ಮೈಸೂರು

ಹೊಗೆಸೊಪ್ಪು ಬಿತ್ತನೆ ಕಾರ್ಯ ಚುರುಕು

Published On :

ಪಿ.ಎನ್. ಸುಬ್ರಮಣ್ಯ
ಪಿರಿಯಾಪಟ್ಟಣ:
ಕೆಲವು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿರುವುದರಿಂದ ಪ್ರಮುಖ ಹಾಗೂ ವಾಣಿಜ್ಯ ಬೆಳೆ ಹೊಗೆಸೊಪ್ಪು ಕೃಷಿ ಚಟುವಟಿಕೆಯಲ್ಲಿ ರೈತರು ಹರ್ಷದಿಂದಲೇ ತೊಡಗಿದ್ದಾರೆ.
ತಾಲೂಕಿನಲ್ಲಿ ಸುಮಾರು 45 ಸಾವಿರ ಹೆಕ್ಟೆರ್ ಪ್ರದೇಶ ಕೃಷಿ ಚಟುವಟಿಕೆಗೆ ಬಳಸಲಾಗುತ್ತಿದ್ದು, ಅದರಲ್ಲಿ 30 ಸಾವಿರ ಹೆಕ್ಟೆರ್‌ಗೂ ಹೆಚ್ಚು ಪ್ರದೇಶವನ್ನು ತಂಬಾಕು ಕೃಷಿಗೆ ಬಳಸಲಾಗುತ್ತಿದೆ. ಕಳೆದ ವರ್ಷ ರಾಜ್ಯದಲ್ಲಿ 102 ಮಿಲಿಯನ್ ತಂಬಾಕು ಬೆಳೆಯಲು ನಿಗದಿಪಡಿಸಿತ್ತು. ಪ್ರಸ್ತುತ 2014-15ನೇ ಸಾಲಿಗೆ ಅದನ್ನು 104 ಮಿಲಿಯನ್‌ಗೆ ನಿಗದಿಪಡಿಸಿರುವುದು ರಾಜ್ಯದ ರೈತರ ಪಾಲಿಗೆ ಅಲ್ಪ ಮಟ್ಟದ ಹರ್ಷದ ವಿಚಾರವಾಗಿದ್ದು, ತಾಲೂಕಿನ ರೈತರು ಈ ಬಾರಿ ತಂಬಾಕು ಕೃಷಿಗೆ ಮತ್ತಷ್ಟು ಒತ್ತು ಕೊಡುತ್ತಿದ್ದಾರೆ.
ತಂಬಾಕು ಮಂಡಳಿಯ ಶಿಫಾರಸಿನಂತೆ ರೈತರು ಸಸಿಗಳನ್ನು ಟ್ರೇಗಳಲ್ಲಿ ಬೆಳೆಸುತ್ತಿದ್ದಾರೆ. ಕಳೆದ ವರ್ಷದವರೆಗೂ ಕೆಲವು ರೈತರು ಮಾತ್ರ ಟ್ರೇಗಳಲ್ಲಿ ಸಸಿಗಳನ್ನು ಬೆಳಸುತ್ತಿದ್ದರು. ಈ ಬಾರಿ ಅದು ಹೆಚ್ಚಾಗಿದೆ. ಅಲ್ಲದೆ ರೈತರು ಮತ್ತಷ್ಟು ವೈಜ್ಞಾನಿಕ ವಿಧಾನಗಳ ಮೂಲಕ ತಂಬಾಕು ಬೆಳೆಯಲು ಮುಂದಾಗಿದ್ದಾರೆ.
ಕೂಲಿ ಕಾರ್ಮಿಕರ ಕೊರತೆ: ತಾಲೂಕಿನಲ್ಲಿ ಕೃಷಿ ಚಟುವಟಿಕೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಕಾರ್ಮಿಕರ ಬೇಡಿಕೆ ಹೆಚ್ಚಿದ್ದು, ಅಂತೆಯೇ ತಂಬಾಕು ಬೆಳೆಗಾರರಿಗೂ ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರ ಕೊರತೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ತಂಬಾಕು  ಸಸಿಮಡಿ ಕೆಲಸದಿಂದ ಹಿಡಿದು ತಂಬಾಕನ್ನು ಬ್ಯಾರನ್‌ನಲ್ಲಿ ಹದಗೊಳಿಸಿ ಮಾರುಕಟ್ಟೆಗೆ ಬಿಡುವವರೆಗೂ ಕೂಲಿ ಕಾರ್ಮಿಕರ ಅಗತ್ಯ ಇದ್ದೇ ಇರುತ್ತದೆ. ಪ್ರಸ್ತುತ ತಾಲೂಕಿನಲ್ಲಿ ಪ್ರತಿ ಕೂಲಿ ಕಾರ್ಮಿಕನಿಗೆ ದಿನಕ್ಕೆ 400ರಿಂದ 600 ಹಾಗೂ ಮಹಿಳಾ ಕೂಲಿ ಕಾರ್ಮಿಕರಿಗೆ 300ರಿಂದ 400 ಕೂಲಿ ನಡೆಯುತ್ತಿದ್ದು, ರೈತರಿಗೆ ಕೂಲಿ ಕಾರ್ಮಿಕರ ಕೊರತೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಮಕ್ಕಳ ಬಳಕೆ: ಪ್ರಸ್ತುತ ಶಾಲೆಗಳಿಗೆ ರಜೆ ಇರುವ ಕಾರಣ ರೈತರು ತಮ್ಮ ಮಕ್ಕಳನ್ನೂ ಸಹ ಕೃಷಿ ಚಟುವಟಿಕೆಗಳಲ್ಲಿ ಬಳಸುತ್ತಿದ್ದಾರೆ. ಅಲ್ಲದೆ ಕೆಲವು ಭಾಗಗಳಲ್ಲಿ ಶಾಲಾ ಮಕ್ಕಳು ಸಹ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ತಂಬಾಕು ಕೃಷಿಯಲ್ಲಿ ತೊಡಗುವ ಮಕ್ಕಳಿಗೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ ಸಂಗತಿ ಈ ಬಗ್ಗೆ ರೈತರಿಗೆ ಸಂಬಂಧ ಪಟ್ಟ ಕೃಷಿ ಇಲಾಖೆ ಅಥವಾ ತಂಬಾಕು ಮಂಡಳಿಯವರು ತಿಳಿವಳಿಕೆ ಹೇಳುವ ಅಗತ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.