ಬನ್ನಿಗೋಳದಲ್ಲಿ ಸಪ್ತ ಭಜನೆ
ಮುದಗಲ್: ಸಮೀಪದ ಬನ್ನಿಗೊಳ ಗ್ರಾಮದಲ್ಲಿ ಮಳೆಗಾಗಿ ಸಪ್ತ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ಆರಾಧ್ಯ ದೇವರಾದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆ.12 ರಿಂದ 18ರವರೆಗೆ ಏಳು ದಿನಗಳವರೆಗೆ ದಿನದ 24 ಗಂಟೆ ಕಾಲ ಭಜನೆ ಮಾಡುವ ಮೂಲಕ ವರುಣನ ಕೃಪೆಗಾಗಿ ಭಜಿಸಲಾಗುತ್ತದೆ. ಮಳೆ ಇಲ್ಲದೇ ಬೆಳೆಗಳು ಒಣಗುತ್ತಿದ್ದರಿಂದ ರೈತರು ಕಂಗಾಲಾಗಿದ್ದು, ಮಳೆಗಾಗಿ ಶಿವನಾಮ ಸ್ಮರಣೆ ಮಾಡುತ್ತಿದ್ದಾರೆ.
ಕೃಷ್ಣಮೃಗ ಬೇಟೆ;
ಇಲಾಖೆ ಮೌನ
ಶಹಾಪುರ: ತಾಲೂಕಿನ ಬೀರನೂರು ಗ್ರಾಮದ ವ್ಯಾಪ್ತಿಯಲ್ಲಿ ಕೃಷ್ಣಮೃಗ(ಜಿಂಕೆ)ಗಳು ಕಾಣಿಸಿಕೊಳ್ಳುತ್ತಿದ್ದು, ಕೆಲವು ಅಪರಿಚಿತ ಬೇಟೆಗಾರರು ಕಳೆದ ವಾರದಿಂದ ನಿರಂತರವಾಗಿ ತಮ್ಮ ಆಟಾಟೋಪ ಮುಂದುವರಿಸಿದ್ದಾರೆ. ಆದರೂ ಅರಣ್ಯ ಇಲಾಖೆ ಮಾತ್ರ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ ಎಂದು ಗ್ರಾಮದ ಪರಶುರಾಮ ಮರಿಲಿಂಗಪ್ಪ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು ಬೇಟೆಗಾರರನ್ನು ವಿಚಾರಿಸಿದರೆ, ಸರ್ಕಾರ ನಮಗೆ ಬೇಟೆಯಾಡಲು ಪರವಾನಗಿ ಕೊಟ್ಟಿದೆ ಎನ್ನುತ್ತಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೆ ಅದು ನಮಗೆ ಸಂಬಂಧಿಸಿದ್ದಲ್ಲ, ಅರಣ್ಯ ಇಲಾಖೆ ಗಮನಕ್ಕೆ ತರಬೇಕೆಂದು ಅವರು ಸಂಬಂಧವಿರದಂತೆ ಮಾತನಾಡುತ್ತಿದ್ದಾರೆ. ಇದರಿಂದ ಬೇಟೆಗಾರರಿಗೆ ಕುಮ್ಮಕ್ಕು ನೀಡಿದಂತಾಗಿದೆ. ತಕ್ಷಣವೇ ಅಳಿದುಳಿದ ಜಿಂಕೆಗಳನ್ನು ರಕ್ಷಿಸುವತ್ತ ಇನ್ನಾದರು ಅರಣ್ಯ ಇಲಾಖೆ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ನಿರ್ವಹಿಸಿ ಅಕ್ರಮವಾಗಿ ಬೇಟೆಯಾಡುವವರ ವಿರುದ್ಧ ಕ್ರಮ ಕೈಗೊಂಡು ವನ್ಯಜೀವಿಗಳನ್ನು ರಕ್ಷಿಸಬೇಕೆಂದು ಪರಶುರಾಮ ಮರಿಲಿಂಗಪ್ಪ ಮನವಿ ಮಾಡಿದ್ದಾರೆ.
ಸುರಪುರ ತಾಪಂ
ಅಧ್ಯಕ್ಷರ ರಾಜಿನಾಮೆ
ಸುರಪುರ: ಇಲ್ಲಿಯ ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಸಾಬಮ್ಮ ಗೋಪಣ್ಣ ದೇಸಾಯಿ ದೇವರಗೋನಾಲ ಇವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಎರಡನೇ ಅವಧಿಯ ಮೊದಲ ಹತ್ತು ತಿಂಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಅನುಭವಿಸಿದ್ದರು. ತಾವು ಯಾವುದೇ ಒತ್ತಡಕ್ಕೆ ಒಳಗಾಗದೆ ಪಕ್ಷದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸ್ವ ಇಚ್ಛೆಯಿಂದ ರಾಜಿನಾಮೆ ನೀಡುತ್ತಿರುವುದಾಗಿ ತಮ್ಮ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ನಿಯಮ ಪಾಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರಿಗೆ ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ. ಉಪಾಧ್ಯಕ್ಷೆಯಾಗಿದ್ದ ಅನ್ನಪೂರ್ಣ ಮಾಲಿ ಪಾಟೀಲ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ರಸ್ತಾಪುರ ಗ್ರಾಪಂಗೆ ಬೀಗ ಜಡಿದು ಮಹಿಳೆಯರ ಪ್ರತಿಭಟನೆ
ಶಹಾಪುರ: ಮನೆಗಳ ನಿರ್ಮಾಣವಾಗಿದ್ದರೂ ಬಿಲ್ ಪಾವತಿಸಲು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಅಸಮಾಧಾನಗೊಂಡು ರಸ್ತಾಪುರ ಗ್ರಾಮದ ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಬಿಲ್ ಪಾವತಿಗಾಗಿ ಆಗ್ರಹಿಸಿ ಪ್ರತಿಭಟಿಸಿ ನಡೆಸಿದರು. 2010- 11ನೇ ಸಾಲಿನ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮಂಜೂರಾದ ಫಲಾನುಭವಿಗಳಿಗೆ ಯೋಜನೆಯ ಫಲ ತಲುಪುತ್ತಿಲ್ಲ. ಈ ಕುರಿತು ಮನವಿ ಮಾಡಿದರೆ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾಳಜಿ ವಹಿಸದೇ ದಿನದೂಡುತ್ತಿದ್ದಾರೆ ಎಂದು ಫಲಾನುಭವಿ ಮಹಿಳೆಯರು ಆರೋಪಿಸಿದರು. ಅಲ್ಪಸಂಖ್ಯಾತ ಯೋಜನೆಯ ಮನೆಗಳ ಫಲಾನುಭವಿಗಳಿಗೆ ಮನೆಗಳು ಪೂರ್ಣಗೊಂಡರೂ ಬಿಲ್ ಪಾವತಿಸಿಲ್ಲ. ಫಲಾನುಭವಿಗಳಿಗೆ ನೋಂದಣಿ ಮಾಡಿಸುವಲ್ಲೂ ಕಾಳಜಿ ವಹಿಸುತ್ತಿಲ್ಲ, ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ದೂರು ನೀಡಿದ್ದಾರೆ.
ವಿದ್ಯಾರ್ಥಿ ವೇತನ;
ಅರ್ಜಿ ಆಹ್ವಾನ
ದೇವದುರ್ಗ: ಪ್ರಸಕ್ತ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರಾತಿಗೆ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಚಾರ್ಯರಿಂದ ಪಡೆದು ಸರಿಯಾಗಿ ಭರ್ತಿ ಮಾಡಿ ಅರ್ಜಿಯೊಂದಿಗೆ ಕಳೆದ ವರ್ಷದ ಅಂಕಪಟ್ಟಿ, ಜಾತಿ, ಆದಾಯ ಪ್ರಮಾಣ ಪತ್ರ, ಉಳಿತಾಯ ಖಾತೆ ನಕಲು ಪ್ರತಿ, ಆಧಾರ ಕಾರ್ಡಿನ ನಕಲು ಪ್ರತಿಗಳನ್ನು ಸೆ. 30ರೊಳಗೆ ಅಂತರ್ಜಾಲದಲ್ಲಿ ನೋಂದಣಿ ಮಾಡಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ತಾಲೂಕು ಕಚೇರಿಗೆ ಸಂಪರ್ಕಿಸಲು ಸೂಚಿಸಲಾಗಿದೆ.
ನೇಮಕಾತಿಗೆ ತರಬೇತಿ
ರಾಯಚೂರು: ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ಇಲಾಖೆಯ ಕ್ರೀಡಾ ಶಾಲೆ, ನಿಲಯಗಳ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಮಾಜಿ ಕ್ರೀಡಾಪಟುಗಳು, ದಸರಾ, ಗ್ರಾಮೀಣ ಮತ್ತು ಇತರ ಮಾನ್ಯತೆ ಪಡೆದ ರಾಜ್ಯ ಮತ್ತು ಉನ್ನತ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ತರಬೇತಿಗೆ ಅರ್ಜಿ ಕರೆಯಲಾಗಿದೆ. ಅರ್ಹ ಕ್ರೀಡಾಪಟುಗಳು ಸಾಧನೆ ಮಾಡಿದ ಪ್ರಮಾಣ ಪತ್ರ ಸಹಿತ ಸ್ವವಿವರಗಳೊಂದಿಗೆ ಆ.17ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಮಹಾತ್ಮಗಾಂಧಿ ಕ್ರೀಡಾಂಗಣ ರಾಯಚೂರು ಇವರಿಗೆ ದ್ವಿಪತ್ರಿಯಲ್ಲಿ ಸಲ್ಲಿಸಲು ಕೋರಲಾಗಿದೆ.
ಮಟಕಾ: ಒಬ್ಬನ ಸೆರೆ
ರಾಯಚೂರು: ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್ 2ರಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಕಾಲಿಕೃಷ್ಣ ಮಂಡಲ್ ಎಂದು ಗುರುತಿಸಲಾಗಿದೆ. ಈತ ಮಟಕಾ ಚೀಟಿ ಬರೆಯುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಅವನಿಂದ 3,070 ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಶಿಕ್ಷಣ ಕೇಂದ್ರಕ್ಕೆ ಶಂಕುಸ್ಥಾಪನೆ
ರಾಯಚೂರು: ತಾಲೂಕಿನ ತಲಮಾರಿ ಗ್ರಾಮದ ಗ್ರಾಪಂ ಲೋಕ ಶಿಕ್ಷಣ ಸಮಿತಿ ವತಿಯಿಂದ ಲೋಕ ಶಿಕ್ಷಣ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಆ.15ರಂದು ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ.
ಅಂದು ಮಧ್ಯಾಹ್ನ 2.30ಕ್ಕೆ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಶಂಕುಸ್ಥಾಪನೆ ನೆರವೇರಿಸುವರು. ಕಾರ್ಯಕ್ರಮದಲ್ಲಿ ತಲಮಾರಿ ಗ್ರಾಪಂ ಅಧ್ಯಕ್ಷ ಲಿಯಾಕತ್ ಅಲಿ ಪಟೇಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಸದಸ್ಯ ಜಾಫರ್ ಅಲಿ ಪಟೇಲ್, ತಾಪಂ ಸದಸ್ಯ ನರಸಿಂಹರೆಡ್ಡಿ ಹಾಗೂ ವರಪ್ರಸಾದರೆಡ್ಡಿ ತಲಮಾರಿ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಸದಸ್ಯ ಕಾರ್ಯದರ್ಶಿ ಆರ್. ಇಂದಿರಾ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಗೌರವಧನ ಶಿಕ್ಷಕರ ನೇಮಕಕ್ಕೆ ಅರ್ಜಿ
ರಾಯಚೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ, ಪಂಗಡದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಬೋಧಿಸಲು ನಿವೃತ್ತ ಶಿಕ್ಷಕರನ್ನು ಗೌರವಧನದ ಮೇಲೆ ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲಾತಿಗಳೊಂದಿಗೆ ಆ. 17ರೊಳಗೆ ಸಂಭಂಧಪಟ್ಟ ತಾಲೂಕು ಸಮಾಜ ಕಲ್ಯಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ರಾಯಚೂರು ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಎಸ್ಸೆಸ್ಸೆಲ್ಸಿ: 19ರಂದು
ತರಬೇತಿ ಕಾರ್ಯಕ್ರಮ
ರಾಯಚೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಆ. 19ರಂದು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ನಗರದ ಟಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ತರಬೇತಿ ಆಯೋಜಿಸಿದ್ದು ಈ ವೇಳೆ ಕಳೆದ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶದ ಸಾಧನೆ ಮಾಡಿದ ಶಾಲೆಯ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಗುತ್ತದೆ. ಆ. 19ರಂದು ಜರುಗುವ ಸಭೆಗೆ ಸರ್ಕಾರಿ ಅನುದಾನಿತ, ಅನುದಾನ ರಹಿತ ಪ್ರೌಢಶಾಲಾ ಮುಖ್ಯ ಗುರುಗಳು ಭಾಗವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ ತಿಳಿಸಿದ್ದಾರೆ.
ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆ
ರಾಯಚೂರು: ನಗರದ ಶಿವಂ ಆಸ್ಪತ್ರೆಯ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಮತ್ತು ಮಧುಮೇಹ, ಹೃದಯ ರೋಗ ತಜ್ಞ ಡಾ.ಎಸ್.ಎಸ್. ರೆಡ್ಡಿ ಅವರು ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವದೆಹಲಿಯ ಸಿಟಿಜನ್ ಇಂಟಿಗ್ರೇಷನ್ ಪೀಸ್ ಸೊಸೈಟಿ ವತಿಯಿಂದ ಆ.18ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ತ್ರಿಪುರಾದ ರಾಜ್ಯಪಾಲ ಡಾ. ದೇವಾನಂದ ಕೋನವಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಸಿಂಗ್ ತಿಳಿಸಿದ್ದಾರೆ.
ನಾಳೆ ಪ್ರತಿಭಟನೆ
ರಾಯಚೂರು: ನಗರದ ಪ್ರಮುಖ ರಸ್ತೆಗಳ ಅವ್ಯವಸ್ಥೆಯನ್ನು ಖಂಡಿಸಿ ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ಆ.16ರಂದು ರಸ್ತೆಯಲ್ಲಿಯೇ ಸಸಿ ನೆಡುವ ಮೂಲಕ ಪ್ರತಿಭಟಿಸಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ನಗರದ ವಿವೇಕಾನಂದ ವೃತ್ತದಿಂದ ಭಗತ್ ಸಿಂಗ್ ವೃತ್ತದವರೆಗೆ ರಸ್ತೆಯಲ್ಲಿ ಸಸಿ ನೆಡುವ ಮೂಲಕ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸಂಘಟನೆ ಸಂಚಾಲಕ ಡಾ. ಚಂದ್ರಗಿರೀಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

