ನಗರಸಭೆಯದ್ದು ಸುಖೀ ಕುಟುಂಬ
ಕನ್ನಡಪ್ರಭ ವಾರ್ತೆ , ರಾಯಚೂರು , ಆ.7
ರಾಯಚೂರು ನಗರಸಭೆ ಸುಖೀ ಕುಟುಂಬದ ಪರಿಕಲ್ಪನೆ ಅಡಿ ಕಾರ್ಯನಿರ್ವಹಿಸುತ್ತಿದೆ. ನಗರದ ನಿವಾಸಿಗಳು ತ್ಯಾಜ್ಯ, ಹದಗೆಟ್ಟ ರಸ್ತೆಗಳ ಮಧ್ಯೆಯೇ ಬದುಕು ಸಾಗಿಸುತ್ತಿದ್ದರೂ ನಗರಸಭೆಗೆ ಅದರ ಕಾಳಜಿಯಿಲ್ಲ. ನಗರದ ಸ್ವಚ್ಛತೆಗೆ ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ಮಂಜೂರಾಗುತ್ತಿದೆ. ಆದರೆ ಸ್ವಚ್ಛತೆ ಕಾರ್ಯ ಆಗುತ್ತಿಲ್ಲ ಎಂದು ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 20 ವರ್ಷಗಳಿಂದ ನಗರದ ಸ್ವಚ್ಛತೆ ಕಾರ್ಯ ವನ್ನು ಗುತ್ತಿಗೆ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಂತೆ ನಾಲ್ಕು ವಿಭಾಗಗಳಾಗಿ ನಗರವನ್ನು ವಿಂಗಡಿಸಿದ್ದು, ಐದು ವಾರ್ಡುಗಳಿಗೆ ಒಬ್ಬ ಗುತ್ತಿಗೆದಾರನಿಗೆ ಸ್ವಚ್ಛತೆ ಹೊಣೆ ವಹಿಸಲಾಗಿದೆ. ಗುತ್ತಿಗೆದಾರರು 50ರಿಂದ 70 ಜನ ಕಾರ್ಮಿಕರನ್ನು ನೇಮಿಸಿಕೊಂಡು ಸ್ವಚ್ಛತೆ ಕೈಗೊಳ್ಳಬೇಕೆಂದಿದೆ.
ಸ್ವಚ್ಛತೆಗೆ ಗಮನವಿಲ್ಲ: ಆದರೆ ಗುತ್ತಿಗೆದಾರರು ಕೇವಲ ಕೆಲವೇ ಕೆಲ ಕಾರ್ಮಿಕರನ್ನು ನೇಮಿಸಿಕೊಂಡು ಸ್ವಚ್ಛತೆ ಕಡೆಗಣಿಸಿ ಪ್ರತಿ ತಿಂಗಳು ನಗರಸಭೆಯ ಆಡಳಿತದಿಂದ ತಲಾ 4ರಿಂದ 5 ಲಕ್ಷ ಪಡೆಯುತ್ತಿದ್ದಾರೆ. ನಗರಸಭೆಯ ಆಡಳಿತ ಸಹ ನಗರದ ಸ್ವಚ್ಛತೆಗೆ ಗಮನಹರಿಸದೇ ಹಣ ಪಾವತಿಸುತ್ತಿದೆ ಎಂದು ಟೀಕಿಸಿದರು.
ನಗರಸಭೆ ಮತ್ತು ಗುತ್ತಿಗೆದಾರರ ಮಧ್ಯೆಯಿರುವ ಒಳಒಪ್ಪಂದಗಳಿಂದಾಗಿ ನಗರದ ಜನತೆಗೆ ಸ್ವಚ್ಛ ಪರಿಸರ ದೊರೆಯುತ್ತಿಲ್ಲ. ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ. ಸಿಬ್ಬಂದಿ ಕೊರತೆ ನೆಪದಲ್ಲಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಕಾರ್ಯ ಮಾಡುತ್ತಿದೆ. ಪರಿಸರ ಎಂಜಿನಿಯರ್ ಸೇರಿ ನಗರಸಭೆಯ ಎಲ್ಲ ಹಿರಿಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಜೀವನ ನಿರ್ವಹಣೆ ಕಷ್ಟ: ಜಿಲ್ಲಾಡಳಿತ ಸಹ ಈ ನಿಟ್ಟಿನಲ್ಲಿ ತೀವ್ರ ನಿರ್ಲಕ್ಷ್ಯ ತೋರುತ್ತಿದೆ. ಅದರಿಂದಾಗಿ ಸಾರ್ವಜನಿಕರಿಗೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ದಿನವೂ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿಯ ಭರವಸೆಯನ್ನು ಸುಪ್ರೀಂಕೋರ್ಟಿಗೆ ನೀಡಿರುವ ಸರ್ಕಾರ ನಗರಕ್ಕೆ ಸಂಬಂಧಿಸಿ ತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣ ಸೋತಿದೆ. ದಿನವೂ ಸಂಗ್ರಹವಾಗುವ 80 ಟನ್ ತ್ಯಾಜ್ಯದ ಪೈಕಿ ಕೇವಲ 20ರಿಂದ 30 ಟನ್ ಮಾತ್ರ ವಿಲೇವಾರಿಯಾಗುತ್ತಿದೆ. ಇನ್ನುಳಿದ ತ್ಯಾಜ್ಯ ರಸ್ತೆ, ಮಾವಿನಕೆರೆ ಮತ್ತಿತರೆಡೆ ಚೆಲ್ಲಲಾಗುತ್ತಿದೆ ಎಂದು ಟೀಕಿಸಿದರು.
ಪರಿಷತ್ ಬೆಂಬಲ: ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಅವರು ಕೂಡಲೇ ನಗರಸಭೆಯ ಕಾರ್ಯನಿರ್ವಹಣೆಯಿಂದಾಗುತ್ತಿರುವ ಅವ್ಯವಸ್ಥೆಯ ಕಡೆ ಗಮನಹರಿಸಬೇಕಿದೆ. ಶಾಸಕರು ಕೂಡಲೇ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಬಳಿ ನಿಯೋಗ ಕೊಂಡೊಯ್ಯುವ ಮೂಲಕ ಸಿಬ್ಬಂದಿ ಕೊರತೆಯ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಲು ಜನಸಂಗ್ರಾಮ ಪರಿಷತ್ ಬೆಂಬಲಿಸಲಿದೆ ಎಂದರು.
ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ: 371(ಜೆ)ನೇ ಅಡಿ ಸಂಪುಟ ಉಪಸಮಿತಿ ನೀಡಿದ ವರದಿಯು ಈ ಭಾಗದ ಜನರ ಶೇ. 95ರಷ್ಟು ಬೇಡಿಕೆಗಳನ್ನು ನಿಜವಾಗಿಸಿದೆ. ಹೈ.ಕ. ಹೋರಾಟಗಾರರ ಬೇಡಿಕೆಗಳು ಬಹುತೇಕ ಈಡೇರಿವೆ. ಆದರೆ ಕೆಲವರು ಅನಗತ್ಯವಾಗಿ ಪ್ರತ್ಯೇಕ ರಾಜ್ಯದ ಕೂಗೆಬ್ಬಿಸಿರುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜನಸಂಗ್ರಾಮ ಪರಿಷತ್ ಪ್ರಮುಖರಾದ ಡಾ. ರಜಾಕ್ ಉಸ್ತಾದ್, ರಾಮನಗೌಡ ಜಾಲಿಬೆಂಚಿ, ಮಲ್ಲನಗೌಡ ಇಂದುಪುರ, ಅಕ್ಬರ್ ಸಾಬ್, ವೆಂಕೋಬರಾವ್, ವೆಂಕಟೇಶ ಯಾದವ್, ಬಂದೇನವಾಜ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

