ಮಳೆ ಅಬ್ಬರಕ್ಕೆ ಮುರಿದುಬಿದ್ದ ಚಾವಣಿ
ಹುಣಸೂರು: ತಾಲೂಕಿನಲ್ಲಿ ಬಿರುಗಾಳಿ ಮಳೆಯ ಆರ್ಭಟ ಮುಂದುವರಿದಿದ್ದು, ಮಂಗಳವಾರ ಸಂಜೆಯಿಂದ ರಾತ್ರಿವರೆಗೆ ಬಿದ್ದ ಭಾರಿ ಮಳೆ, ಬಿರುಗಾಳಿಗೆ ಬಿಳಿಕೆರೆ ಹೋಬಳಿಗೆ ಸೇರಿದ ಗುರುಪುರ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ತಂತಿ ಮೇಲೆ ಮರಗಳು ಉರುಳಿ ಬಿದ್ದು, ಸಾಕಷ್ಟು ಹಾನಿಯಾಗಿದೆ. ಬುಧವಾರ ಸಂಜೆ ಮತ್ತೆ ಮಳೆಯ ಅಬ್ಬರ ಮುಂದುವರಿದಿದೆ.
ಗುರುಪುರ ಸರ್ವೆ ನಂ.25, ಗೌಡನಕಟ್ಟೆ, ಹೊಸವಾರಂಚಿ ಗುರುಪುರ, ಮಾಜಿ ಗ್ರಾಮಗಳಲ್ಲಿ ಬಿರುಗಾಳಿ ಮಳೆಗೆ ಸಿಲುಕಿ ನೂರಾರು ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದು, ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಮನೆಗಳ ಮೇಲೂ ಮರಬಿದ್ದಿವೆ. ಮಾವಿನ ಕಾಯಿಗಳು ಉದುರಿವೆ. ಮನೆಗಳ ಚಾವಣಿಗಳು ಹಾರಿಹೋಗಿವೆ. ಹಲವಾರು ರಸ್ತೆಗಳು ಕೊಚ್ಚಿಹೋಗಿವೆ. ಈ ಮಳೆಯೂ ಬೆಳೆಗೆ ಸಾಕಷ್ಟು ಅನುಕೂಲವಾಗಿದ್ದರೂ ರೈತರ ಬದುಕಿನ ಮೇಲೆ ಚೆಲ್ಲಾಟ ನಡೆಸಿದೆ. ಕಲ್ನಾರು ಶೀಟ್ ಚೂರುಬಿದ್ದು, ಮಹಿಳೆಯೊಬ್ಬರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊಸವಾರಂಚಿಯ ಜಯಮ್ಮರ ಮನೆಯ ಹೆಂಚು, ಕಲ್ನಾರ್ ಶೀಟ್ ಸುಮಾರು ಮೈಲು ದೂರಕ್ಕೆಸೆದಿದೆ. ಹುಣಡಿಮಾಳ ವೇಲು ಅವರ ಮನೆ ಹೆಂಚು ಹಾರಿ ಹೋಗಿದೆ. ಅಲ್ಲದೆ, ಶಿವಣ್ಣೇಗೌಡರಿಗೆ ಸೇರಿದ ಮನೆ ಚಾವಣಿಯ ಕಲ್ನಾರು ಶೀಟ್ ಕುಸಿದು ಬಿದ್ದು, ಪತ್ನಿ ಪುಟ್ಟಮ್ಮರಿಗೆ ತೀವ್ರ ಪೆಟ್ಟುಬಿದ್ದು, ಹುಣಸೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಚನ್ನಕೇಶವರಿಗೆ ಸೇರಿದ ಮನೆ ಮುಂದಿನ ತೆಂಗಿನ ಮರ ಬಿದ್ದು, ಚಾವಣಿ ಸಂಪೂರ್ಣ ಹಾಳಾಗಿದೆ. ಕುಮಾರ, ಜಯರಾಮ್, ನಾಗೇಗೌಡ, ಮಂಜು ಅವರಿಗೆ ಸೇರಿದ ಮನೆಗಳ ಚಾವಣಿ ಶೀಟ್‌ಗಳು ಹಾರಿಹೋಗಿದ್ದು, ಮನೆಯೊಳಗಿದ್ದ ಪಡಿತರ ಪದಾರ್ಥಗಳು ನೀರಿನಲ್ಲಿ ತೋಯ್ದು ನಾಶವಾಗಿದೆ.
ಸರ್ವೆ ನಂ. 25-26 ಹಾಗೂ ವಾರಂಚಿ, ಮಾಜಿ ಗುರುಪುರಗಳಲ್ಲಿ ಹೊಲ ಹಾಗೂ ರಸ್ತೆ ಬದಿಯಿದ್ದ ನೂರಕ್ಕೂ ಹೆಚ್ಚು ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿಬಿದ್ದು, ಸಾಲು ಸಾಲಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಲ್ಲದೆ ಗುರುಪುರ ಹುಂಡಿಮಾಳ ರಸ್ತೆಯಲ್ಲಿ ಮೂವತ್ತಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಇದೇ ವೇಳೆ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಅನಾಹುತ ತಪ್ಪಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

