ತಾರತಮ್ಯ ನಿವಾರಣೆಗೆ ಏಕರೂಪ ಶಿಕ್ಷಣ ಅಸ್ತ್ರ
ಮೈಸೂರು: ಇಂದಿನ ಶಿಕ್ಷಣ ಕ್ಷೇತ್ರದಲ್ಲಿನ ತಾರತಮ್ಯ ನಿವಾರಣೆಗೆ ಏಕರೂಪ ಶಿಕ್ಷಣವೇ ಸರಿಯಾದ ಅಸ್ತ್ರ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎ.ಎಸ್. ರಾಮಪ್ಪ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ಅರ್ಹತಾ ಪರೀಕ್ಷಾ (ಟಿಇಟಿ) ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವತ್ರಿಕವಾಗಿದ್ದ ಶಿಕ್ಷಣ ರಂಗವು ಇಂದು ವ್ಯಾಣಿಜ್ಯೀಕರಣವಾಗುತ್ತಿರುವುದು ನೋವಿನ ಸಂಗತಿ. ಕಡ್ಡಾಯ ಹಾಗೂ ಉಚಿತ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದರೂ ಹಾಗೂ ಅನೇಕ ಸುಧಾರಣೆಗಳನ್ನು ಅಳವಡಿಸಿದ್ದರೂ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿನ ಅಂತರ ಕಡಿಮೆಯಾಗಿಲ್ಲ. ಉಳ್ಳವರು ಹಾಗೂ ಇಲ್ಲದವರಿಗೆ ಒಂದೇ ರೀತಿಯ ಶಿಕ್ಷಣ ದೊರಕುತ್ತಿಲ್ಲ. ಇದನ್ನು ಹೋಗಲಾಡಿಸಬೇಕಾದರೆ ಏಕರೂಪ ಶಿಕ್ಷಣ ಜಾರಿಗೆ ತರಬೇಕು ಎಂದರು.
ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸರ್ಕಾರ ಅನೇಕ ಸವಲತ್ತುಗಳನ್ನು ಕಲ್ಪಿಸಿದ್ದರೂ ಪೋಷಕರು ಇಂಗ್ಲಿಷ್ ವ್ಯಾಮೋಹದಿಂದ ಆ ಶಾಲೆಗಳಿಂದ ದೂರ ಸರಿಯುತ್ತಿದ್ದಾರೆ. ಇಂಗ್ಲಿಷ್ ಕಲಿಕೆ ಅನಿವಾರ್ಯ. ಆದರೆ ಒಂದು ಹಂತದವರಿಗೆ ಮಾತೃಭಾಷೆಯ ಕಲಿಕೆ ಕಡ್ಡಾಯವಾಗಬೇಕು. ಸರ್ಕಾರ 21 ಸಾವಿರ ಕೋಟಿ ಶಿಕ್ಷಣದ ಅಭಿವೃದ್ಧಿಗೆ ಮೀಸಲಿರಿಸಿದೆ ಎಂದು ತಿಳಿಸಿದರು.
ಶಿಕ್ಷಣದಲ್ಲಿ ಅನೇಕ ಸುಧಾರಣೆ: ಶಿಕ್ಷಣ ಕ್ಷೇತ್ರವು ಕಳೆದ 50 ವರ್ಷಗಳಲ್ಲಿ ಅನೇಕ ಸುಧಾರಣೆಗಳನ್ನು ಕಂಡಿದೆ. ಇಂದು ಶಾಲೆಗಳಿಗೆ ಮೂಲ ಸೌಲಭ್ಯದ ಕೊರತೆಗಿಂತ ಶಿಕ್ಷಕರ ಕೊರತೆ ಎದುರಾಗಿದೆ. ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡ ಅವರು ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಕಲ್ಪಿಸುವಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದವರು. ದೇಶ ಕಟ್ಟುವಲ್ಲಿ ಶಿಕ್ಷಕರ ವೃತ್ತಿ ಮಹತ್ವವಾದುದು. ಇಂತಹ ವೃತ್ತಿಗೆ ಪೂರಕವಾದ ತರಬೇತಿಯನ್ನು ಮುಕ್ತ ವಿವಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್, ನಾಗರಿಕತೆಯ ನಿರ್ಮಾಣದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೇಳಿರುವುದನ್ನು ಸ್ಮರಿಸಬೇಕು. ಈ ದಿಸೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸುವುದರ ಜತೆಗೆ ನಿರಂತರ ಕಲಿಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ರಂಗಕರ್ಮಿ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಎಸ್. ಉಮೇಶ್ ತರಬೇತಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶೈಲೇಶ್ರಾಜೇ ಅರಸ್ ನಿರೂಪಿಸಿದರು.
ಶಿಕ್ಷಕ ವೃತ್ತಿಗೆ ಸ್ಪರ್ಧೆ ಇರಬಾರದು. ವಿದ್ಯಾರ್ಥಿಗಳ ಹಾಗೂ ಬೋಧನೆ ಬಗ್ಗೆ ಪ್ರೀತಿ ಇಲ್ಲದೆ ಹೋದರೆ ಅಂಥವರು ನಿಜವಾದ ಶಿಕ್ಷಕರಾಗಲಾರರು. ಇಂದಿನ ಸಮಕಾಲೀನ ಬದುಕು ಸ್ಪರ್ಧೆಯಲ್ಲಿ ನಿರ್ಣಯವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಿಕ್ಷಕ ವೃತ್ತಿಯ ಆಯ್ಕೆಗೂ ಇಂತಹ ಸ್ಪರ್ಧೆ ಅನಿವಾರ್ಯ.
- ಪ್ರೊ.ಎಚ್.ಎಸ್. ಉಮೇಶ್, ನಿವೃತ್ತ ಪ್ರಾಂಶುಪಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

