ಮೈಸೂರು

ಪ್ರಾಥಮಿಕ ಶಿಕ್ಷಣಕ್ಕೆ ಹೊಸ ಕಾಯ್ದೆ

Published On :

ಕ.ಪ್ರ.ವಾರ್ತೆ ಮೈಸೂರು ಮೇ 20
ಸುಪ್ರಿಂಕೋರ್ಟ್ ಏನೇ ತೀರ್ಪು ನೀಡಿದರೂ, ಪ್ರಾಥಮಿಕ ಶಿಕ್ಷಣ ರಾಜ್ಯ ಸರ್ಕಾರದ ಹಿಡಿತದಲ್ಲಿ ಇರುವುದರಿಂದ ಹೊಸ ಕಾಯ್ದೆ ರೂಪಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಕುರಿತು ಸುಪ್ರೀಂ ಕೋರ್ಟ್ ಪೋಷಕರ ವಿವೇಚನೆಗೆ ಬಿಟ್ಟಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಹಿಡಿತದಲ್ಲಿರುವ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮಾತೃ ಭಾಷೆ ಬದಲಿಗೆ ರಾಜ್ಯಭಾಷೆ ಅಥವಾ ಆಡಳಿತ ಭಾಷೆ ಎಂಬ ಹೆಸರಿನಲ್ಲಿ ಹೋರಾಟ ನಡೆಸಬಹುದು ಎಂದರು.
ಅಲ್ಲದೆ ರಾಷ್ಟ್ರೀಯ ಸಮಾನ ಶಿಕ್ಷಣ ನೀತಿಯನ್ನು ಭಾಷೆಯ ಆಧಾರದ ಮೇಲೆ ಜಾರಿಗೊಳಿಸುವ ಅವಕಾಶ ಇದೆ. ಈಗಾಗಲೆ ಸಂವಿಧಾನ ಕನ್ನಡವನ್ನು ಒಪ್ಪಿದೆ. ನೋಟಿನ ಮೇಲೆ ಕನ್ನಡ ಅಕ್ಷರಗಳನ್ನು ಮುದ್ರಿಸಲಾಗುತ್ತಿದೆ ಮತ್ತು ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಸಹ ಏನು ಮಾಡಲು ಆಗದು. ಆದರೆ ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಕೆಯಿಂದ ಯಾವುದೆ ಲಾಭ ಆಗದು. ಈಗ ರಾಜ್ಯದಿಂದ ಆಯ್ಕೆಯಾದ ಎಲ್ಲಾ ಸಂಸದರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಒಗ್ಗಟ್ಟು ಪ್ರದರ್ಶಿಸಬೇಕು. ರಾಜ್ಯದ ಹಕ್ಕಿಗಾಗಿ ಏಕತೆಯಿಂದ ಹೋರಾಡಬೇಕು ಎಂದು ತಿಳಿಸಿದರು.
ಇಂಗ್ಲಿಷ್ ಹೆಸರಿನ ಸಿನಿಮಾಗೆ ಸೌಲಭ್ಯ ಬೇಡ: ರಾಜ್ಯದಲ್ಲಿ ತೆರೆ ಕಾಣುವ ಇಂಗ್ಲಿಷ್ ಹೆಸರಿನ ಸಿನಿಮಾಗಳಿಗೆ ಸರ್ಕಾರ ಸೌಲಭ್ಯ ನೀಡಬಾರದು. ಕನ್ನಡದ್ದೆ ಚಿತ್ರ ಆಗಿರಬೇಕು, ಯಾವುದೆ ಭಾಷೆಯ ಚಿತ್ರದಿಂದ ಸ್ಪೂರ್ತಿಯನ್ನಾಗಲಿ, ದೃಶ್ಯವನ್ನಾಗಲಿ, ಹಾಡನ್ನಾಗಲಿ ಬಳಸಿರಬಾರದು.
ಡಬ್ಬಿಂಗ್ ಚಿತ್ರಕ್ಕೆ ಅವಕಾಶ ನೀಡಬಾರದು, ಸಿನಿಮಾದಲ್ಲಿ ಅಶ್ಲೀಲ ಎನಿಸುವ ಮಾತು, ಸನ್ನಿವೇಶಗಳು ಮತ್ತು ಹಿಂಸೆಯ ವೈಭವೀಕರಣ ಇರಬಾರದು. ಕನ್ನಡದ ಶೀರ್ಷಿಕೆ ಇರಬೇಕು. ಸವಲತ್ತನ್ನು ಮಾತ್ರ ರಾಜ್ಯದಿಂದ ಪಡೆದು ಇಂಗ್ಲಿಷ್ ಹೆಸರಿನ ಸಿನಿಮಾ ಮಾಡುವುದು ತಪ್ಪು. ಇದು ಧಾರಾವಾಹಿಗಳಿಗೂ ವಿಸ್ತರಿಸಬೇಕು. ಅದು ಮುಖ್ಯಮಂತ್ರಿ ಚಂದ್ರುವಿನ ಸಿನಿಮಾ ಆಗಿರಲಿ, ಅಂಬರೀಶ್ ಸಿನಿಮಾ ಆಗಿರಲಿ. ಅದಕ್ಕೆ ಸರ್ಕಾರ ಸಬ್ಸಿಡಿ ಸೇರಿದಂತೆ ಯಾವುದೆ ಸೌಲಭ್ಯ ನೀಡಬೇಕು ಎಂದರು.
ರಾಷ್ಟ್ರಧ್ವಜದಂತೆ ರಾಜ್ಯಧ್ವಜಕ್ಕೂ ನಿಯಮ ರೂಪಿಸಿ, ಅಧಿಕೃತ ಮುದ್ರೆ ಬೀಳಬೇಕು. ಜೊತೆಗೆ ರಾಜ್ಯಧ್ವಜಕ್ಕೆ ಅವಮಾನ ಮಾಡುವವರಿಗೆ ಶಿಕ್ಷೆ ವಿಧಿಸಬೇಕು, ನಾಡಗೀತೆಗೆ ನಿರ್ಧಿಷ್ಟ ರೂಪ ಸಿಗಬೇಕು. ಈ ಬಗ್ಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮತ್ತು ಚನ್ನವೀರ ಕಣವಿ ಅವರು ವರದಿ ನೀಡಿದ್ದಾರೆ.
ಆದ್ದರಿಂದ ನಿಗದಿತ ಅವಧಿ ಮತ್ತು ನಿಗದಿತ ರೀತಿಯಲ್ಲಿ ಹಾಡಲು ನೀತಿ ರೂಪಿಸಬೇಕು. ಬ್ಯಾಂಕ್ ವ್ಯವಹಾರ, ನ್ಯಾಯಾಲಯದಲ್ಲಿನ ತೀರ್ಮಾನಗಳು, ಸರ್ಕಾರದ ಆಡಳಿತ ಕನ್ನಡದಲ್ಲಿಯೇ ನಡೆಯಬೇಕು. ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡದಲ್ಲಿ ಇರದ ಯಾವುದೆ ಸುತ್ತೋಲೆ ಅಥವಾ ಆದೇಶವನ್ನು ಹಿಂದಕ್ಕೆ ಕಳುಹಿಸುವುದಾಗಿ ಹೇಳಿದ್ದಾರೆ. ಇದು ಸ್ವಾಗತಾರ್ಹ ಸಂಗತಿ ಎಂದು ಹೇಳಿದರು.
ರಂಗಾಯಣ ಉಪ ನಿರ್ದೇಶಕ ಎಸ್.ಐ. ಭಾವಿಕಟ್ಟಿ, ವಾರ್ತಾ ಇಲಾಖೆ ಉಪ ನಿರ್ದೇಶಕ ಎ.ಆರ್. ಪ್ರಕಾಶ್ ಇದ್ದರು.

ಶಾಸ್ತ್ರೀಯ ಭಾಷೆಗೆ ಸೂಕ್ತ ಆದ್ಯತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸ್ತ್ರೀಯ ಭಾಷೆಯ ಕೇಂದ್ರ ಕಚೇರಿಯನ್ನು ತಮ್ಮ ಬಳಿಯಲ್ಲಿಯೇ ಇರಿಸಿಕೊಳ್ಳಬೇಕು. ಅದರ ಕಟ್ಟಡ ಮತ್ತು ಕೆಲಸಗಳು ಬೇರೆಡೆ ನಡೆಯಲಿ. ಆದರೆ ಶಾಸ್ತ್ರೀಯ ಭಾಷೆಯ ಸಲಹಾ ಮಂಡಳಿ ಅಧ್ಯಕ್ಷರು ಮುಖ್ಯಮಂತ್ರಿಗಳೆ ಆದ್ದರಿಂದ ತಮ್ಮ ಬಳಿಯೇ ಇರಬೇಕು. ಆಗ ಕನ್ನಡದ ಕೆಲಸಕ್ಕೆ ಹಣಕಾಸಿನ ಕೊರತೆ ಉಂಟಾಗುವುದಿಲ್ಲ ಎಂದು ಕಿವಿಮಾತು ಹೇಳಿದರು. ವಿವಿಧ ಪ್ರಾಧಿಕಾರ, ಅಕಾಡೆಮಿಗಳ ಸದಸ್ಯರು ಮತ್ತು ಅಧ್ಯಕ್ಷರನ್ನು ಅಕಾಲಿಕವಾಗಿ ಅಧಿಕಾರ ಮೊಟಕು ಮಾಡುವುದನ್ನು ಸರ್ಕಾರ ತಪ್ಪಿಸಬೇಕು. ಇಂತಹ ಸಂಸ್ಥೆಗಳಿಗೆ ಆಯಾ ಕ್ಷೇತ್ರದ ಪರಿಣತರನ್ನೇ ಆಯ್ಕೆ ಮಾಡಿರುತ್ತಾರೆ. ಆದರೆ ಸರ್ಕಾರ ಬದಲಾಗುತ್ತಿದ್ದಂತೆ ಅವರಿಂದ ರಾಜಿನಾಮೆ ಪಡೆದು ಅವಮಾನ ಮಾಡಬಾರದು. ಮೂರು ವರ್ಷದ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು. ಜೂ.10ಕ್ಕೆ ನನ್ನ ಅವಧಿ ಅಂತ್ಯವಾಗುತ್ತದೆ. ಮುಂದಿನ ಅವಧಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಮುಂದುವರಿಸಿದರೆ ಖಂಡಿತ ಕೆಲಸ ಮಾಡುತ್ತೇನೆ. ಇಲ್ಲವೆ ನನ್ನನ್ನು ಗುರುತಿಸಿ ಶಾಸನ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರೆ ಮತ್ತೂ ಸಂತೋಷ ಎಂದು ವಿಧಾನ ಪರಿಷತ್ ಸದಸ್ಯರಾಗುವ ಇಂಗಿತ ವ್ಯಕ್ತಪಡಿಸಿದರು. ತಪ್ಪಿದರೆ ನಾಡು- ನುಡಿ- ಗಡಿಯ ವಿಷಯದ ಜವಾಬ್ದಾರಿ ವಹಿಸಿದರೆ ನನಗಿಷ್ಟವಾದಲಿ ಮುಂದುವರಿಯುತ್ತೇನೆ. ಇಲ್ಲವೆ ಹೊರಗಿದ್ದು ಕೈಲಾದಷ್ಟು ಕೆಲಸ ಮಾಡುತ್ತೇನೆ. ಚಿತ್ರರಂಗದಲ್ಲಿನ ಕೆಲಸ ನಿರಂತರವಾಗಿ ಮಾಡುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.