ಬೆಂಗಳೂರು ಆತ್ಮಹತ್ಯೆಯ 'ಸ್ವರ್ಗ'
ಕ.ಪ್ರ.ವಾರ್ತೆ ಮೈಸೂರು ಮೇ 11
ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಪಟ್ಟಿಯಲ್ಲಿ ಬೆಂಗಳೂರು ನಗರ ನಂ. 2ನೇ ಸ್ಥಾನದಲ್ಲಿದ್ದು, ಮುಂದಿನ ಮೂರು ವರ್ಷಗಳಲ್ಲಿ 1ನೇ ಸ್ಥಾನಕ್ಕೆ ಬಂದರೂ ಬರಬಹುದು ಎಂದು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಡಾ. ಅಶೋಕ್ ಪೈ ಹೇಳಿದರು.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಹಿತಿ ಪ್ರಕಾರ ದೇಶದಲ್ಲಿ ಒಂದು ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಸರಾಸರಿ ಶೇ.35ರಷ್ಟು ಇದೆ. ಅದೇ ಕರ್ನಾಟಕದ ಬೆಂಗಳೂರಿನಲ್ಲಿ ಇವರ ಸಂಖ್ಯೆ ಶೇ.57ರಷ್ಟಿದೆ (ದಾಖಲಾಗದೆ ಇರುವ ಪ್ರಕರಣಗಳು ಇನ್ನಷ್ಟು ಇವೆ). ಕಳೆದ 25 ವರ್ಷಗಳ ಹಿಂದೆ ಬೆಂಗಳೂರು 27ನೇ ಸ್ಥಾನದಲ್ಲಿತ್ತು. ಈಗ 2ನೇ ಸ್ಥಾನದಲ್ಲಿದ್ದು, ಮುಂದಿನ ಮೂರು ವರ್ಷಗಳಲ್ಲಿ 1ನೇ ಸ್ಥಾನಕ್ಕೆ ಬರಬಹುದು. ಪ್ರತಿ 3 ಗಂಟೆಗೆ ಒಬ್ಬ ವ್ಯಕ್ತಿಗೆ ಆತ್ಮಹತ್ಯೆ ವಿಚಾರ ಹಾದು ಹೋಗುತ್ತದೆ. ಪ್ರತಿ 8 ಗಂಟೆಗೆ ಆತ್ಮಹತ್ಯೆ ಬಗ್ಗೆಯೇ ವ್ಯಕ್ತಿ ಚಿಂತಿಸುತ್ತಾನೆ. ಪ್ರತಿ 18 ಗಂಟೆಗೆ ಆತ್ಮಹತ್ಯೆ ಪ್ರಯತ್ನ ನಡೆಯುತ್ತದೆ. ಅದೇ ಪ್ರತಿ 22 ಗಂಟೆಗೆ ಆತ್ಮಹತ್ಯೆ ಯಶಸ್ವಿಯಾಗಿ ನಡೆದೇ ಹೋಗುತ್ತದೆ ಎಂದರು.
ಅವರ ಪ್ರಕಾರ, ಕ್ರಿಮಿನಾಲಜಿ ಬ್ಯೂರೋ ಇಂತಹ ಮಾಹಿತಿಯನ್ನು ಹೊರ ಹಾಕಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯು ಸರ್ಕಾರಕ್ಕೆ ಒಂದಿಷ್ಟು ಸಲಹೆಗಳನ್ನು ನೀಡಿದೆ. ಜತೆಗೆ ಕಳೆದ ವರ್ಷವೇ ಕೆಲ ಶಿಫಾರಸುಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲೂ ಶಿಫಾರಸುಗಳನ್ನು ಜಾರಿಗೆ ತರಲು ಮುಂದಾಗಿದೆ. ಮಾನಸಿಕ ಆರೋಗ್ಯ ಕಾಯಿದೆ 1987 ಮತ್ತು ರಾಜ್ಯ ಮಾನಸಿಕ ಆರೋಗ್ಯ ನಿಯಮ 2012ರ ಅನ್ವಯ ಸಮಾಜದ ಎಲ್ಲಾ ವರ್ಗದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲು ಸರ್ಕಾರ ತೀರ್ಮಾನಿಸಿದೆ.
ಅದರ ಮೊದಲ ಭಾಗವಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಒಟ್ಟು 60 ಹಾಸಿಗೆಗಳುಳ್ಳ ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಡೇ ಕೇರ್ ಮತ್ತು ಪುನರ್ ವಸತಿ ಕೇಂದ್ರಗಳನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲು ವಾರ್ಷಿಕ 57,85,200 ಅಂದಾಜು ವೆಚ್ಚ ಉಂಟಾಗುತ್ತದೆ. 2013-14ನೇ ಸಾಲಿನ ಬಜೆಟ್ ಪ್ರಕಾರ ಅಂದಾಜು 337.50 ಲಕ್ಷ ಅನುದಾನ ಒದಗಿಸಲು ಹಣಕಾಸು ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ. ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಮತ್ತು ಪುನರ್ ವಸತಿ ಸೌಲಭ್ಯ ನೀಡಲಿದ್ದು, ಮಾನಸಿಕ ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ಕೌನ್ಸೆಲಿಂಗ್ ನೀಡಲಾಗುತ್ತದೆ. ಜತೆಗೆ ರೋಗಿಗಳಿಗೆ ಟೈಲರಿಂಗ್, ಕ್ಯಾಂಡಲ್ಗಳ ತಯಾರಿಕೆ, ಬುಟ್ಟಿ ಹೆಣೆಯುವುದು, ತೋಟಗಾರಿಕೆ ಮುಂತಾದ ಬುದ್ಧಿಶಕ್ತಿ ಕೌಶಲ್ಯದ ತರಬೇತಿ ನೀಡಲಾಗುತ್ತದೆ.
ವಿದ್ಯಾರ್ಥಿಗಳ ಬಗೆಗೂ ಕಾಳಜಿ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಎದುರಿಸಿರುವ ವಿದ್ಯಾರ್ಥಿಗಳು ಭಯದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಕಂಡು ಬರುತ್ತಿದೆ. ಕೆಲವರು ಪರೀಕ್ಷೆ ಬರೆದು ಫಲಿತಾಂಶ ಬರುವ ಮುನ್ನವೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಚಿತ್ತಚಾಂಚಲ್ಯ, ಮಾನಸಿಕ ದುರ್ಬಲ, ಆತಂಕ ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಅಸಹಾಯಕತೆ, ಅಭದ್ರತೆ, ಅನಿಶ್ಚಿತತೆ ಕಾಡುವುದರಿಂದ ಇಂತಹ ಘಟನೆಗಳನ್ನು ಸಂಭವಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆ ಜೀವನದ ಕೊನೆಯ ಹಂತ ಎಂದು ತಿಳಿಯಬಾರದು. ಅದನ್ನು ಒಂದು ಘಟನೆಯನ್ನಾಗಿ ತೆಗೆದುಕೊಂಡು ನಿಭಾಯಿಸಬೇಕು ಎಂದರು.
ಪ್ರತಿ ಶಾಲೆಗಳಲ್ಲೂ ಸಹ ಅಲ್ಲಿನ ಶಿಕ್ಷಕರಿಗೆ ತರಬೇತಿ ನೀಡಿ ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡುವಂತೆ ಸರ್ಕಾರ ಆದೇಶ ನೀಡಬೇಕು. ಒತ್ತಡ ನಿರ್ವಹಣೆ, ಲೈಂಗಿಕ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು. ಲೈಂಗಿಕ ಶಿಕ್ಷಣ 5ನೇ ತರಗತಿಯಿಂದಲೇ ಆರಂಭವಾಗಬೇಕು. ಇತ್ತೀಚಿನ ವರ್ಷಗಳಲ್ಲಿ ಮಾನೋವೈದ್ಯರ ಸಂಖ್ಯೆ ಕಡಿಮೆ ಇದ್ದು, ರಾಜ್ಯದಲ್ಲಿ 30 ಎಂಡಿ ಹಾಗೂ 40 ಡಿಪಿಎಂ ವೈದ್ಯರಿದ್ದಾರೆ. ಈ ಕೊರತೆಯನ್ನು ರಾಜ್ಯ ಸರ್ಕಾರ ಭರ್ತಿ ಮಾಡಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

