ಬೇಸಿಗೆ: ಕಚೇರಿ ವೇಳೆ ಬದಲು
ರಾಯಚೂರು: ಜಿಲ್ಲೆಯಲ್ಲಿರುವ ಸರ್ಕಾರಿ ಕಚೇರಿಗಳು ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಕಾರ್ಯನಿರ್ವಹಣೆಯ ಸಮಯದಲ್ಲಿ ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ಕಾರ್ಯನಿರ್ವಹಣೆ ಸಯಮದಲ್ಲಿ ಮಾರ್ಪಾಟು ಮಾಡಿದ್ದು, ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರ ವರೆಗೆ ಕಚೇರಿಗಳು ಕೆಲಸ ನಿರ್ವಹಿಸಲಿವೆ. ಗುಲ್ಬರ್ಗ ವಿಭಾಗದ ರಾಯಚೂರು, ಗುಲ್ಬರ್ಗ, ಯಾದಗಿರಿ, ಬೀದರ್, ಬಳ್ಳಾರಿ, ಕೊಪ್ಪಳ ಹಾಗೂ ಬೆಳಗಾವಿ ವಿಭಾಗದ ವಿಜಾಪುರ ಮತ್ತು ಬಾಗಲಕೋಟೆಗಳಲ್ಲಿ ಈ ಕೆಲಸದ ವೇಳೆಯಲ್ಲಿ ಬದಲಾವಣೆ ಜಾರಿಯಲ್ಲಿರಲಿದೆ ಎಂದು ಡಿಸಿ ಕಚೇರಿ ಪ್ರಕಟಣೆ ತಿಳಿಸಿದೆ.
ಇಂದು ಬೀಳ್ಕೊಡುಗೆ
ರಾಯಚೂರು: ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಏ.7ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನಿವೃತ್ತ ಅಧಿಕಾರಿ ಎಚ್.ಆರ್. ಹವಾಲ್ದಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಜಿಲ್ಲಾ ನೋಂದಣಾಧಿಕಾರಿಗಳಾದ ಎಂ.ಎನ್. ಜಿಂಗದ್, ಪಿ.ಸೋಮಶೇಖರ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
ಮೇಲ್ವಿಚಾರಕಗೆ ಪ್ರಶಸ್ತಿ
ರಾಯಚೂರು: ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಬ್ದುಲ್ ನಬಿ ಹಿರಿಯ ಪ್ರಯೋಗ ಶಾಲಾ ಮೇಲ್ವಿಚಾರಕರಿಗೆ ರಾಜ್ಯಮಟ್ಟದ ಅತ್ಯುತ್ತಮ ಹಿರಿಯ ಪ್ರಯೋಗ ಶಾಲಾ ಮೇಲ್ವಿಚಾರಕರು ಎಂಬ ಪ್ರಶಸ್ತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
'ಉತ್ತಮರ ಆದರ್ಶ ಅಳವಡಿಸಿಕೊಳ್ಳಿ'
ಸುರಪುರ: ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಆದರ್ಶವನ್ನು ಪಾಲಿಸುವುದರಿಂದ ಮಾದರಿ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಡಾ. ಬಾಬು ಜಗಜೀವನರಾಂ ಅವರಂಥ ಆದರ್ಶ ಪುರುಷರ ತತ್ವಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು ಎಂದು ಗೃಹ ರಕ್ಷಕ ದಳದ ಕಮಾಂಡಂಟ್ ಯಲ್ಲಪ್ಪ ಹುಲಕಲ್ ಕರೆ ನೀಡಿದರು.ಸಮೀಪದ ದೀವಳಗುಡ್ಡ ಗ್ರಾಮದ ಮಾದರ ಚನ್ನಯ್ಯ ವೃತ್ತದಲ್ಲಿ ಚನ್ನಯ್ಯ ಯುವಕ ಸಂಘ ಏರ್ಪಡಿಸಿದ್ದ ಡಾ. ಬಾಬು ಜಗಜೀವನರಾಂ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಡಾ. ಜಗಜೀವನರಾಂ ಅವರು ದಲಿತ ವರ್ಗದಲ್ಲಿ ಜನಿಸಿ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ಸಮಾಜಕ್ಕೆ ಸಂದ ಗೌರವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜದ ಬಂಧುಗಳು ನಡೆದು ಸಮೃದ್ದ ಬದುಕು ಮಾಡಿಕೊಂಡಾಗ ಅವರ ಜಯಂತಿಗೊಂದು ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು ಅವರ ಸಂದೇಶ ತತ್ವಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು.ಪುರಸಭೆಯ ನೂತನ ಸದಸ್ಯೆ ರಾಣಿ ಸರಿತಾ ದೇವಿಯವರನ್ನು ಮತ್ತು ಸಮಾಜದ ಹಿರಿಯ ಮುಖಂಡ ದುರ್ಗಪ್ಪ ಗೋಗಿಕರ್ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಜಯಂತಿಯ ಅಂಗವಾಗಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಹಲಗೆ ಬಾರಿಸುವ ಮೂಲಕ ಯುವಕರು ಸಂಭ್ರಮಿಸಿದರು. ಸಮಾಜದ ಮುಖಂಡರಾದ ಬಾಗಪ್ಪ ತೋಲೆನೋರ್, ರಾಜುತೋಲೆನೋರ್, ಚಂದ್ರು ದೊಡಮನಿ, ಮಾನಪ್ಪ ಬುಡ್ಡಾ, ಮಲ್ಲಪ್ಪ ಮದ್ಲಿ, ಭಿಮಪ್ಪ ದೊಡ್ಮನಿ, ಪರಶುರಾಮ ಗೋಗಿ, ಬಸ್ಸು ಕಡಿಮನಿ, ಚೆನ್ನಿಗಪ್ಪ ತೋಲೆನೋರ್, ಕೃಷ್ಣ ಕಡಿಮನಿ, ದೇವಪ್ಪ, ಭೀಮಣ್ಣ ವೀರಘಟ್ಟಿ ಇತರರು ಇದ್ದರು.
ಡಿಕ್ಕಿ: ವ್ಯಕ್ತಿ ಸಾವು
ಶಹಾಪುರ: ತಾಲೂಕಿನ ಶಿರವಾಳ ಗ್ರಾಮದಿಂದ ದೋರನಹಳ್ಳಿಗೆ ಕಲ್ಲು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ, ಟ್ರ್ಯಾಕ್ಟರ್ನಲ್ಲಿದ್ದ ಕಾರ್ಮಿಕ ಮೃತಪಟ್ಟ ಘಟನೆ ತಾಲೂಕಿನ ದೋರನಹಳ್ಳಿ ಬಳಿ ಶನಿವಾರ ಸಂಭವಿಸಿದೆ. ಶರಣಪ್ಪ ಮಲ್ಲಪ್ಪ ಸಗರಕರ್ ಸ್ಥಳದಲ್ಲೇ ಮೃತಪಟ್ಟ ಕಾರ್ಮಿಕ. ಘಟನೆಯಲ್ಲಿ ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗುಲ್ಬರ್ಗ ಆಸ್ಪತ್ರೆಯಲ್ಲಿ ದಾಖಲಿಸಿದೆ. ಸ್ಥಳಕ್ಕೆ ಪಿಎಸ್ಐ ಸುನಿಲ್ ಮೂಲಿಮನಿ ಭೇಟಿ ನೀಡಿ ಪರಿಶೀಲಿಸಿದರು. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಗಾಯ
ಗುಲ್ಬರ್ಗ: ಕಮಲಾಪುರ ಪೊಲೀಸ್ ಠಾಣೆಗೆ ಜರನಪ್ಪ (ದಾಸರವಾಡಿ, ಬಸವ ಕಲ್ಯಾಣ) ಮತ್ತು ಹಣಮಂತಪ್ಪ ತಂದೆ ನಿಂಗಪ್ಪ ಗೊಲ್ಲರ ಬೈಕ್ ಸವಾರಿಯಲ್ಲಿ ಮುಡಬಿಗೆ ಹೊರಟಿದ್ದಾಗ ಕಮಲಾಪುರ ಮಾರ್ಗದಲ್ಲಿ ಹಣಮಂತಪ್ಪಾ ಈತನು ಬೈಕ್ನ್ನು ಅತಿವೇಗವಾಗಿ ಚಲಾಯಿಸಿ ಅಪಘಾತ ಪಡಿಸಿದ್ದರಿಂದ ಗಾಯಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

