ನೀರು ಹಂಚಿಕೆ; ಮುಗಿಯದ ಗಲಾಟೆ
ಕನ್ನಡಪ್ರಭ ವಾರ್ತೆ , ಕಾರಟಗಿ , ಆ.6
ತುಂಗಭದ್ರಾ ಎಡದಂಡೆಯ 31ನೇ ವಿತರಣಾ ನಾಲೆಗೆ ನಿಗದಿಪಡಿಸಿದ ನೀರನ್ನು ಹಂಚಲು ಕೊನೆ ಮತ್ತು ಕೆಳ ಭಾಗದ ರೈತರು ಒತ್ತಾಯಿಸಿದ್ದು, ಅದಕ್ಕೆ ನೀರಾವರಿ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನು ಕೊನೆ ಮತ್ತು ಕೆಳ ಭಾಗದಲ್ಲಿ ನೀರಿಗಾಗಿ ಆತಂಕದ ವಾತಾವರಣ ಮುಂದುವರಿದಿದೆ.
ಗಂಗಾವತಿ ತಾಲೂಕಿನ ಕೊನೆ ಭಾಗದ ರೈತರು 31ನೇ ವಿತರಣಾ ನಾಲೆಗೆ ನಿಗದಿಪಡಿಸಿದ ನೀರು ಪೂರೈಸಲು ನೀರಾವರಿ ಅಧಿಕಾರಿಗಳೊಂದಿಗೆ ಕಾರಟಗಿಯಲ್ಲಿ ವಾದಿಸಿದರೆ, ಮತ್ತೊಂದಡೆ 31/6ಕ್ಕೆ ಹೆಚ್ಚಿನ ನೀರು ಪೂರೈಸಲು ಸಿಂಧನೂರು ತಾಲೂಕಿನ ಕೆಳ ಭಾಗದ ರೈತರು ಪಟ್ಟು ಹಿಡಿದರು. ರೈತರ ಒತ್ತಡಕ್ಕೆ ಮಣಿದ ನೀರಾವರಿ ಅಧಿಕಾರಿಗಳು ನೀರು ಪೂರೈಕೆಯಲ್ಲಿ ಸಮಾನತೆ ಕಾದುಕೊಳ್ಳುವುದಾಗಿ ಮಂಗಳವಾರ ಸಂಜೆ ಭರವಸೆ ನೀಡಿದ್ದಾರೆ.
ಇತ್ತೀಚಿಗೆ ನೀರಿಗಾಗಿ 31ನೇ ವಿತರಣಾ ನಾಲೆ 31/6ರ ಉಪ ಕಾಲುವೆ ವ್ಯಾಪ್ತಿಯ ಸಿಂಧನೂರು ತಾಲೂಕಿನ ಗಣೇಶ ಕ್ಯಾಂಪ್, ಚನ್ನಳ್ಳಿ, ಸಿದ್ದಾಂಪುರ, ಮಾವಿನಮಡು ಭಾಗದ ರೈತರು ತೂಬು ಧ್ವಂಸ ಗೊಳಿಸಿದ ಹಿನ್ನೆಲೆಯಲ್ಲಿ ಇಲ್ಲಿನ ನೀರಾವರಿ ಅಧಿಕಾರಿಗಳು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಐವರು ರೈತರ ವಿರುದ್ಧ ದೂರು ಸಲ್ಲಿಸಿದ್ದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗಂಗಾವತಿ ತಾಲೂಕಿನ ಕೊನೆ ಭಾಗದ ಬೂದುಗುಂಪಾ, ತಿಮ್ಮಾಪುರ, ಹಾಲಸಮುದ್ರ, ಕಕ್ಕರಗೋಳ, ಬೆನ್ನೂರ, ಈಳಿಗನೂರು ಗ್ರಾಮಗಳ ರೈತರು ಮತ್ತು ತುಂಗಭದ್ರಾ ಕಾಡಾದ ಮುಖ್ಯ ಎಂಜಿನಿಯರ್ ಎಚ್. ಮಂಜಪ್ಪ ಮತ್ತು ಮಲ್ಲಿಕಾರ್ಜುನ ಗುಂಗೆಯವರೊಂದಿಗೆ ಚರ್ಚಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸರ್ಕಾರದ ಆಸ್ತಿಯನ್ನು ಧ್ವಂಸ ಮಾಡಿದ ರೈತರನ್ನು ಕೂಡಲೇ ಬಂಧಿಸಲಾಗುವುದು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತರನ್ನು ಬಂಧಿಸಿದರೆ ಪರಿಣಾಮ ನೆಟ್ಟಗಿರಲ್ಲ: ಮತ್ತೊಂದಡೆ ಸಿಂಧನೂರು ತಾಲೂಕಿನ ಹಳ್ಳಿಗಳಿಗೆ ನೀರು ಪೂರೈಸುವ 31/6ರ ತೂಬು ಇರುವ ಸ್ಥಳಕ್ಕೆ ಭೇಟಿ ನೀಡಿದ ಸಿಂಧನೂರಿನ ಕಾಂಗ್ರೆಸ್ ಶಾಸಕ ಹಂಪನಗೌಡ ಬಾದರ್ಲಿ, ಯಾವುದೇ ಕಾರಣಕ್ಕೂ ರೈತರನ್ನು ಬಂಧಿಸಬಾರದು ಎಂದು ತಾಕೀತು ಮಾಡಿದರು.
ಕೊಪ್ಪಳ ಜಿಲ್ಲಾ ಸಚಿವರ ವಿರುದ್ಧ ಮಾತನಾಡುತ್ತಿಲ್ಲ. ಅವರು ತಮ್ಮ ಅನಿಸಿಕೆ ಹೇಳಿದ್ದಾರೆ. ನಾನು ನನ್ನ ಅನಿಸಿಕೆ ಹೇಳಿರುವೆ ಇದರಲ್ಲಿ ಯಾವುದೇ ಗೊಂದಲ ಉಂಟು ಮಾಡುವುದು ಬೇಡ ಎಂದರು.
ದೋಷಕ್ಕೆ ಕಾರಣ ರೈತರಲ್ಲ: 31/6ರ ವ್ಯಾಪ್ತಿಗಳಿಗೆ ನೀರು ಬಾರದ್ದಕ್ಕೆ ಉಂಟಾದ ಸಮಸ್ಯೆಗಳನ್ನು ಆಲಿಸಿದ ಸಿಂಧನೂರು ಶಾಸಕ ಬಾದರ್ಲಿ, ನೀರು ಪೂರೈಕೆ ಮತ್ತು ಕಾಲುವೆ ಆಧುನೀಕರಣದಲ್ಲಿನ ದೋಷಕ್ಕೆ ರೈತರಲ್ಲ ನೀವೇ ಕಾರಣ ಎಂದು ಸ್ಥಳಕ್ಕೆ ಭೇಟಿ ನೀಡಿದ ತುಂಗಭದ್ರಾ ಕಾಡಾ ವಲಯದ ಮುಖ್ಯ ಎಂಜಿನಿಯರ್ ಮಂಜಪ್ಪ ಮತ್ತು ಮಲ್ಲಿಕಾರ್ಜುನ ಗುಂಗೆ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು.
ಈ ನಡುವೆ ಧ್ವಂಸಗೊಂಡ ತೂಬನ್ನು ಸೋಮವಾರ ನೀರಾವರಿ ಸಿಬ್ಬಂದಿ ಮುಚ್ಚಿ ದೊಡ್ಡ ಕಲ್ಲು ಇಟ್ಟಿದ್ದರು. ನೆರೆದ ರೈತರು ರಾಯಚೂರು ಡಿಸಿ, ನೀರಾವರಿ ಅಧಿಕಾರಿಗಳ ಮುಂದೆ ನೀರಿಗೆ ಧುಮುಕಿ ಕಲ್ಲು ಎತ್ತಿ ಹಾಕಿ ಹೆಚ್ಚಿನ ನೀರು ಪಡೆಯುವಲ್ಲಿ ಯಶಸ್ವಿಯಾದರು.
ಬಿಗಿ ಪಟ್ಟು: ಒಂದು ಹಂತದಲ್ಲಿ 31ನೇ ವಿತರಣಾ ನಾಲೆ ನೀರು ಹರಿಯುವ ಪ್ರಮಾಣ ನಿಗದಿಪಡಿಸಿದ್ದೆಷ್ಟು ಎಂದು ರೈತರು ಅಧಿಕಾರಿಗಳನ್ನು ಪ್ರಶ್ನಿಸಿ, ತಮ್ಮ ಭಾಗಕ್ಕೆ ನಿಗದಿ ಪಡಿಸಿದ ಪ್ರಕಾರ ನೀರು ಪೂರೈಸಲಾಗುತ್ತಿದೆ ಎಂದು ಪ್ರಮಾಣಿಕರಿಸಿ ಬರೆದುಕೊಡಿ ಎಂದು ಪಟ್ಟು ಹಿಡಿದರು. ಇಲ್ಲವೆ ಕೂಡಲೇ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ಕೊನೆಯಲ್ಲಿ ಶಾಸಕ ಬಾದರ್ಲಿ ಹಂಪನಗೌಡ ರೈತರನ್ನು ಸಂತೈಸಿ, ಈಗ ತಾತ್ಕಾಲಿಕ ಪರಿಹಾರ ಒದಗಿಸಿ ತೂಬು ರಿಪೇರಿ ಮಾಡಿಸಿಕೊಳ್ಳಿ. ಡಿಸೆಂಬರ್ನಲ್ಲಿ ನೀರು ಪೂರೈಕೆ ಸ್ಥಗಿತ ಮಾಡಿದಾಗ ಕಾಲುವೆ ಮಾದರಿಯನ್ನು ಬದಲಾಯಿಸಿ. ಇನ್ಮುಂದೆ 31/6ಕ್ಕೆ ನಿಗದಿ ಪಡಿಸಿದ ಪ್ರಮಾಣದಲ್ಲಿಯೇ ನೀರು ಪೂರೈಕೆಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಹೇಳಿದ್ದರಿಂದ ಪರಿಸ್ಥಿತಿ ಶಾಂತವಾಯಿತು.
ಕಾರಟಗಿ, ಸಿಂಧನೂರು, ತುರ್ವಿಹಾಳದಿಂದ ಆಗಮಿಸಿದ ಪೊಲೀಸರು ಸ್ಥಳದಲ್ಲಿಯೇ ಬಿಡಾರ ಹೂಡಿದ್ದರು.
ದೂರು: ಭಾನುವಾರ ರಾತ್ರಿ 31/6ರ ತೂಬನ್ನು ಧ್ವಂಸ ಮಾಡ್ಟಿದ್ದಕ್ಕೆ ಚನ್ನಳ್ಳಿ ಭಾಗದ ಐವರ ವಿರುದ್ಧ ಕಾರಟಗಿ ನೀರಾವರಿ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದು ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ. ಸಿಂಧನೂರು ಗ್ರಾಮಿಣ ಠಾಣೆಯಲ್ಲಿ ಒಟ್ಟು ದಶರಥರೆಡ್ಡಿ, ಬಸವರಾಜಪ್ಪ, ನಾಗನಗೌಡ, ಪಾಲಾಕ್ಷಗೌಡ, ವಿಷ್ಣುವರ್ಧನ್ ರೆಡ್ಡಿ ಸೇರಿ ಇನ್ನಿತರರ ವಿರುದ್ಧ ನೀರಾವರಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಕಾಲುವೆಗಳಿಗೆ ಮಾಪಕ ಯಂತ್ರ: ತಂಗಡಗಿ
ಕಾರಟಗಿ: ತುಂಗಭದ್ರಾ ಎಡದಂಡೆ ವಿತರಣಾ ನಾಲೆಗಳಿಗೆ ಇನ್ಮುಂದೆ ಮಾಪಕ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
31ನೇ ವಿತರಣಾ ನಾಲೆ ವ್ಯಾಪ್ತಿಯ ಕೊನೆ ಭಾಗದ ಗಂಗಾವತಿ ತಾಲೂಕಿನ ಬೂದುಗಂಪಾ, ತಿಮ್ಮಾಪುರ, ಹಾಲಸಮುದ್ರ, ಕಕ್ಕರಗೋಳ ಸೇರಿದಂತೆ ಅದರ ವ್ಯಾಪ್ತಿಯ ಕೊನೆ ಭಾಗದ ರೈತರು ಮತ್ತು ಮುನಿರಾಬಾದ್ ವಲಯ ಮುಖ್ಯ ಎಂಜಿನಿಯರ್ ಮಂಜಪ್ಪ ಮತ್ತು ಮಲ್ಲಿಕಾರ್ಜುನ ಗುಂಗೆ ಅವರೊಂದಿಗೆ ಪ್ರತ್ಯೇಕವಾಗಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾತನಾಡಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಈಗಾಗಲೇ ಕಾಲುವೆ ಮತ್ತು ವಿತರಣಾ ನಾಲೆ ಸಮಸ್ಯೆ ಅರಿವಿಗೆ ಬಂದಿದೆ. ಈ ಕುರಿತು ರೈತರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಇನ್ಮುಂದೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕಾಲುವೆಗಳಿಗೆ ನಿಗದಿ ಪಡಿಸಿದ ನೀರು ಪೂರೈಕೆ ಮಾಡಲು ಪ್ರತಿಯೊಂದು ಜಾಕ್ವೆಲ್ಗಳಿಗೆ ಮಾಪಕ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಈ ಕುರಿತು ತಜ್ಞರು ಚರ್ಚಿಸಿದ್ದು ಜಾರಿಗೆ ತರಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

