ಯುಗಾದಿ ಸಂಭ್ರಮ
ಮೈಸೂರು: ಸುತ್ತೂರ ಶ್ರೀಕ್ಷೇತ್ರದಲ್ಲಿ ಯುಗಾದಿ, ಅಲ್ಲಮಪ್ರಭು ಜಯಂತಿ ಹಾಗೂ ಪಂಚಾಂಗ ಪಠಣ ಕಾರ್ಯಕ್ರಮ ಮಾ.31ರಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಆಡಳಿತಾಧಿಕಾರಿ ಎಸ್. ಶಿವಕುಮಾರಸ್ವಾಮಿ ಹೇಳಿದ್ದಾರೆ. ಅಂದು ಬೆಳಗಿನ ಜಾವ 3ಕ್ಕೆ ಮಹಾರುದ್ರಾಭಿಷೇಕ, ಬೆಳಗ್ಗೆ 6ಕ್ಕೆ ಸಹಸ್ರ ಬಿಲ್ವಾರ್ಚನೆ ಮತ್ತು 7ಕ್ಕೆ ಮಹಾಮಂಗಳಾರತಿ. ಶಿವರಾತ್ರೀಶ್ವರ ಶಿವಯೋಗಿ ಕರ್ತೃ ಗದ್ದುಗೆ, ಮಹದೇಶ್ವರ, ಸೋಮೇಶ್ವರ, ವೀರಭದ್ರೇಶ್ವರ ಮತ್ತು ನಾರಾಯಣಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, 7.30ಕ್ಕೆ ಬೆಳ್ಳಿರಥ ಪ್ರಾಕಾರೋತ್ಸವ ನೆರವೇರಲಿದೆ. ಬೆಳಗ್ಗೆ 6.10ಕ್ಕೆ ಮಠ ಹಾಗೂ ಗ್ರಾಮದ ಹೊನ್ನೇರುಬಂಡಿಗಳು, ಸುತ್ತೂರು ಮಠದಿಂದ ಮಂಗಳವಾದ್ಯ ಹಾಗೂ ಕಲಾತಂಡಗಳೊಂದಿಗೆ ಹೊರಟು, ಜಮೀನುಗಳಿಗೆ ಹೋಗಿ ಬೇಸಿಗೆ ಕೃಷಿಗೆ ಚಾಲನೆ ನೀಡಿ ಗದ್ದುಗೆಗೆ ತೆರಳಿ, ಮಠಕ್ಕೆ ಹಿಂದಿರಗಲಿವೆ. ಬೆಳಗ್ಗೆ 10.30ಕ್ಕೆ ಅಲ್ಲಮಪ್ರಭು ಜಯಂತಿ ಮಹೋತ್ಸವ ಅಂಗವಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ನೀಲಗಿರಿ ಎಂ.ತಳವಾರ ಉಪನ್ಯಾಸ ನೀಡುವರು. ಬೆಳಗ್ಗೆ 11.30ಕ್ಕೆ ಜಯನಾಮ ಸಂವತ್ಸರದ ಸುತ್ತೂರು ಶಿವರಾತ್ರೀಶ್ವರ ಪಂಚಾಂಗದ ಪರಿಚಯ ಜಿ.ಎಚ್. ಇಮ್ರಾಪುರ್ ಮಾಡಿಕೊಡುವರು. ಪಂಚಾಂಗ ಪಠಣವನ್ನು ಪಂಚಾಂಗಕರ್ತರಾದ ಸಿದ್ಧಾಂತಿ ಡಾ.ಕೆ.ಜಿ. ಪುಟ್ಟಹೊನ್ನಯ್ಯ ಮಾಡುವರು. ನಂತರ ಪ್ರಶ್ನೋತ್ತರಕ್ಕೆ ಅವಕಾಶವಿರುತ್ತದೆ. ಸುತ್ತೂರು ಶಾಲೆಯ ಸಂಗೀತ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಚನಗಾಯನ ನಡೆಸಿಕೊಡುವರು. ಅಲ್ಲದೆ, ಇಂದು ಶ್ರೀಕ್ಷೇತ್ರದಲ್ಲಿ ಅಮಾವಾಸ್ಯೆ ಪೂಜೆ ಏರ್ಪಡಿಸಿದ್ದು, ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಆಗಮಿಸುವಂತೆ ಕೋರಿದ್ದಾರೆ.
ಲೋಕಾಯುಕ್ತ ಬಲೆಗೆ ಪಿಡಿಒ
ಮೈಸೂರು: ಖಾತಾ ಬದಲಾವಣೆ ಮತ್ತು ಅಸೆಸ್ಮೆಂಟ್ ನೀಡಲು ಲಂಚ ಸ್ವೀಕರಿಸುತ್ತಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಹೊಸ ಅಗ್ರಹಾರ ಪಿಡಿಒ ವೆಂಕಟೇಶ್ ಸಿಕ್ಕಿಬಿದ್ದವರು. ಹೊಸ ಅಗ್ರಹಾರ ಗ್ರಾಪಂ ವ್ಯಾಪ್ತಿಯ ಚಿಕ್ಕವಡ್ಡರಗುಡಿ ನಿವಾಸಿ ತಿಮ್ಮಶೆಟ್ಟಿ ಎಂಬುವರ ಪುತ್ರ ಕೃಷ್ಣಶೆಟ್ಟಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕಾಲೇಜು ಮೈದಾನದಲ್ಲಿ ರು.9,000 ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

