ರಾಯಚೂರು

ಕಟ್ಟಕಡೆಯ ರೈತರ 'ನೀರ್'ಲಕ್ಷ್ಯ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಆ.5
ಮಳೆ ಸುರಿದರೂ ತಪ್ಪಲಿಲ್ಲ ಬೆಳೆಗೆ ನೀರಿನ ಅಭಾವ. ಕಾಲುವೆಗೆ ನೀರು ಹರಿಸಿ ತಿಂಗಳಾಗುತ್ತಾ ಬಂದರೂ ರೈತರ ಗದ್ದೆಗಳಿಗೆ ತಲುಪದ ನೀರು. ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದರೂ ರೈತರ ಹೊಲಗಳಿಗಿಲ್ಲ ನೀರಿನ ಭಾಗ್ಯ. ತುಂಗಭದ್ರಾ ಎಡದಂಡೆ ಕಾಲುವೆಯ ರೈತರ ಗೋಳಿಗಿಲ್ಲ ಅಂತ್ಯ.
ತುಂಗಭದ್ರಾ ಎಡದಂಡೆ ಕಾಲುವೆಯ ಕಟ್ಟಕಡೆಯ ಭಾಗದಲ್ಲಿರುವ ರೈತರ ಗೋಳಿನ ಕಥೆಯಿದು.
ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾರಂಭಿಸಿ ತಿಂಗಳಾಗುತ್ತಿದೆ. ಆದರೆ ಕಾಲುವೆಯನ್ನೇ ನೆಚ್ಚಿಕೊಂಡ ರೈತರಿಗೆ ನೀರು ದೊರೆತಿಲ್ಲ. ಬತ್ತದ ನಾಟಿ ಮೇಲೆ ಅದರಿಂದ ಅಡ್ಡ ಪರಿಣಾಮವಾಗಿದೆ. ಅನೇಕ ರೈತರು ಬತ್ತದ ನಾಟಿಗೂ ಹಿಂದೇಟು ಹಾಕುವಂಥ ಸ್ಥಿತಿ ನಿರ್ಮಾಣವಾಗಿದೆ.
ಕಟ್ಟಕಡೆಯ ರೈತರಿಗೆ ನೀರಿಲ್ಲ: ಎಡದಂಡೆ ಕಾಲುವೆ ವ್ಯಾಪ್ತಿಯ ಮಾನವಿ, ರಾಯಚೂರು ತಾಲೂಕುಗಳಲ್ಲಿನ ರೈತರಿಗೆ ಕಳೆದ ಎರಡು ವರ್ಷದ ಭೀಕರ ಬರದಿಂದಾಗಿ ಅಣೆಕಟ್ಟೆಯಿಂದ ಹರಿಸಿದ ನೀರು ಗದ್ದೆಗಳಿಗೆ ಹರಿಯದೇ ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಪ್ರಸಕ್ತ ವರ್ಷ ಮಳೆ ಸುರಿದು ನದಿ ಉಕ್ಕಿ ಹರಿದರೂ ರೈತರಿಗೆ ನೀರಿಲ್ಲ ಎಂಬಂಥ ಸ್ಥಿತಿಯಿದೆ.
ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿನ ರೈತರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿನ ನೀರು ಪಡೆಯುತ್ತಿರುವುದು ಹಾಗೂ ನೀರನ್ನು ವ್ಯರ್ಥ ಹಳ್ಳಕ್ಕೆ ಹರಿಬಿಟ್ಟಿರುವುದು ಕಾಲುವೆಯ ಕಟ್ಟಕಡೆಯ ರೈತರಿಗೆ ನೀರಿಲ್ಲದಂತೆ ಮಾಡಿದೆ. ಕಾಲುವೆಗೆ ಕಳೆದ ತಿಂಗಳ 10ರಂದೇ ನೀರು ಹರಿಸಲಾಗಿದೆ. ಆದರೆ ಇದುವರೆಗೆ ಕಾಲುವೆಯ ಕಡೆಯ ಭಾಗದ 104ನೇ ಮೈಲ್ ಬಳಿ ನಿರೀಕ್ಷಿತ ಮಟ್ಟದಲ್ಲಿ ನೀರಿಲ್ಲ. ಅದೇ ರೀತಿ ಆನಂತರದಲ್ಲಿ ನೀರು ತಲುಪಿಯೇ ಇಲ್ಲ ಎಂಬ ಆರೋಪ ವ್ಯಾಪಕವಾಗಿದೆ.
ಸಚಿವರ ಮಾತಿಗೆ ಕಿಮ್ಮತ್ತಿಲ್ಲ: ನಿಗದಿಯಂತೆ ಕಾಲುವೆಯ 104ನೇ ಮೈಲ್ನಲ್ಲಿ 6 ಅಡಿ ನೀರಿದ್ದರೆ ಮಾತ್ರ ರೈತರಿಗೆ ನೀರು ಲಭ್ಯವಾಗುತ್ತದೆ. ಆದರೆ ಪ್ರಸಕ್ತ ಹಂಗಾಮಿಗೆ ಕಾಲುವೆಯಲ್ಲಿ ನೀರು ಹರಿಸಿದಾಗಿನಿಂದಲೇ ಎರಡು ಅಡಿ ನೀರಿದೆ.
ಕಾಲುವೆಯ 60,69ನೇ ಮೈಲ್ ನಲ್ಲಿಯೇ ನೀರಿನ ಪೋಲು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿರುವುದರಿಂದ 104ನೇ ಮೈಲ್ ನಲ್ಲಿ 2 ಅಡಿ ನೀರಿದೆ. ಇದನ್ನು ಕಾಲುವೆಯಿಂದ ಗದ್ದೆಗಳಿಗೆ ಹರಿಸಿಕೊಳ್ಳುವುದು ಅಸಾಧ್ಯದ ಮಾತು ಎಂಬುದು ರೈತರ ಅಳಲು.
ಈ ಮಧ್ಯೆ ತುಂಗಭದ್ರಾ ಎಡದಂಡೆ 104ನೇ ಮೈಲ್ ಕೆಳಭಾಗದ ರೈತರ ಹೋರಾಟ ಸಮಿತಿಯಿಂದ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಸಮರ್ಪಕ ನೀರೊದಗಿಸುವಂತೆ ಮನವಿ ಮಾಡಿದೆ. ಹಾಗೆಯೇ ಸಚಿವರು ನೀರಾವರಿ ಅಧಿಕಾರಿಗಳಿಗೆ ರೈತರ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದರೂ ಇದುವರೆಗೆ ಕ್ರಮ ಮಾತ್ರ ಜರುಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಹೋರಾಟ ಅನಿವಾರ್ಯ: ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು, ಈಗಾಗಲೇ ಸಚಿವರು, ಜಿಲ್ಲಾಧಿಕಾರಿಗೆ ನೀರಿಗಾಗಿ ಮನವಿ ಮಾಡಲಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ರೈತರೆಲ್ಲರೂ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿನ ರೈತರು ರಾಜಕೀಯವಾಗಿ ಪ್ರಭಾವ ಹೊಂದಿದ್ದು ಅವರ ನೀರಿನ ಹೆಚ್ಚುವರಿ ಬಳಕೆಗೆ ತಡೆಯೊಡ್ಡಲು ನೀರಾವರಿ ಅಧಿಕಾರಿಗಳು ಚಕಾರವೆತ್ತುತ್ತಿಲ್ಲ. ಜತೆಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಹೊಣೆಗಾರಿಕೆ ಮರೆತು ನೀರಿನ ನಿರ್ವಹಣೆಯಿಂದ ಜಾರಿಕೊಳ್ಳುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.