ಮೈಸೂರು

ಬೆಟ್ಟದ ತಪ್ಪಲು ಕಾಂಕ್ರಿಟ್ ಆಗೋದು ಬೇಡ

Published On :

ಕ.ಪ್ರ.ವಾರ್ತೆ ಮೈಸೂರು ಮೇ 20
ಚಾಮುಂಡಿಬೆಟ್ಟದ ಸುತ್ತಲಿನ ಪ್ರದೇಶವನ್ನು ಹಸಿರಾಗಿಯೇ ಉಳಿಸಿಕೊಳ್ಳಲು ನಿವೃತ್ತ ಐಎಎಸ್ ಅಧಿಕಾರಿ ನಾರಾಯಣ ಸ್ವಾಮಿ ನೇತೃತ್ವದ ತಂಡ ಕೂಲಂಕುಷ ತನಿಖಾ ವರದಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಆಗ್ರಹಿಸಿದ್ದಾರೆ.
ಈ ಭೂ ಹಗರಣದ ಕೇಂದ್ರ ಬಿಂದು ಈ ಹಿಂದಿನ ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಅವರ ಆದೇಶ ಮತ್ತು ಅದರ ಹಿಂದಿನ ಎಲ್ಲಾ ಅಕ್ರಮಗಳ ಬಗ್ಗೆ ನಡೆಸಿದ ಸುದೀರ್ಘ ಹೋರಾಟ. ಇದರ ಫಲವಾಗಿ ಈಗ ತನಿಖಾ ಆಯೋಗ ರಚಿಸಲಾಗಿದೆ. ಬ್ರಿಟಿಷರ ಕಾಲದಿಂದಲೂ ಆಕಾರ್ ಬಂದ್‌ನಲ್ಲಿ ಬಿ ಖರಾಬು ಎಂದೆ ನಮೂದಾಗಿದೆ. ಆದರೆ ಹಾಲಿ ಈ ಭೂ ಪ್ರದೇಶದಲ್ಲಿ ಅನೇಕ ಅನುಭವದಾರರಿದ್ದಾರೆ. ಅವರಿಗೆ ಈ ಜಮೀನು ಹೇಗೆ ದೊರೆಯಿತು ಮೈಸೂರು ಮಹಾರಾಜರಿಂದ ಕ್ರಯಪತ್ರವಾಗಿದೆಯೇ ದಾನಪತ್ರವಾಗಿದೆಯೆ ಎಂಬ ಬಗ್ಗೆ ಮೂಲ ದಾಖಲೆಗಳ ತಪಾಸಣೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಹಾರಾಜರು ಆಡಳಿತಗಾರರಾಗಿದ್ದಾಗ ನೀಡಿದ ಜಿಪಿಎ, ಅವರು ಸಾಮಾನ್ಯ ನಾಗರಿಕರಾದಾಗ ತಮ್ಮ ಆಡಳಿತದ ಅಧಿಕಾರಗಳನ್ನು ತ್ಯಜಿಸಿದ ಬಳಿಕ ಮುಂದುವರಿಯಲು ಸಾಧ್ಯವೆ? ಮಹಾರಾಜರ ಆಸ್ತಿ ಪಿತ್ರಾರ್ಜಿತವಾದರೂ, ಅವರು ಸಾಮಾನ್ಯ ನಾಗರಿಕರಾದ ಮೇಲೆ ಇಂತಹ ಪಿತ್ರಾರ್ಜಿತ ಆಸ್ತಿಯನ್ನು ದಾನ, ಭೋಗ್ಯ, ಕ್ರಯ ಮುಂತಾಗಿ ಪರಭಾರೆ ಮಾಡಬೇಕಾದಲ್ಲಿ ಮಹಾರಾಣಿಯರು ಮತ್ತು ಪ್ರಾಪ್ತ ವಯಸ್ಕ ಮಕ್ಕಳು ಇವರೆಲ್ಲರ ಒಪ್ಪಿಗೆ ಅಗತ್ಯ. ಆದ್ದರಿಂದ ಜಿಪಿಎಗಳು ಸಹಿ ಮಾಡಿರುವ ಈ ದಾನಪತ್ರಗಳು ಮತ್ತು ಕ್ರಯಪತ್ರಗಳು ಕಾನೂನಾತ್ಮಕವಾಗಿ ಅಕ್ರಮವಾಗಿದ್ದು, ಇವುಗಳ ಆಧಾರದ ಮೇಲೆ ಖರೀದಿದಾರರಿಗೆ ಖಾತೆ ಮಾಡುವುದು ಕಾನೂನು ಪ್ರಕಾರ ಅಕ್ರಮ. ಆದ್ದರಿಂದ ಈ ಬಗ್ಗೆ ಕಾನೂನು ಪಂಡಿತರಿಂದ ಅಧಿಕೃತ ಅಭಿಪ್ರಾಯ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ. ಈ ಹಿಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಒಂದು ಆದೇಶ ಹೊರಡಿಸಿ ಕುರುಬಾರಹಳ್ಳಿ, ಆಲನಹಳ್ಳಿ ಮತ್ತು ಚೌಡಹಳ್ಳಿಗೆ ಸಂಬಂಧಿಸಿದ ಈ ಎಲ್ಲಾ ಗೋಮಾಳ ಜಮೀನಿನ ವೈಯಕ್ತಿಕ ಖಾತೆಗಳನ್ನು ರದ್ದುಗೊಳಿಸಿ, ಎಲ್ಲಾ ಜಮೀನನ್ನು ಒಟ್ಟುಗೂಡಿಸಿ ಬಿ ಖರಾಬು ಎಂಬ ಷರಾವನ್ನು ಆರ್‌ಟಿಸಿಯಲ್ಲಿ ಕಡ್ಡಾಯವಾಗಿ ನಮೂದಿಸುವಂತೆ ಆದೇಶಿಸಿದ್ದಾರೆ. ಈ ಆದೇಶವನ್ನು ಪುನರ್ ವಿಮರ್ಶಿಸುವ ಅಧಿಕಾರ ಮತ್ತೊಬ್ಬ ಜಿಲ್ಲಾಧಿಕಾರಿಗೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆ ಮೈಸೂರು ಹೃದಯ ಭಾಗದಲ್ಲಿನ ಹಾಗೂ ಹಸಿರಿನಿಂದ ತುಂಬಿರುವ ಸದರಿ ಭೂಮಿಯನ್ನು ಹಾಗೆಯೆ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಇದೆ. ಚಾಮುಂಡಿಬೆಟ್ಟದ ತಪ್ಪಲಿನ ಭೂಮಿ ಹೀಗೆಯೆ ಹಸಿರಾಗಿ ಉಳಿಸಿಕೊಳ್ಳಬೇಕಾಗಿದೆ. ಬೆಟ್ಟದ ಸುತ್ತ ಕಾಂಕ್ರೀಟ್ ಕಾಡು ನಿರ್ಮಾಣವಾಗುವುದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.