ರಾಯಚೂರು

ನೀತಿ ಉಲ್ಲಂಘಿಸಿದರೆ ಕ್ರಮ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಡಿ.1
ಸಂಚಾರ ನಿಯಮ ಪಾಲಿಸದ ವಾಹನಗಳ ಚಾಲಕರು, ಮಾಲೀಕರ ವಿರುದ್ಧ ಬಿಗಿ ಕ್ರಮ ಅನುಸರಿಸಲಿದ್ದು, ವಾಹನಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆ, ಪ್ರಮಾಣ ಪತ್ರ ಹಾಗೂ ಆಟೋಗಳಲ್ಲಿ ಚಾಲಕರ ಬಗ್ಗೆ ಪರಿಚಯ ಪತ್ರ ಮತ್ತು ಗುರುತಿನ ಚೀಟಿ ಅಳವಡಿಕೆ ಕಡ್ಡಾಯವಾಗಿದೆ.
ನಗರದ ಸಂಚಾರ ಪೊಲೀಸ್ ಠಾಣೆಯ ವತಿಯಿಂದ ಭಾನುವಾರ ನಗರದ ಆಟೋ ಚಾಲಕರಿಗೆ, ಖಾಸಗಿ ವಾಹನಗಳ ಮಾಲೀಕರಿಗಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮೀಣ ಠಾಣೆಯ ಸಿಪಿಐ ಬಸವರಾಜ್, ಸದರ್ ಬಜಾರ್ ಠಾಣೆಯ ಸಿಪಿಐ ಚಂದ್ರಶೇಖರ್, ನಗರ ಸಂಚಾರ ಠಾಣೆಯ ಪಿಎಸ್ಸೈ ಅಯ್ಯನಗೌಡ ಪಾಟೀರು, ನಗರದಲ್ಲಿ ಸಂಚರಿಸುವ ಆಟೋಗಳ ಚಾಲಕರು ಕಾನೂನಿನ ಕಟ್ಟುನಿಟ್ಟಿನ ಪಾಲನೆಗೆ ಆದ್ಯತೆ ನೀಡುವಂತೆ ತಿಳಿಸಿದರು.
ಇತರೆ ಚಾಲಕರಿಗೆ ಮಾದರಿಯಾಗಿ: ಆಟೋ ಚಾಲಕರು ಇನ್ನಿತರೆ ವಾಹನಗಳ ಚಾಲಕರಿಗೆ ಮಾದರಿಯಾಗಿ ಕಾರ್ಯನಿರ್ವಹಿಸಬೇಕು. ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಪಾಲಿಸಿ ಆಟೋಗಳನ್ನು ಓಡಿಸುವತ್ತ ಗಮನಹರಿಸಬೇಕು. ವಾಹನಗಳು ಮತ್ತು ಅದರ ಚಾಲಕರ ಬಗ್ಗೆ ಅಗತ್ಯ ದಾಖಲೆಗಳನ್ನು ಹೊಂದಿದ್ದಲ್ಲಿ ಅಪಘಾತ ಸಂದರ್ಭ ಗುರುತು ಪತ್ತೆಗೆ ನೆರವಾಗುತ್ತದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಡಿ.4 ಮತ್ತು 5ರಂದು ನಗರದ ಎಲ್ಲ ಆಟೋಗಳಲ್ಲಿ ಆಯಾ ಆಟೋಗಳ ಚಾಲಕರ ಗುರುತಿನ ಚೀಟಿ ಮತ್ತು ಇತರೆ ಮಾಹಿತಿಯಿರುವ ಫಲಕದ ಪ್ರದರ್ಶನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಡಿಮೆ ವೆಚ್ಚದಲ್ಲಿ ಇಂಥ ಮಾಹಿತಿ ಅಳವಡಿಸಲು ಏಜೆನ್ಸಿಗೆ ಸೂಚಿಸಲಾಗಿದೆ. ಆಟೋ ಚಾಲಕರು ಪ್ರಯಾಣಿಕರಿಗೆ ಮಾಹಿತಿ ನೀಡುವ ಫಲಕವನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದರು.
ಕಾನೂನು ಕ್ರಮದ ಎಚ್ಚರಿಕೆ: ಮುಂದಿನ ದಿನಗಳಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡದ ಆಟೋಗಳ ಮತ್ತು ಖಾಸಗಿ ವಾಹನಗಳ ಚಾಲಕರು ಹಾಗೂ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಹನಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಾಹನದೊಂದಿಗೆ ಕೊಂಡೊಯ್ಯುವುದು ಹೆಚ್ಚು ಸೂಕ್ತ ಎಂದು ಎಚ್ಚರಿಸಿದರು.
ಸಭೆಯಲ್ಲಿ ನಗರದ ಆಟೋ ಚಾಲಕರು, ಖಾಸಗಿ ವಾಹನಗಳ ಮಾಲಿಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.