ರಸ್ತೆ ಮಧ್ಯೆ(ದ್ಯ) ಮಾರಾಟ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮುದಗಲ್ ಏ.9
ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಮದ್ಯದ ಬಾಟಲಿಗಳು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದ್ದು, ಅಬಕಾರಿ ಇಲಾಖೆ ಕಂಡು ಕಾಣದವರಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಸರ್ಕಾರ ತಾಂಡಾಗಳಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಕೆ ತಡೆಯಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅಲ್ಲದೆ ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಾರಾಯಿ ಮುಕ್ತ ಗ್ರಾಮಗಳೆಂದು ಘೋಷಣೆಗಳನ್ನು ಮಾಡಿದೆ. ಆದರೆ ಇದ್ಯಾವುದೂ ಜಾರಿಯಲ್ಲಿ ಇಲ್ಲ. ಕೇವಲ ದಾಖಲೆಗಳಲ್ಲಿ ಮಾತ್ರ ಘೋಷಣೆಗಳು ಎನ್ನುವಂತಾಗಿದೆ. ತಾಲೂಕಿನ ಕುಗ್ರಾಮಗಳಲ್ಲಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡಲಾಗುತ್ತಿದೆ.
ಲಂಚಕ್ಕೆ ಶರಣು: ಲಿಂಗಸ್ಗೂರು ತಾಲೂಕಿನ ಪ್ರತಿ ಹಳ್ಳಿಗಳ ಮನೆಗಳಲ್ಲಿ ಮಹಿಳೆಯರು, ಪಾನ್ ಅಂಗಡಿ, ಹೋಟೆಲ್ ಸೇರಿದಂತೆ ಸಂಸಾರದ ಮನೆಗಳಲ್ಲೂ ಮದ್ಯ ಮಾರಾಟ ದಂಧೆ ನಡೆದಿದೆ. ಈ ದಂಧೆಯಲ್ಲಿ ಮಹಿಳೆಯರು, ಮಕ್ಕಳು ಭಾಗಿಯಾಗಿರುವುದು ಅಘಾತಕಾರಿ ಸಂಗತಿಯಾಗಿದೆ. ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಪಟ್ಟಣಗಳಲ್ಲಿರುವ ಮದ್ಯದ ಅಂಗಡಿಯವರು ಬಾಟಲಿಗಳನ್ನು ಅನಧಿಕೃತವಾಗಿ ಮಾರಾಟ ಮಾಡಲು ನೀಡುತ್ತಿರುವುದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದರೂ, ಅವರು ಲಂಚಕ್ಕೆ ಕೈ ಚಾಚಿ ಮೌನಕ್ಕೆ ಶರಣಾಗಿದ್ದಾರೆ.
ಪ್ರತಿ ಗ್ರಾಮಗಳಲ್ಲಿ 100 ರಿಂದ 200 ಬಾಟಲಿಗಳು ಮಾರಾಟವಾಗುತ್ತಿದ್ದರಿಂದ ಮದ್ಯದ ಅಂಗಡಿ ಮಾಲೀಕರು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮದ್ಯ ಬಾಟಲಿ ಮಾರಾಟ ಮಾಡಲು ಆಸಕ್ತರಾಗಿದ್ದಾರೆ.
ಲೈಸನ್ಸ್ ನೀಡಿದವರಾರು?: ಮಟ್ಟೂರು ಗ್ರಾಮ ಒಂದರಲೇ ಪ್ರತಿ ದಿನ 500 ರಿಂದ 700 ಬಾಟಲಿಗಳು ಮಾರಾಟವಾಗುತ್ತವೆ ಎಂದು ಹೇಳಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಿಯರ್, ಒರಿಜಿನಲ್ ಚಾಯ್ಸ್, ತ್ರಿಬಲ್ ಎಕ್ಸ್ ರಮ್, ಸೇರಿದಂತೆ ಎಲ್ಲಾ ರೀತಿಯ ಮದ್ಯದ ಬಾಟಲಿಗಳು ಗ್ರಾಮಗಳಲ್ಲಿ ದೊರೆಯುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡಲು ಲೈಸನ್ಸ್ ನೀಡಿದವರಾರು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಈ ಅನಧಿಕೃತ ಮದ್ಯ ಮಾರಾಟಗಾರರೊಂದಿಗೆ ಶಾಮಿಲಾಗಿದ್ದಾರೆ ಎಂದು ಸಂಶಯ ವ್ಯಕ್ತವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ರಾಜಾರೋಷವಾಗಿ ನಡೆದಿದ್ದರಿಂದ ಪ್ರತಿ ಗ್ರಾಮಗಳಲ್ಲಿ ಕುಡುಕರ ಹಾವಳಿ ಹೆಚ್ಚಿದೆ. ಜಗಳಗಂಟರು ಹೆಚ್ಚಿದ್ದರಿಂದ ನೆಮ್ಮದಿ ಹಾಳಾಗಿದೆ ಎಂದು ಅನೇಕ ಗ್ರಾಮಗಳಲ್ಲಿ ಮಹಿಳೆಯರು ಆರೋಪಿಸಿದ್ದಾರೆ. ಅಬಕಾರಿ ಅಧಿಕಾರಿಗಳು ಇನ್ನು ಮುಂದಾದರೂ ಅನಧಿಕೃತ ಮದ್ಯ ಮಾರಾಟ ಮಾಡುವುದನ್ನು ತಡೆಯಬೇಕು. ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

