ಮೈಸೂರು

ಮಾವು ಮಾಗಿಸಲು ರಾಸಾಯನಿಕ ಬಳಕೆ ಬೇಡ: ದೊರೆಯಪ್ಪ ಸಲಹೆ

Published On :

ಕ.ಪ್ರ.ವಾರ್ತೆ    ಸುತ್ತೂರು    ಮೇ 17
ಪ್ರಪಂಚದ ಒಟ್ಟು ಮಾವಿನ ಉತ್ಪಾದನೆಯ ಶೇ.60 ರಷ್ಟು ಪಾಲು ಭಾರತದ್ದಾಗಿದೆ. ಅದರಲ್ಲಿ ಶೇ.2 ರಷ್ಟು ಮಾತ್ರ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಐ.ಎನ್. ದೊರೆಯಪ್ಪಗೌಡ ಹೇಳಿದರು.
ನಂಜನಗೂಡಿನ ತೋಟಗಾರಿಕಾ ಇಲಾಖೆ, ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಇವರ ಸಹಯೋಗದಲ್ಲಿ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ನಡೆದ ಮಾವು ಬೆಳೆಯಲ್ಲಿ ಉತ್ಪಾದನೆ, ಕೊಯ್ಲೋತ್ತರ ನಿರ್ವಹಣೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ಹೆಚ್ಚು ಹಣ್ಣುಗಳನ್ನು ಸಂಸ್ಕರಣೆ ಮಾಡಿದರೆ, ಬೇರೆ ದೇಶಗಳಿಗೂ ರಫ್ತು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮಾವನ್ನು ಹಣ್ಣಾಗಿಸಲು ರಾಸಾಯನಿಕಗಳನ್ನು ಉಪಯೋಗಿಸಲಾಗುತ್ತಿದ್ದು, ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಬಳಸಿದಾಗ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗ್ರಾಹಕರ ದೃಷ್ಟಿಯಿಂದ ಆರೋಗ್ಯಕರ ರೀತಿಯಲ್ಲಿ ಹಣ್ಣುಗಳನ್ನು ಮಾಗಿಸುವುದು ಉತ್ತಮ ಎಂದು ತಿಳಿಸಿದರು.
ಹೆಚ್ಚಿನ ಆದಾಯ ಪಡೆಯಬಹುದು: ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಅರುಣ್ ಬಳಮಟ್ಟಿ ಅಧ್ಯಕ್ಷತೆ ವಹಿಸಿ  ಮಾತನಾಡಿ, ಇದು ಮಾವಿನ ಹಂಗಾಮವಾಗಿದ್ದು, ಮಾವಿನ ಮೌಲ್ಯವರ್ಧನೆ ಮಾಡುವುದರಿಂದ ಗ್ರಾಹಕರಿಗೆ ಆರೋಗ್ಯಕರ ಹಣ್ಣುಗಳನ್ನು ಒದಗಿಸುವುದರೊಂದಿಗೆ ರೈತರು ಹೆಚ್ಚಿನ ಆದಾಯ ಪಡೆದುಕೊಳ್ಳಬಹುದೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಐಐಎಚ್‌ಆರ್‌ನಿಂದ ಆಗಮಿಸಿದ ಡಾ.ಡಿ.ವಿ. ಸುಧಾಕರ್ ರಾವ್, ಡಾ.ಐ.ಎನ್. ದೊರೆಯಪ್ಪಗೌಡ ಮತ್ತು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಷಯ ತಜ್ಞರಾದ ಶ್ರೀನಿವಾಸ್ ಎಚ್.ಮಂಕಣಿಯವರು ಮಾವು ಬೆಳೆಯ ಉತ್ಪಾದನೆ, ಕೊಯ್ಲೋತ್ತರ ನಿರ್ವಹಣೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ವಿಚಾರ ಸಂಕಿರಣದಲ್ಲಿ ಸುಮಾರು 120ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು. ನಂಜನಗೂಡು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ಎಂ. ಶಿವಲಿಂಗಪ್ಪ ಸ್ವಾಗತಿಸಿದರು. ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕ ರಾಜಣ್ಣ ವಂದಿಸಿದರು. ತೋಟಗಾರಿಕೆ ವಿಷಯ ತಜ್ಞ ಶ್ರೀನಿವಾಸ್ ಎಚ್.ಮಂಕಣಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.