ಗಂಗಾ ಪರಮೇಶ್ವರಿ ಜಯಂತ್ಯುತ್ಸವಕ್ಕೆ ವಾಸು ಚಾಲನೆ
ಮೈಸೂರು: ಜಗತ್ತಿನ ಜೀವಚೈತನ್ಯವಾಗಿರುವ ಗಂಗಾ ಮಾತೆಯ ಸ್ಮರಣೆಗಾಗಿ ಏರ್ಪಡಿಸಿದ್ದ ಗಂಗಾ ಪರಮೇಶ್ವರಿ ಜಯಂತ್ಯುತ್ಸವವನ್ನು ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರು ರಥ ಎಳೆಯುವ ಮೂಲಕ ಮಂಗಳವಾರ ಉದ್ಘಾಟಿಸಿದರು.
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಅಮೃತೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ತಿಲಕನಗರದ ಶ್ರೀ ಗಂಗಾಮತಸ್ಥರ ಹತ್ತೂ ಜನಗಳ ಸಂಘವು ಏರ್ಪಡಿಸಿದ್ದ ಈ ಉತ್ಸವದ ಅಂಗವಾಗಿ ವಿಶೇಷ ಪೂಜೆ ಹಾಗೂ ಹೋಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ವಾಸು, ಮೈಸೂರಿನ ಗಂಗಾ ಮತಸ್ಥರು ಸೇರಿ ಗಂಗಾ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಅದರಲ್ಲೂ ವಿಶೇಷವಾಗಿ ತಮ್ಮ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ತಿಲಕನಗರದ ಮುಖಂಡರು ಒಟ್ಟಾಗಿ ಇಂತಹ ಉತ್ಸವ ಹಮ್ಮಿಕೊಂಡಿದ್ದಾರೆ. ಇದು ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು.
ಜಿಲ್ಲಾ ಕಾಂಗ್ರೆಸ್ ಯುವ ಸಮಿತಿ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯ್ಕುಮಾರ್, ವಿಶ್ವಮಾನವ ವಿದ್ಯಾರ್ಥಿ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ಗೌಡ, ಕಾಂಗ್ರೆಸ್ ಮುಖಂಡರಾದ ಜಗನ್ನಾಥ್, ಸಂಘದ ಅಧ್ಯಕ್ಷ ಶಂಕರ್, ಉಪಾಧ್ಯಕ್ಷ ಪಿ.ನಾಗೇಂದ್ರ, ಸೋಮಣ್ಣ, ಕಾರ್ಯದರ್ಶಿ ಆರ್. ಮದನ್ ಕುಮಾರ್, ಸಹ ಕಾರ್ಯದರ್ಶಿ ಡಿ. ಲಕ್ಷ್ಮಣ್, ಖಜಾಂಚಿ ಆರ್.ಗಿರೀಶ್, ಮುಖಂಡರಾದ ದಾಸ್ ಪ್ರಕಾಶ್, ರಾಜು, ಸಿದ್ದರಾಜು, ಮಂಜುನಾಥ್ ಮತ್ತಿತರರು ಇದ್ದರು. ನಂತರ ಅಲ್ಲಿಂದ ತೆರಳಿದ ಗಂಗಾ ಪರಮೇಶ್ವರಿ ವಿಗ್ರಹವನ್ನೊತ್ತ ಅಲಂಕೃತ ಉತ್ಸವದಲ್ಲಿ ಜಾನಪದ ಕಲಾತಂಡಗಳು, ಕಳಸ ಹೊತ್ತ ಮಹಿಳೆಯರು ಭಾಗವಹಿಸಿದ್ದರು.
ತಡವಾಗಿ ಬಂದ ಸಚಿವ...
ಗಂಗಾ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಉತ್ಸವವನ್ನು ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರು ಉದ್ಘಾಟಿಸಬೇಕಿತ್ತು. ಮಧ್ಯಾಹ್ನ 1 ಕ್ಕೆ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಒಂದೂವರೆ ಗಂಟೆ ತಡವಾದರೂ ಸಚಿವರು ಬಾರದ ಕಾರಣ ಸಂಘಟಕರು ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರಿಂದ ಉದ್ಘಾಟನೆ ನೆರವೇರಿಸಿದರು. ನಂತರ ಮೆರವಣಿಗೆ ಹೊರಟಾಗ ಸಚಿವರು ಆಗಮಿಸಿ ಸ್ವಲ್ಪ ದೂರ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಕಾಲದಲ್ಲಿ ಮಳೆಯಾಗಿ ನಾಡಿನಲ್ಲಿ ಸಮೃದ್ಧಿಯಾಗಿ ಬೆಳೆಯಾಗಲಿ ಎನ್ನುವ ಉದ್ದೇಶದಿಂದ ಗಂಗಾ ಜಯಂತಿ ಆಚರಿಸಲಾಗುತ್ತಿದ್ದು, ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

