ಕಮಲದಿಂದ ಕಳಚಿದ ವಜ್ಜಲ್
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಏ.3
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಬಹುಮತದಿಂದ ಆಯ್ಕೆಯಾಗಿದ್ದ ಶಾಸಕ ಮಾನಪ್ಪ ವಜ್ಜಲರು ಬುಧವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿರುವುದರಿಂದ ಕ್ಷೇತ್ರದ ಜನರನ್ನು ಎಡೆಬಿಡದೆ ಕಾಡುತ್ತಿದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ.
ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ 2008ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಯ್ಕೆಯಾದ ಸಂಭ್ರಮದಲ್ಲಿ ಶಾಸಕ ಮಾನಪ್ಪ ವಜ್ಜಲರು ಆರಂಭದಲ್ಲಿ ಬಿಜೆಪಿ ಪಕ್ಷ ಸಂಘಟನೆ ಜೊತೆಗೆ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳುವತ್ತ ಉತ್ಸುಕತೆ ತೋರಿದ್ದರು. ಕ್ರಮೇಣ ರೆಡ್ಡಿಗಳ ಭಿನ್ನಮತದ ಗುಂಪಿನೊಂದಿಗೆ ಗುರುತಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಸ್ಪಂದಿಸುತ್ತಿಲ್ಲ. ನನ್ನ ಗಮನಕ್ಕೆ ತರದೆ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆಂದು ಆರೋಪಿಸಿ ಬಂಡಾಯದ ಗುಂಪಿನಲ್ಲಿ ಕಾಣಿಸಿಕೊಂಡರು.
ವಿಪ್ ಉಲ್ಲಂಘನೆ: ನಂತರ ಸಿಎಂ ವಿರುದ್ಧ ತಿರುಗಿಬಿದ್ದ 11 ಜನ ಶಾಸಕರ ಬಂಡಾಯ ತಂಡದಲ್ಲಿ ಕಾಣಿಸಿಕೊಂಡ ವಜ್ಜಲರು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದರು. ಅಲ್ಲದೆ ಸಿಎಂ ವಿರುದ್ಧ ಅವಿಶ್ವಾಸ ನಿರ್ಣಯ ಸಭೆಗೆ ಹಾಜರಾಗಲು ವಿಪ್ ಜಾರಿಯಾಗಿದ್ದರೂ, ಅನಾರೋಗ್ಯದ ನೆಪದಿಂದ ಬಹುಮತ ಸಾಬೀತು ಸಭೆಗೆ ಗೈರು ಹಾಜರಾಗಿದ್ದರು. ಇದರಿಂದ ವಿಪ್ ಉಲ್ಲಂಘನೆ ಆರೋಪದ ಮೇಲೆ ಶಾಸಕ ಮಾನಪ್ಪ ವಜ್ಜಲರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿತ್ತು. ಇದರಿಂದ ಪಕ್ಷದ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಸರ್ಕಾರದಲ್ಲಿ ಕಡೆಗಣಿಸಲ್ಪಟ್ಟರು.
ನಂತರ ಬಿಜೆಪಿಯಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಾದ ಶಾಸಕರು ಜಿಪಂ, ತಾಪಂ ಚುನಾವಣೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಶಾಸಕ ವಜ್ಜಲರನ್ನು ದೂರ ಇಟ್ಟು ಚುನಾವಣೆ ನಡೆಸಿದರು.
ಜೆಡಿಎಸ್‌ನತ್ತ ಒಲವು: ಅಲ್ಲದೆ ಎಪಿಎಂಸಿ ಚುನಾವಣೆ ನಿಮಿತ್ತ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿಯೂ ದೂರ ಉಳಿಸಲಾಗಿತ್ತು. ಇದರಿಂದ ಶಾಸಕ ವಜ್ಜಲರು ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿ ಪರೋಕ್ಷವಾಗಿ ಜೆಡಿಎಸ್ ಕಡೆಗೆ ವಾಲುವ ಲಕ್ಷಣಗಳು ಕಂಡು ಬಂದವು. ನಂತರದ ದಿನಗಳಲ್ಲಿ ಶಾಸಕ ವಜ್ಜಲರು ಬಿಜೆಪಿ ತಾಲೂಕು ಅಧ್ಯಕ್ಷರು ಹಾಗೂ ಮುಖಂಡರ ಹಮ್ಮಿಕೊಳ್ಳುವ ಸಭೆ, ಸಮಾರಂಭಗಳಲ್ಲಿ ಭಾಗವಹಿಸದೆ ನಿರ್ಲಕ್ಷ್ಯ ತೋರುತ್ತಾ ಬಂದರು. ಅಲ್ಲದೆ ಕೆಲ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ತೊರೆಯುವಲ್ಲಿ ನಿರತರಾದರು.
ಗುಪ್ತ ಮಾತುಕತೆ: ಏತನ್ಮಧ್ಯೆ ಸರ್ಕಾರದ ಮೂರು ವರ್ಷ ಅವಧಿ ಪೂರ್ಣಗೊಂಡ ಬಳಿಕ ಶಾಸಕ ವಜ್ಜಲರು ಬಿಜೆಪಿ ವರಿಷ್ಠರೊಂದಿಗೆ ಗುಪ್ತ ಮಾತುಕತೆ ನಡೆಸಿ ಬಿಜೆಪಿಯಲ್ಲೇ ಉಳಿಯಲು ಶತ ಪ್ರಯತ್ನ ನಡೆಸಿ ಸ್ಪಲ್ಪ ಮಟ್ಟಿಗೆ ಯಶಸ್ಸು ಸಾಧಿಸಿದರು. ಅಲ್ಲದೆ ಅಂದು ಬಿಜೆಪಿಗೆ ಶಾಸಕ ಮಾನಪ್ಪ ವಜ್ಜಲ್ ಅನಿವಾರ್ಯ ಎನ್ನುವ ಸ್ಥಿತಿ ತಲುಪಿತ್ತು.
ನಂತರ ಲಿಂಗಸ್ಗೂರಲ್ಲಿ ಜೆಡಿಎಸ್‌ನಿಂದ ಸಮಾವೇಶ ಹಮ್ಮಿಕೊಂಡು ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕ ವಜ್ಜಲರ ಸಹೋದರ ನಾಗಪ್ಪ ವಜ್ಜಲ ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಶಾಸಕ ಮಾನಪ್ಪ ವಜ್ಜಲ್ ಐದು ವರ್ಷಗಳ ಆಡಳಿತ ಅವಧಿಯ ಅಭಿವೃದ್ಧಿ ಸಾಧನೆ ಗಮನಿಸಿದರೆ ಕ್ಷೇತ್ರಕ್ಕೆ ಮಹತ್ವದ ನೂತನ ಯೋಜನೆಗಳು ಮಂಜೂರು ಮಾಡಿಸಿಲ್ಲ. ಹೇಳಿಕೊಳ್ಳುವಂತಹ ಅಭಿವೃದ್ಧಿ ಸಾಧಿಸಿಲ್ಲವೆಂಬ ಆರೋಪಗಳ ಮಧ್ಯೆಯೂ ವಿವಿಧ ಕಾಮಗಾರಿ ಕೆಲಸಗಳಿಗೆ ಚಾಲನೆ, ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಮಾಡಿದರು.
ಇತ್ತ ಅವರ ಸಹೋದರ ನಾಗಪ್ಪ ವಜ್ಜಲರು ಜೆಡಿಎಸ್ ಸಂಘಟನೆಯತ್ತ ಗಮನ ಹರಿಸುತ್ತಾ ಬಂದರು. ಇದರಿಂದ ಶಾಸಕ ವಜ್ಜಲರು ಯಾವ ಪಕ್ಷದಲ್ಲಿದ್ದಾರೆಂಬುದೇ ಕ್ಷೇತ್ರದ ಜನತೆಗೆ ಹಲವು ಗೊಂದಲ ಉಂಟು ಮಾಡಿತು.
ಸೇರ್ಪಡೆ ಮುನ್ಸೂಚನೆ: ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕ ಮಾನಪ್ಪ ವಜ್ಜಲರು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಬಹಿರಂಗವಾಗಿ ಪ್ರಚಾರ ನಡೆಸುವ ಮೂಲಕ ಜೆಡಿಎಸ್ ಸೇರ್ಪಡೆ ಕುರಿತು ಮುನ್ಸೂಚನೆ ನೀಡಿದ್ದರು. ಅದರಂತೆ ಏ.3ರಂದು ಬುಧವಾರ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ತಮ್ಮ ರಾಜಿನಾಮೆ ಸಲ್ಲಿಸುವ ಮೂಲಕ ಕ್ಷೇತ್ರದ ಜನರ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಜೆಡಿಎಸ್‌ನಿಂದ ಸ್ಪರ್ಧೆ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಸೇರ್ಪಡೆಗೊಂಡು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸುವ ಘಟಾನುಘಟಿ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ನಡೆಸಿ ಯಾವ ರೀತಿ ಚುನಾವಣೆ ಎದುರಿಸಲಿದ್ದಾರೆಂಬುದನ್ನು ಕಾದುನೋಡಬೇಕಿದೆ.
- ಅಮರೇಶಸ್ವಾಮಿ ಬಲ್ಲಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

