ಸುರಾನಾ ನೌಕರರ ಪ್ರತಿಭಟನೆ
ಕಾರ್ಮಿಕ ವಿರೋಧಿ ನೀತಿಗೆ ಖಂಡನೆ ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ ರಾಯಚೂರು ಏ.22
ಸರಾನಾ ಕಂಪನಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಾಗೂ ವಜಾಗೊಂಡ 173 ಜನ ನೌಕರರ ಪುನಾ ನೇಮಕಕ್ಕೆ ಆಗ್ರಹಿಸಿ ಸೋಮವಾರ ನಗರದಲ್ಲಿ ಸಿಐಟಿಯು ನೇತೃತ್ವದಲ್ಲಿ ಸುರಾನಾ ಕಂಪನಿಯ ನೌಕರರ ಸಂಘದವರು ಪ್ರತಿಭಟನೆ ನಡೆಸಿದರು.
ನಗರದ ವೀರಶೈವ ಕಾಲೇಜಿನ ಬಳಿಯ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸುರಾನಾ ಕಂಪನಿ ಆಡಳಿತ ವರ್ಗದವರು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟಕ್ಕಿಳಿಯುವ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ದನಿ ಎತ್ತಿದವರ ದಮನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿದ ಕಾರ್ಮಿಕರು ಮತ್ತು ಸಂಘದ ಪ್ರಮುಖರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿರುವ ಆಡಳಿತ ಮಂಡಳಿಯ ವಿರುದ್ಧ ದನಿ ಎತ್ತಿದವರನ್ನು ದಮನ ಮಾಡುವ ಕಾರ್ಯ ಕಂಪನಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಗುಲ್ಬರ್ಗಾ ಕಾರ್ಮಿಕ ಆಯುಕ್ತರ ಕಚೇರಿ ದೂರು ಸಲ್ಲಿಸಿದಾಗ, ಆಯುಕ್ತರು ಸಂಧಾನದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಕಂಪನಿಗೆ ಸೂಚಿಸಿದ್ದರೂ ಕಂಪನಿಯು ಕಾರ್ಮಿಕ ಆಯುಕ್ತರು ನಡೆಸಿದ ಸಭೆಯ ನಡಾವಳಿಗಳಿಗೆ ಸಹಿ ಮಾಡದೇ ಉದ್ಧಟತನ ಪ್ರದರ್ಶಿಸಿದೆ ಎಂದು ದೂರಿದರು.
6ಸಾವಿರ ನಿಗದಿ ಮೇತನಕ್ಕೆ ಆಗ್ರಹ: ಹೋರಾಟದಲ್ಲಿ ಪಾಲ್ಗೊಂಡಿರುವ 173 ನೌಕರರನ್ನು ಸೇವೆಯಿಂದ ವಜಾಗೊಳಿಸಿರುವ ಕಂಪನಿಯು ಪುನಾ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಕಳೆದ ಅನೇಕ ವರ್ಷಗಳಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಸೇವೆ ಕಾಯಮಾತಿ ಆದೇಶ ಪತ್ರ ನೀಡಬೇಕು. ಕನಿಷ್ಟ ಮೂಲ ವೇತನವನ್ನು 6ಸಾವಿರ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಮೂಲವೇತನಕ್ಕೆ ಅನುಸಾರ ಭತ್ಯೆ, ವಿದ್ಯಾರ್ಹತೆಗ ಮತ್ತು ಅನುಭವಕ್ಕೆ ಅನುಗುಣವಾಗಿ ಮುಂಬಡ್ತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಅವರು ಒತ್ತಾಯಿಸಿದರು.
ವೇತನ ಹೆಚ್ಚಳ, ರಿಯಾಯಿತಿ ದರದಲ್ಲಿ ಕ್ಯಾಂಟೀನ್ ಸೌಲಭ್ಯ, ವೈದ್ಯಕೀಯ ಸೌಲಭ್ಯ ಸೇರಿದಂತೆ ಸರ್ಕಾರ ರಜೆ ದಿನಗಳಂದು ರಜೆ ನೀಡಿಕೆ ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಕಾರ್ಮಿಕರು, ಕೂಡಲೇ ಜಿಲ್ಲಾಧಿಕಾರಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸುರಾನಾ ಕಂಪನಿಯ ಕಾರ್ಮಿಕರ ಹಿತ ಕಾಯಲು ಮುಂದಾಗುವಂತೆ ಒತ್ತಾಯಿಸಿದರು. ಸಿಐಟಿಯು ಮತ್ತು ಕಂಪನಿಯ ಕಾರ್ಮಿಕ ಸಂಘದ ಪ್ರಮುಖರಾದ ಪ್ರಸನ್ನಕುಮಾರ್, ಕೆ.ಜಿ. ವೀರೇಶ್, ರಾಜು, ಪದ್ಮಾ, ಪ್ರವೀಣ ರೆಡ್ಡಿ, ವೀರಭದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

