾಲ ಪೂಜಾರಿ, ಕಳೆದ ಚುನಾವಣೆಯಲ್ಲಿ ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, 18,500 ಮತ ಪಡೆದಿದ್ದೆ. ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಆದಿವಾಸಿಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿರುವುದಾಗಿ ವಿವರಿಸಿದರು.ಸಂಸದರಾದ ಎಚ್. ವಿಶ್ವನಾಥ್, ಆರ್. ಧ್ರುವನಾರಾಯಣ ಅವರ ಜಯಕ್ಕಾಗಿ ಶಕ್ತಿ ಮೀರಿ ಶ್ರಮಿಸುವುದಾಗಿ ಅವರು ಹೇಳಿದರು.ಮುಖಂಡರಾದ ಜೆ.ಟಿ. ರಾಜಪ್ಪ, ಧರ್ಮ, ಜೆ.ಕೆ. ಪ್ರಕಾಶ್, ಜೆ.ಆರ್. ರಮೇಶ್ ಇದ್ದರು.
ತ.ನಾಡಿಗೆ ನೀರು ಬಿಡುಗಡೆ: ಖಂಡನೆ
ಮೈಸೂರು: ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಕಳೆದೆರಡು ವಾರಗಳಿಂದ ರಾಜ್ಯ ಸರ್ಕಾರ ಕದ್ದುಮುಚ್ಚಿ ನೀರು ಬಿಡುತ್ತಿದೆ ಎಂದು ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎ. ಶಿವಶಂಕರ್ ಆರೋಪಿಸಿದ್ದಾರೆ. ಎಚ್.ಡಿ. ಕೋಟೆ, ನಂಜನಗೂಡು, ಟಿ.ನರಸೀಪುರ, ಯಳಂದೂರು, ಕೊಳ್ಳೇಗಾಲ ವ್ಯಾಪ್ತಿಗೆ ಒಳಪಡುವ ಕಬಿನಿ ಬಲದಂಡೆ ನಾಲೆಗೆ ನೀರು ಹರಿಸದೆ ಜನ ಜನುವಾರಿಗೆ ತೊಂದರೆ ಆಗುತ್ತಿದೆ. ಕಬಿನಿ ಮತ್ತು ಕೆಆರ್‌ಎಸ್ ತಮಿಳುನಾಡಿನ ನೀರು ಶೇಖರಣ ತೊಟ್ಟಿಯಲ್ಲ. ಕೂಡಲೇ ನೀರು ನಿಲ್ಲಿಸದಿದ್ದರೆ ಕಾಡಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಬನ್ನಿಮಂಟಪ ಕಾರ್ಖಾನೆಯಲ್ಲಿ ಬೆಂಕಿ
ಮೈಸೂರು: ವಿದ್ಯುತ್ ಸಾರ್ಟ್ ಸರ್ಕ್ಯೂಟ್‌ನಿಂದ ಮರದ ಹೊಟ್ಟು ತಯಾರಿಸುವ ಕಾರ್ಖಾನೆಗೆ ಬೆಂಕಿ ಬಿದ್ದಿರುವ ಘಟನೆ ಬನ್ನಿಮಂಟಪ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನಡೆದಿದೆ. ಕರ್ನಾಟಕ ರೈಸ್ ಮಿಲ್ ಪಕ್ಕದ ಮೊಹಮ್ಮದ್ ರಿಯಾಜ್ ಎಂಬವವರಿಗೆ ಸೇರಿದ ಕಾರ್ಖಾನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದು, ಯಂತ್ರಗಳಿಗೆ ಹಾನಿಯಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ರಮ್ಯಾ ಪೂಜೆ
ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದೆ ಹಾಗೂ ನಟಿ ರಮ್ಯಾ ದಿವ್ಯಸ್ಪಂದನ ಅವರು ಬುಧವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಂಡ್ಯಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.