ಪಿಡಿಒ ಅಮಾನತಿಗೆ ಆಗ್ರಹ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಆ.27
ತಾಲೂಕಿನ ಆನಾಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮಂಗಳವಾರ ತಾಪಂ ಕಚೇರಿ ಹತ್ತಿರ ಧರಣಿ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಕಾನೂನು ಪ್ರಕಾರ ಬಳಕೆ ಮಾಡದ ಗ್ರಾಮ ಪಂಚಾಯ್ತಿ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದ್ದು, ಉದ್ಯೋಗ ಖಾತ್ರಿ ಯೋಜನೆ, ಇಂದಿರಾ ಆವಾಸ್, ಡಾ. ಅಂಬೇಡ್ಕರ್, ಬಸವ, ಗುಡಿಸಲು ಮನೆ ಸೇರಿದಂತೆ ಇತರೆ ಯೋಜನೆಗಳ ಅನುದಾನ ಮಂಜೂರಾಗಿ ಬಂದ ಖಾತೆಯಲ್ಲಿನ ಹಣ ಸಂಪೂರ್ಣ ದುರ್ಬಳಕೆಯಾಗಿದೆ. ಈ ಕುರಿತು ಮಾಹಿತಿ ಕೇಳಿದರೆ ಗ್ರಾಪಂ ಪಿಡಿಒ ನಕಲು ಮಾಹಿತಿ ನೀಡುತ್ತಾರೆ.
ಪರಿಶೀಲನೆಗೆ ಒತ್ತಾಯ: ಅಲ್ಲದೆ ಗ್ರಾಪಂ ಅವ್ಯವಹಾರದ ಕುರಿತು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಗ್ರಾಪಂಗೆ ಬರುವ ಸಾರ್ವಜನಿಕ ಯೋಜನೆಗಳನ್ನು ತಮಗೆ ಇಷ್ಟ ಬಂದಂತೆ ಬಳಸಿಕೊಳ್ಳಲು ಅವಕಾಶ ನೀಡಿ ಬಡ ಕೂಲಿ ಕಾರ್ಮಿಕರಿಗೆ ಅನ್ಯಾಯ ಎಸಗಲಾಗುತ್ತಿದೆ. ಕಾರಣ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನ ಹರಿಸಿ ಆನಾಹೊಸೂರು ಗ್ರಾಪಂಗೆ ಖುದ್ದಾಗಿ ಭೇಟಿ ನೀಡಿ ಯೋಜನೆಗಳ ಹಾಗೂ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು.
ಪಿಡಿಒ ಅಮಾನತುಗೊಳಿಸಿ: ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ವಂಚಿಸಿದ ಹಣವನ್ನು ಸರ್ಕಾರಕ್ಕೆ ಮರಳಿ ತುಂಬಿಕೊಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಂದ ಅನುದಾನ ಯಾವ ಕಾಮಗಾರಿಗೆ ಎಷ್ಟು ಬಳಕೆ ಮಾಡಿದ ಮೂಲ ದಾಖಲಾತಿ, ವಸತಿ ಮನೆಗಳ ಮಂಜೂರಾತಿ ಫಲಾನುಭವಿಗಳ ಪಟ್ಟಿ ಸೇರಿದಂತೆ ಪರಿಶೀಲನೆ ನಡೆಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಧರಣಿಯಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಬಾಲನಗೌಡ ಮಾಲಿಪಾಟೀಲ್, ಸಂಘಟನಾ ಕಾರ್ಯದರ್ಶಿ ಮುತ್ತಣ್ಣ ಹಡಪದ, ಕಾರ್ಯಾಧ್ಯಕ್ಷ ಶಿವಪುತ್ರ ಗಾಣದಾಳ, ಖಜಾಂಚಿ ಅಕ್ಬರ್, ಶಂಕ್ರಪ್ಪ ಬೆಂಡೋಣಿ, ಹುಲಗಪ್ಪ, ರಮೇಶ ಕಟ್ಟಿಮನಿ, ಆನಂದ ನರಕಲದಿನ್ನಿ, ಗ್ರಾಮದ ಮುಖಂಡರಾದ ಬಸವರಾಜ ಹೊಸಮನಿ, ಕೆಂಚಪ್ಪ ಕಂದಗಲ್, ಅಮರೇಶ, ಪವಾಡೆಪ್ಪ ದೊಡ್ಡಮನಿ, ಗಿರಿಮಲ್ಲೇಶ ಮ್ಯಾಗೇರಿ, ಪ್ರವೀಣ ಕುಮಾರ, ಹಸನಲಿಸಾಬ, ಮುತ್ತಣ್ಣ ಸೇರಿದಂತೆ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

