ಮೈಸೂರು

ಕುಣಬಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅಸ್ತು

Published On :

ಮೈಸೂರು: ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ವಾಸವಾಗಿರುವ ಕುಣಬಿ ಜನಾಂಗದವರ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ಮತ್ತೊಮ್ಮೆ ಆದೇಶಿಸಿದೆ. ಮೈಸೂರು ವಿವಿ ಪ್ರಾಧ್ಯಾಕರೊಬ್ಬರನ್ನು ಅಧ್ಯಯನಕ್ಕೆ ನಿಯೋಜಿಸಿದೆ.
ಕುಣಬಿ ಜಾತಿಯ ಕುರಿತು ಆಚಾರ- ವಿಚಾರ, ಭಾಷೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ, ಭೌಗೋಳಿಕ ಅಂಶಗಳ ಕುರಿತಂತೆ ಕುಲಶಾಸ್ತ್ರೀಯ ಅಧ್ಯಯನವನ್ನು 5 ಲಕ್ಷ ರು. ವೆಚ್ಚದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಆರ್. ಗಂಗಾಧರ್ ಅವರಿಂದ ಕೈಗೊಳ್ಳಲು ಸರ್ಕಾರ ಮಂಜೂರಾತಿ ನೀಡಿದೆ.
ಕುಣಬಿ ಜನಾಂಗದ ಸಾಮಾಜಿಕ ಲಕ್ಷಣಗಳು, ವಿಶಿಷ್ಟ ಸಂಸ್ಕೃತಿ, ಭೌಗೋಳಿಕ ಪ್ರತ್ಯೇಕತೆ, ಸಾಮಾಜದೊಂದಿಗೆ ಸಂಪರ್ಕ ಮತ್ತು ಸಂಕೋಚ ಅಂಶಗಳನ್ನು ಅಧ್ಯಯನಕ್ಕೆ ಪರಿಗಣಿಸಬೇಕು. ಕುಲಶಾಸ್ತ್ರೀಯ ಅಧ್ಯಯನವನ್ನು ರು. 5 ಲಕ್ಷ ವೆಚ್ಚದಲ್ಲಿ ಮುಗಿಸಬೇಕು. ಉಳಿದ ಯಾವುದೇ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆ ಭರಿಸುವುದಿಲ್ಲ. ಪರಿಶಿಷ್ಟ ಪಂಗಡಕ್ಕೆ ಕುಣಬಿ ಜನಾಂಗವನ್ನು ಸೇರಿಸಲು ಅರ್ಹರೇ ಎಂಬುದರ ಬಗ್ಗೆ ವರದಿಯಲ್ಲಿ ಸ್ಪಷ್ಟ ಅಭಿಪ್ರಾಯ ನಮೂದಿಸಬೇಕು. 12 ತಿಂಗಳಲ್ಲಿ ಅಧ್ಯಯನ ಪೂರ್ಣಗೊಳಿಸಿ ವರದಿ ಸಲ್ಲಿಸಹಬೇಕು. ಅಧ್ಯಯನ ವರದಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತಯಾರಿಸಿ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್. ನರಸಿಂಹಮೂರ್ತಿ ಸೂಚಿಸಿದ್ದಾರೆ.
ಈ ಹಿಂದೆ ಅಧ್ಯಯನ ನಡೆದಿತ್ತು: ಕುಣಬಿ ಮತ್ತು ಕುಡುಬಿ ಜಾತಿಗಳನ್ನು 2009ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ವಹಿಸಲಾಗಿತ್ತು. ಕುಣಬಿ ಜನಾಂಗದವರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುಣಲಕ್ಷಣಗಳು ಹೊಂದಿಲ್ಲ, ಹಿಂದುಳಿದ ವರ್ಗಗಳ ಜಾತಿಯಲ್ಲಿಯೇ ಮುಂದುವರೆಸುವಂತೆ ವರದಿ ನೀಡಿತ್ತು.
ಆದರೆ, ಕರ್ನಾಟಕ ರಾಜ್ಯ ಕುಣಬಿ ಸಮಾಜ ಅಭಿವೃದ್ಧಿ ಮಹಾಮಂಡಳ, ಜೋಯಿಡಾ ತಾಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘ ಸೇರಿದಂತೆ ಮತ್ತಿತರ ಸಂಘ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಮನವಿ ಸಲ್ಲಿಸಿ, ಕುಣಬಿ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮತ್ತೊಮ್ಮೆ ಕುಲಶಾಸ್ತ್ರೀಯ ಅಧ್ಯಯನ ನಡೆಸುವಂತೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಧಾರವಾಡದ ಕರ್ನಾಟಕ ವಿವಿ ಹೊರತುಪಡಿಸಿ ಬೇರೆ ವಿಶ್ವವಿದ್ಯಾನಿಲಯಗಳಿಂದ ಪ್ರಸ್ತಾವನೆ ಪಡೆದು ಸಲ್ಲಿಸುವಂತೆ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆಗೆ ಸರ್ಕಾರ ಸೂಚಿಸಿತ್ತು. ಮೈಸೂರು ವಿವಿ ಪ್ರಾಧ್ಯಾಪಕ ಡಾ.ಎಂ.ಆರ್. ಗಂಗಾಧರ್ ಅವರು ಸಲ್ಲಿಸಿದ ಪ್ರಸ್ತಾವನೆಯನ್ನು ಗಿರಿಜನ ಸಂಶೋಧನಾ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ಇವರು ಅಧ್ಯಯನ ನೀಡಲು ಆದೇಶ ಹೊರಡಿಸುವಂತೆ ಕೋರಿತ್ತು. ಅದರಂತೆ ಡಾ. ಗಂಗಾಧರ್ ಅವರ ಮೂಲಕ ಮತ್ತೊಮ್ಮೆ ಕುಣಬಿ ಜನಾಂಗದವರ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ.
ಕುಣಬಿ ಜನಾಂಗ: ಗೋವಾ ಮೂಲದ ಕುಣಬಿ ಜನಾಂಗವು ಕರ್ನಾಟಕಕ್ಕೆ ವಲಸೆ ಬಂದು ನೆಲೆಸಿದೆ. ಉತ್ತರ ಕನ್ನಡ ಜಿಲ್ಲೆ ಜೋಯಿಡಾ, ಯಲ್ಲಾಪುರ, ಅಂಕೋಲಾ, ಹಳಿಯಾಳ, ಕಾರವಾರ ಮತ್ತು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಸುಮಾರು 30 ಸಾವಿರ ಕುಣಬಿ ಜನಾಂಗದವರು ಇದ್ದಾರೆ. ಆರಂಭದಲ್ಲಿ ಅರಣ್ಯ ಉತ್ಪನ್ನಗಳನ್ನು ಮಾರಿ ಬದುಕು ಸಾಗಿಸುತ್ತಿದ್ದು ಜನಾಂಗವು ಈಗ ಕೃಷಿಯಲ್ಲೂ ತೊಡಗಿದೆ. ಪ್ರಸ್ತುತ ಕುಣಬಿ ಜನಾಂಗ ಪ್ರವರ್ಗ- 1ರಲ್ಲಿ ಸೇರಿದ್ದು, ಶೈಕ್ಷಣಿಕ, ಔದ್ಯೋಗಿಕ ಮತ್ತು ಇತರೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಜನಾಂಗದವರು ಮನವಿ ಸಲ್ಲಿಸಿದ್ದರು.
ಕುಣಬಿ ಜನಾಂಗದವರ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಮೂರು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿರುವುದು ನನ್ನ ಗಮನಕ್ಕೆ ಬಂದ ಕೂಡಲೇ ಮೈಸೂರು ವಿವಿಗೆ ಪತ್ರ ಬರೆದು ಅನುಮತಿ ಕೋರುತ್ತೇನೆ. ಅಧ್ಯಯನಕ್ಕೆ ಸಹಾಯಕರೊಬ್ಬರನ್ನು ನೇಮಿಸಿಕೊಂಡು 6 ತಿಂಗಳು ಕ್ಷೇತ್ರ ಕಾರ್ಯ ಕೈಗೊಳ್ಳಬೇಕು. ಬಳಿಕ ಅಧ್ಯಯನ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ.
 ಡಾ.ಎಂ.ಆರ್. ಗಂಗಾಧರ್, ಮೈಸೂರು ವಿವಿ ಮಾನವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ
 ಬಿ. ಶೇಖರ್ ಗೋಪಿನಾಥಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.