ಮೈಸೂರು

ಶಿಳ್ಳೇಕ್ಯಾತ ಕುಟುಂಬಕ್ಕಿನ್ನೂ ಸಿಕ್ಕಿಲ್ಲ ಸೌಲಭ್ಯ

Published On :

ಕ.ಪ್ರ.ವಾರ್ತೆ    ಹುಣಸೂರು    ಮೇ 13
ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಕಾಳಬೂಚನಹಳ್ಳಿ ಗ್ರಾಮಕ್ಕೆ ಸೇರಿದ ಹೆಬ್ಬಳ್ಳ ಸರ್ಕಾರಿ ಭೂಮಿಯಲ್ಲಿ ಶಿಳ್ಳೇಕ್ಯಾತ ಜನಾಂಗಕ್ಕೆ ಸೇರಿದ ಪ.ಜಾತಿಯ ಗೊಂಬೆ ರಾಮಯ್ಯಯವರು ಕಳೆದ 10 ವರ್ಷಗಳಿಂದ ತನ್ನ ಕುಟುಂಬ ಸಮೇತ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದಾರೆ.
ಇವರಿಗೆ ಈಗ 70 ವರ್ಷವಾಗಿದ್ದು, ಬಿಪಿ ಇದೆ.. ಪುಣ್ಯವೆಂಬಂತೆ ಸರ್ಕಾರದಿಂದ ವೃದ್ಧಾಪ್ಯ ವೇತನ ಸಿಗುತ್ತಿದೆ. ರಾಮಯ್ಯನ ಪತ್ನಿ ಗೌರಮ್ಮ ಹಳೆ ಬಟ್ಟೆಯಲ್ಲಿ ದಟ್ಟ ಹೊಲೆದು ಜೀವನಕ್ಕೆ ಅಷ್ಟುಇಷ್ಟು ಸಂಪಾದಿಸುತ್ತಿದ್ದಾರೆ. ಮೂವರು ಪುತ್ರರು ಕೂಲಿ ಮಾಡುತ್ತಾರೆ. ಇರಲು ಹಂಚಿನ ಮನೆ ಇಲ್ಲ. ನಿವೇಶನ ಹಾಗೂ ಮನೆಗಾಗಿ ಗ್ರಾಪಂ, ತಾಪಂ, ಜಿಲ್ಲಾಧಿಕಾರಿ, ಶಾಸಕರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಅಲೇಮಾರಿ ಶಿಳ್ಳೇಕ್ಯಾತ ಜನಾಂಗಕ್ಕೆ ಸೇರಿದವರು ಆಗಿರುವುದರಿಂದ ರಾಮಯ್ಯನಿಗೆ ಹಾರ್ಮೋನಿಯಂ ನುಡಿಸಲು ಗೊತ್ತು. ಪತ್ನಿ ಗೌರಮ್ಮನಿಗೆ ಗೊಂಬೆ ನಾಟಕ ಗೊತ್ತು. ಹಿರಿಯ ಮಗ ದಶರಥನಿಗೆ ತಬಲ ನುಡಿಸಲು ಗೊತ್ತು. ಇನ್ನಿಬ್ಬರೂ ಗಂಡು ಮಕ್ಕಳು ಪ್ರೌಢಶಾಲೆ ಬಿಟ್ಟಿದ್ದಾರೆ. ಈಗ ಹಳ್ಳಿಗಳಲ್ಲಿ ಯಾರು ಗೊಂಬೆ ಆಟ ಆಡಿಸುವುದಿಲ್ಲ. ಹೀಗಾಗಿ ಇವರ ಉಪಜೀವನ ಕೂಲಿಯಿಂದಲೇ ನಡೆಯಬೇಕು.
ಅಲೆದಾಡಿದರೂ ಸಿಕ್ಕಿಲ್ಲ ನಿವೇಶನ: ನಿವೇಶನ ಹಾಗೂ ಮನೆಗಾಗಿ ಅರ್ಜಿ ಕೊಟ್ಟು ಸುಸ್ತಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾಧಿಕಾರಿಗೆ ಪತ್ರ ಕಳುಹಿಸಿದ್ದಾರೆ. ಶಾಸಕ ಎಚ್.ಪಿ. ಮಂಜುನಾಥ್ ಅವರಿಗೂ ಐದು ಬಾರಿ ಅರ್ಜಿ ಸಲ್ಲಿಸಿದ್ದೇನೆ ಎನ್ನುತ್ತಾರೆ ಗೌರಮ್ಮ. ಇದೇ ಸ್ಥಿತಿ ಹಾಸನ ಜಿಲ್ಲೆಯ ಅರಕಲಗೂಡಿನ ಅಣ್ಣಾಳು ಗ್ರಾಮದಲ್ಲಿಯೂ ಅನುಭವಿಸಿ, ಅಲ್ಲಿನ ಶಾಸಕರಾದ ಎ.ಮಂಜು ಅವರಿಂದಲೂ ಸಹಾಯವಾಗಲಿಲ್ಲ. ನಮ್ಮ ಊರಿನವಳಲ್ಲ ನಿನಗೇಕೆ ಮನೆ ಎಂದು ನನ್ನ ಮನವಿ ತಿರಸ್ಕರಿಸಿದರು.
ಮಗಳಿಗೆ ಊರಿನ ಪೋಲಿ ಹುಡುಗರು ತೊಂದರೆ ಕೊಡುತ್ತಿದ್ದರಿಂದ ಜಾಗ ಬದಲಿಸಿ, ಈಗ ಕಾಳಬೂಚನಹಳ್ಳಿಯಲ್ಲಿ ವಾಸವಿದ್ದಾರೆ. ಇಲ್ಲಿ ಮತ್ತೊಂದು ಸಮಸ್ಯೆ. ತಾವು ಕುಳಿತಿರುವ ಎರಡು ಗುಂಟೆ ಸರ್ಕಾರಿ ಜಾಗದಲ್ಲಿ ಕಾಳಬೂಚನಹಳ್ಳಿ ಗ್ರಾಮದ ವೆಂಕಟೇಶ್ ಗೌರಮ್ಮ ಅವರಿಗೆ ಸೇರಿದ ತೊಗರಿ ಪೈರು ಕಿತ್ತು ಹಾಕಿ, ಗುಡಿಸಲು ಕಟ್ಟಿಕೊಂಡು ಮದ್ಯಮಾರಾಟ ಮಾಡುತ್ತಾ ದೌರ್ಜನ್ಯ ಮಾಡುತ್ತಿದ್ದಾರೆ. ಸರ್ಕಾರದವರು ನನಗೆ ನಿವೇಶನ ಹಾಗೂ ಮನೆ ಕೊಟ್ಟಿದ್ದರೆ ಈ ತೊಂದರೆ ಬರುತ್ತಿರಲ್ಲಿಲ್ಲ ಎನ್ನುತ್ತಾರೆ ಪತ್ನಿ ಗೌರಮ್ಮ.
ವೆಂಕಟೇಶನು ಮಂಡಿಸ್ವಾಮಿ ಪರವಾಗಿ ಮದ್ಯಮಾರಾಟವನ್ನು ಅನಧಿಕೃತವಾಗಿ ಮಾಡಿ ಶೆಟ್ಟಳ್ಳಿ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ವಾಸವಿರುವವರಿಗೆ ಮದ್ಯ ಮಾರುತ್ತಿದ್ದಾರೆ. ಇಂತಹ ಕಷ್ಟಗಳನ್ನು ಸಹಿಸಿಕೊಂಡು ಕೂಲಿ ಮಾಡಿ ಬದುಕುವ ರಾಮಯ್ಯ ಗೌರಮ್ಮ ದಂಪತಿಗೆ ಪಡಿತರ ಚೀಟಿ ಇಲ್ಲ. ಆಧಾರ್ ಕಾರ್ಡ್ ಮತ್ತು ವೋಟಿನ ಚೀಟಿ ಇದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರೂ ಕಂದಾಯ ಇಲಾಖೆಯವರು ಪಡಿತರ ಕಾರ್ಡ್ ನೀಡಿಲ್ಲ. ಇದರಿಂದಾಗಿ ಅನ್ನಭಾಗ್ಯ ಯೋಜನೆ ಈ ಕುಟುಂಬಕ್ಕೆ ಇಲ್ಲ. ಹೀಗಾಗಿ ಆಹಾರ ಧಾನ್ಯಗಳನ್ನು ಹೆಚ್ಚು ದುಡ್ಡುಕೊಟ್ಟು ಕೊಳ್ಳಬೇಕು. ಊರೂರು ತಿರುಗಿ ಭಿಕ್ಷೆ ಬೇಡಿ ತಿನ್ನುವ ಗೊಂಬೆಯವರಿಗೇಕೆ ಮನೆ ಎಂದು ಊರ ಜನ ಹಂಗಿಸುತ್ತಾರೆ. ಎಸ್ಸೆಸ್ಸೆಲ್ಸಿ ಓದುತ್ತಿದ್ದ ಮೂರನೇ ಪುತ್ರ ಶಿವಕುಮಾರನಿಗೆ ಹಾಜರಾತಿ ಸಾಕಾಗಿಲ್ಲ ಎಂದು ನೇರಳಕುಪ್ಪೆ ಪ್ರೌಢಶಾಲೆಯ ಶಿಕ್ಷಕರು ಪರೀಕ್ಷೆಗೆ ಕೂರಿಸಲಿಲ್ಲ ಎಂದು ಗೌರಮ್ಮ ವ್ಯಥೆ ಪಡುತ್ತಾರೆ.
ಇದು ಅಲೆಮಾರಿ ಕುಟುಂಬ ಒಂದರ ಬದುಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹಿಂದಿನ ಬಜೆಟ್ನಲ್ಲಿ ಅಲೆಮಾರಿಗಳ ಅಭಿವೃದ್ಧಿಗೆ 50 ಕೋಟಿ ಮೀಸಲಲ್ಲಿಟ್ಟಿದ್ದಾರೆ. ಈ ಅಲೆಮಾರಿ ಶಿಳ್ಳೇಕ್ಯಾತ ಜನಾಂಗದ  ರಾಮಯ್ಯ-ಗೌರಮ್ಮ ಕುಟುಂಬ ನೆಲೆಯೂರಲೂ ಸರ್ಕಾರ ಈಗಲಾದರು ನೆರವಾಗುತ್ತದೆಯೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.