ರಾಯಚೂರು

ದೇಶ ಸೇವೆಗೆ ಮುಂದಾಗಿ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಆ.28
ಯುವಜನತೆ ದೇಶಪ್ರೇಮ ಬೆಳೆಸಿಕೊಂಡು ಆ ಮೂಲಕ ಸಂಪದ್ಭರಿತ ದೇಶ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ದುಡಿಯುವಂತೆ ಭಾರತೀಯ ರಕ್ಷಣಾ ಇಲಾಖೆಯ ಭೂ ಸೇನಾ ವಿಭಾಗದಲ್ಲಿ ಕರ್ನಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಎರಡು ಬಾರಿ ರಾಷ್ಟ್ರಪತಿ ಪದಕ ಪಡೆದ ಬಲಸು ಶ್ರೀನಿವಾಸ ಯುವಕರಿಗೆ ಕರೆ ನೀಡಿದರು.
ನಗರದ ಟಿಪ್ಪುಸುಲ್ತಾನ್ ಕಾಲೋನಿಯಲ್ಲಿ ಸುಲ್ತಾನ್ ನೌಜವಾನ ಕಮಿಟಿಯಿಂದ ಹಮ್ಮಿಕೊಂಡಿದ್ದ ಆತ್ಮೀಯ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬ ನಾಗರಿಕ ಕಾನೂನಿನ ಚೌಕಟ್ಟಿನಲ್ಲಿ ಬದುಕಬೇಕು. ನಿಯಮಗಳನ್ನು ಮುರಿಯಬಾರದು. ದೇಶ ರಕ್ಷಣೆಯಲ್ಲಿ ಪ್ರತಿಯೊಬ್ಬ ಯುವಕರು ಪಾಲ್ಗೊಳ್ಳಬೇಕು. ಹೆಚ್ಚೆಚ್ಚು ಯುವಕರು ಸಿಂಧನೂರು ಪರಿಸರದಿಂದ ಸೇನೆಗೆ ಸೇರ್ಪಡೆಗೊಂಡು ಮಾತೃಭೂಮಿ ರಕ್ಷಣೆಗೆ ಸನ್ನದ್ಧರಾಗಬೇಕು ಎಂದು ಸಲಹೆ ನೀಡಿದರು.
ಶ್ರೀನಿವಾಸ ಜೀವನ ಸಾಧನೆ: ಗಡಿಯಲ್ಲಿ ತಮ್ಮದೇ ಛಾಪು ಮೂಡಿಸುವ ಮೂಲಕ ಎರಡು ಬಾರಿ ರಾಷ್ಟ್ರಪತಿ ಪದಕ ಪಡೆದು ವಿಶಿಷ್ಟ ಸಾಧನೆ ಮೆರೆದು ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿರುವ ಬಲಸು ಶ್ರೀನಿವಾಸ ಸಿಂಧನೂರಿನಲ್ಲಿ ಜನಿಸಿದ್ದು 1971ರಲ್ಲಿ. ಸ್ಥಳೀಯ ಆರ್‌ಜಿಎಂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಆಂಧ್ರ ಪ್ರದೇಶದ ಕೊರುಕೊಂಡ ಸೈನಿಗೆ ಶಾಲೆಗೆ 1982ರಲ್ಲಿ ಪ್ರವೇಶ. ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ 1989 ರಿಂದ 1992ರವರೆಗೆ ಸೈನಿಕ ತರಬೇತಿಯನ್ನು
ಪಡೆದುಕೊಂಡರು.
ಡೆಹ್ರಾಡೂನ್‌ನಲ್ಲಿಯ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ 1993ರಲ್ಲಿ ಒಂದು ವರ್ಷದ ವಿಶೇಷ ಶಿಕ್ಷಣ. ಗ್ವಾಲಿಯರ್‌ನಲ್ಲಿ ಸೆಕೆಂಡ್ ಲೆಫ್ಟಿನಂಟ್ ಆಗಿ 11.12.1993ರಲ್ಲಿ ಸೇನೆಗೆ ನೇಮಕ. ಅಸ್ಸಾಂನ ನವಗಾಂಗೆ ಲೆಪ್ಟಿನಂಟ್ ಆಗಿ ಬಡ್ತಿ. ಉಲ್ಫಾ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದಕ್ಕಾಗಿ 1999ರಲ್ಲಿ ಪ್ರಥಮ ಬಾರಿಗೆ ರಾಷ್ಟ್ರಪತಿ ಸೇನಾ ಪದಕ. 1999ರಿಂದ 2001ರವರೆಗೆ ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪ್ರಾಧ್ಯಾಪಕನಾಗಿ ಸೇವೆ. ವಿಶೇಷ ನೇಮಕಾತಿ ಅಡಿಯಲ್ಲಿ ಬಾರಾಮುಲ್ಲಾ ರೇಂಜ್‌ನ ಮೇಜರ್ ಆಗಿ ಸೇವೆ. ಭಾರತ ದೇಶದಿಂದ ಆಫ್ರಿಕಾದ ಕಾಂಗೋ ಗಣರಾಜ್ಯದಲ್ಲಿ ವಿಶ್ವ ಶಾಂತಿ ಪಾಲನಾ ಪಡೆಯಲ್ಲಿ 1 ವರ್ಷ ಕಾರ್ಯನಿರ್ವಹಣೆ.
2ನೇ ಬಾರಿ ಪ್ರಶಸ್ತಿ: ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಉಗ್ರಗಾಮಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಿ ಶೌರ್ಯ ಮೆರೆದ ಶ್ರೀನಿವಾಸ ಅವರಿಗೆ ಎರಡನೇ ಬಾರಿ 2003ರ ರಾಷ್ಟ್ರಪತಿ ಸೇನಾ ಪದಕ ಘೋಷಣೆ. ರಾಷ್ಟ್ರದ ಹೆಮ್ಮೆಯ ವೀರ ಮೇಜರ್ ಶ್ರೀನಿವಾಸ ಅವರ ಅನುಪಮ ಸೇವೆಯ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ಅವರನ್ನು ಕರ್ನಲ್ ಹುದ್ದೆಗೆ ಬಡ್ತಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.