ಮೈಸೂರು

ಕಮೀಷನರ್ ಕಚೇರಿಗೆ ಹೊಸ ಕಟ್ಟಡ

Published On :

ಬಿ. ಶೇಖರ್ ಗೋಪಿನಾಥಂ
ಮೈಸೂರು:
ಸಾಂಸ್ಕೃತಿಕ ನಗರಿ ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿಗಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ 17 ಕೋಟಿ ಅನುದಾನ ಸಿಕ್ಕಿದೆ. ಇದರೊಂದಿಗೆ ಸುಸಜ್ಜಿತ ಪೊಲೀಸ್ ಆಯುಕ್ತರ ಕಚೇರಿ ನಿರ್ಮಾಣವಾಗಲಿದೆ.
ಮೈಸೂರಿನ ನಜರ್‌ಬಾದ್‌ನ ಮಿರ್ಜಾ ರಸ್ತೆಯಲ್ಲಿರುವ ಪೊಲೀಸ್ ಬ್ಯಾಂಡ್ ಹೌಸ್‌ನಲ್ಲಿ ಪೊಲೀಸ್ ಆಯುಕ್ತರ ಕಚೇರಿಯು ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಡ್ ಹೌಸ್ ಪಕ್ಕದಲ್ಲಿ ಮೂರು ಪ್ರತ್ಯೇಕ ಕಟ್ಟಡಗಳನ್ನು ಸಹ ನಿರ್ಮಿಸಲಾಗಿದ್ದು, ಇಲ್ಲಿ ವಿವಿಧ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗಾಗಿ ಸುಸಜ್ಜಿತ ಪೊಲೀಸ್ ಆಯುಕ್ತರ ಕಚೇರಿ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗ ಕಟ್ಟಡ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ.
ರಾಜ್ಯ ಸರ್ಕಾರವು ಹೊಸ ಕಟ್ಟಡ ನಿರ್ಮಾಣಕ್ಕಾಗಿ 17 ಕೋಟಿ ಅನುದಾನ ಮಂಜೂರು ಮಾಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮವು ಹೊಸ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದೆ. ಈಗಿರುವ ಪೊಲೀಸ್ ಆಯುಕ್ತರ ಕಚೇರಿ ಎದುರಿನ ಮೈದಾನದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಲೋಕಸಭಾ ಚುನಾವಣೆ ಮತಎಣಿಕೆ ಆದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ಹೊಸ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಹೊಸ ಕಟ್ಟಡವು ಸುಮಾರು 44 ಸಾವಿರ ಚದರಡಿ ವಿಸ್ತೀರ್ಣ ಇರುತ್ತದೆ. ಮುಂದಿನ 20 ವರ್ಷಗಳ ದೃಷ್ಟಿಯಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಐವರು ಡಿಸಿಪಿಗಳ ಕಚೇರಿ, ವಿದೇಶಿಯರು, ಪಾಸ್‌ಪೋರ್ಟ್ ಘಟಕ, ಸಿಎಸ್‌ಬಿ ಸೇರಿದಂತೆ ವಿವಿಧ ಘಟಕಗಳಿಗೆ ಹೊಸ ಕಟ್ಟಡದಲ್ಲಿ ಸ್ಥಳಾವಕಾಶ ಇರುತ್ತದೆ. ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರವಾದ ಬಳಿಕ ಪೊಲೀಸ್ ಬ್ಯಾಂಡ್‌ಗೆ ಈಗಿರವ ಕಚೇರಿಯನ್ನು ಬಿಟ್ಟುಕೊಡಲಾಗುವುದು ಎಂದದರು.
ಪೊಲೀಸ್ ಆಯುಕ್ತರ ಹೊಸ ಕಟ್ಟಡ ಶಂಕುಸ್ಥಾಪನೆ ಜತೆಗೆ ಜಲಪುರಿ, ಜ್ಯೋತಿನಗರ, ಜಾಕಿ ಕ್ವಾಟರ್ಸ್‌ನಲ್ಲಿ ಸಿಎಆರ್ ಮತ್ತು ನಗರ ಸಿವಿಲ್ ಪೊಲೀಸರಿಗಾಗಿ 53 ಕೋಟಿ ವೆಚ್ಚದಲ್ಲಿ 396 ಕ್ವಾಟರ್ಸ್ ನಿರ್ಮಾಣ, ಸಿಎಆರ್ ಮುಖ್ಯ ಕಚೇರಿಗಾಗಿ 5.50 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಹಾಗೂ ಪೊಲೀಸ್ ಪಬ್ಲಿಕ್ ಶಾಲೆಗಾಗಿ 22 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸುವರು. ಮತಎಣಿಕೆ ನಂತರ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಅವರು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.