'ವಕೀಲರು ಕಲಾಪ ತಪ್ಪಿಸಬಾರದು'
ಸಿಂಧನೂರು: ವಕೀಲರು ತಪ್ಪದೇ ದಿನ ನಿತ್ಯದ ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ಹಾಜರಾಗಬೇಕು. ಅಂದರೆ ಮಾತ್ರ ಅವರ ಜ್ಞಾನವೃದ್ಧಿಯಾಗುತ್ತದೆ. ಇದರಿಂದ ನ್ಯಾಯಾಧೀಶರ ಪರೀಕ್ಷೆಗಳನ್ನು ಸುಲಭವಾಗಿ ಉತ್ತೀರ್ಣರಾಗಲು ಸಾಧ್ಯ ಎಂದು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದರು.
ಅವರು ಸ್ಥಳೀಯ ನ್ಯಾಯವಾದಿಗಳ ಸಂಘದಲ್ಲಿ ಸೋಮವಾರ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ವಕೀಲರು ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯನ್ನು ಹೊಂದಿರಬೇಕು. ಪ್ರತಿನಿತ್ಯ ಹೊಸ ಹೊಸ ಕಾನೂನುಗಳ ವಿಷಯಗಳನ್ನು ಓದಿ ತಿಳಿದುಕೊಳ್ಳಬೇಕು. ತಿದ್ದುಪಡಿ ಕಾನೂನುಗಳ ಬಗ್ಗೆ ಸರಿಯಾದ ಮಾಹಿತಿ ಹೊಂದಿದಾಗ ಮಾತ್ರ ನ್ಯಾಯಾಲಯದಲ್ಲಿ ಸಮರ್ಥವಾಗಿ ತಮ್ಮ ಕಕ್ಷಿದಾರರ ಪರ ವಾದ ಮಂಡಿಸಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ ಮಾತನಾಡಿ, ಕಾನೂನು ಕಾರ್ಯಾಗಾರ ಯುವ ವಕೀಲರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಹೊಸ ಹೊಸ ಕಾನೂನುಗಳು, ತಿದ್ದುಪಡಿಗಳ ಮಾಹಿತಿ ದೊರಕುತ್ತವೆ. ಇಂತಹ ಕಾರ್ಯಾಗಾರಗಳಿಗೆ ಯುವ ನ್ಯಾಯವಾದಿಗಳು ತಪ್ಪದೇ ಹಾಜರಾಗಿ ಸದುಯಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ಎಸ್. ರಾಯಣ್ಣನವರ, ಸಹಾಯಕ ಸರ್ಕಾರಿ ಅಭಿಯೋಜಕ ಶೇಖರಪ್ಪ ಶಾಲಿಗನೂರು, ಲಿಂಗಸ್ಗೂರು ವಕೀಲರ ಸಂಘದ ಅಧ್ಯಕ್ಷ ಮುದುಕಪ್ಪ, ದೇವದುರ್ಗ ವಕೀಲರ ಸಂಘದ ಅಧ್ಯಕ್ಷ ಬಸನಗೌಡ, ಮಾನ್ವಿ ವಕೀಲರ ಸಂಘದ ಉಪಾಧ್ಯಕ್ಷ ಆಸೀಫ ಹುಸೇನ್ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ ಮಾತನಾಡಿ ಕಾನೂನು ಕಾರ್ಯಾಗಾರ ಯಶಸ್ವಿಗೆ ಎಲ್ಲರ ಸಹಕಾರ ಸಿಕ್ಕಿದೆ. ಕರ್ನಾಟಕ ವಕೀಲರ ಪರಿಷತ್ ಈ ಕಾರ್ಯಾಗಾರಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಇನ್ನು ಅನೇಕ ವಕೀಲರಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದರು.
ಎಚ್. ವೀರಭದ್ರಪ್ಪ ಸ್ವಾಗತಿಸಿ, ನಿರೂಪಿಸಿದರು. ಸುರೇಶರಡ್ಡಿ ಚನ್ನಳ್ಳಿ ವಂದಿಸಿದರು. ಕಾರ್ಯಾಗಾರದಲ್ಲಿ ಅನೇಕ ಹಿರಿಯ, ಕಿರಿಯ ನ್ಯಾಯವಾದಿಗಳು ಭಾಗವಹಿಸಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

