ಮೊಬೈಲ್ ಚಿತ್ರ ತಂದ ಭೂತ ವದಂತಿ
ಕನ್ನಡಪ್ರಭ ವಾರ್ತೆ,ರಾಯಚೂರು , ಡಿ.4
ನಗರದ ಕೃಷಿ ವಿಶ್ವವಿದ್ಯಾಲದಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿಯೊಬ್ಬರ ಮೊಬೈಲ್ ಫೋಟೋ, ವಿಡಿಯೋವೊಂದು ಕಳೆದ 15 ದಿನಗಳಿಂದ ಭೂತದ ವದಂತಿ ಹಬ್ಬಿಸಿದೆ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ನಗರದ ಹೊರವಲಯದಲ್ಲಿರುವ ರಾಯಚೂರು ಕೃಷಿ ವಿವಿ ಆವರಣದಲ್ಲಿ ಸಹಜವಾಗಿಯೇ ಗಿಡಮರಗಳ ಸಂಖ್ಯೆ ಹೆಚ್ಚು. ಬಹುತೇಕ ಕಡೆ ವಿದ್ಯುತ್ ಕಂಬಗಳಿಗೆ ದೀಪಗಳಿಲ್ಲ. ಇದೇ ಈ ವದಂತಿಗೆ ಕಾರಣವೂ ಆಗಿರಬಹುದು.
ಆಗಿದ್ದಿಷ್ಟು: ಕೆಲ ದಿನಗಳ ಹಿಂದೆ ಗ್ರಂಥಾಲಯದ ಬಳಿ ಮಧ್ಯಾರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿ ಅನಿಲ್ ಎಂಬುವವರು ಗ್ರಂಥಾಲಯ ಕಟ್ಟಡದ ಮುಂಭಾಗದಲ್ಲಿ ವ್ಯಕ್ತಿಯೊಬ್ಬರು ಸುಳಿದಾಡುವುದನ್ನು ಕಂಡಿದ್ದಾರೆ. ಕೂಡಲೇ ಎಚ್ಚೆತ್ತ ಅವರು ಆಕೃತಿಯತ್ತ ತಮ್ಮ ಬಳಿಯ ಮೊಬೈಲ್‌ನಿಂದ ಬೆಳಕು ಚೆಲ್ಲಿದ್ದಾರೆ. ಆಗ ಆ ವ್ಯಕ್ತಿಯಂಥ ರೂಪದ ಕಣ್ಣುಗಳು ಬೆಂಕಿಯುಂಡೆಯಂತೆ ಕಂಡಿವೆ. ಆ ಮೇಲೆ ಆಕೃತಿಯು ಅಸ್ತಿಪಂಜರದಂತೆ ಕತ್ತಲಿನಲ್ಲಿ ಕಂಡಿದೆ ಎನ್ನುತ್ತಾರೆ ಸಿಬ್ಬಂದಿ ಅನಿಲ್.
ಆನಂತರ ಅನಿಲ್ ತಮ್ಮ ಬಳಿಯಿದ್ದ ಮೊಬೈಲ್‌ನಿಂದಲೇ ಫೋಟೋ ತೆಗೆದಿರಿಸಿಕೊಂಡಿದ್ದು, ಅದನ್ನು ವಿವಿ ಆವರಣದ ಮುಖ್ಯಗೇಟ್ ಬಳಿಯ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆದರೆ ಭೂತದ ಬಗ್ಗೆ ನಂಬಿಕೆ ವ್ಯಕ್ತಪಡಿಸದ ಗೇಟ್ ಬಳಿಯ ಸಿಬ್ಬಂದಿ ಈತನ ಮೊಬೈಲ್‌ನಲ್ಲಿನ ಫೋಟೋ ವೀಕ್ಷಿಸಿ ತನ್ನ ಮೊಬೈಲ್‌ಗೆ ಬ್ಲೂ ಟೂತ್‌ನಲ್ಲಿ ವರ್ಗಾಯಿಸಿಕೊಂಡಿದ್ದಾರೆ.
ಮೊಬೈಲ್‌ಗಲ್ಲಿ ಹರಿದಾಡಿದ ಫೋಟೋ, ವಿಡಿಯೋ: ಮುಂದೆ ಅದೇ ಭೂತ ಎಂಬ ಆಕೃತಿಯ ವಿಡಿಯೋ ಮತ್ತು ಫೋಟೋ ಇಡೀ ವಿವಿ ಆವರಣದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಲೇ ಸಾಗಿದೆ. ಪರಿಣಾಮ ಕಳೆದ 15 ದಿನಗಳಿಂದ ಎಲ್ಲರ ಬಾಯಲ್ಲೂ ಭೂತದ್ದೇ ಸುದ್ದಿ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಭದ್ರತಾ ಸಿಬ್ಬಂದಿ ಅನಿಲ್, 'ವೈಜ್ಞಾನಿಕ ಯುಗದಲ್ಲಿ ದೆವ್ವ, ಭೂತಗಳನ್ನು ಯಾರೂ ನಂಬುವುದಿಲ್ಲ ಎಂಬುದು ನಂಗೂ ಗೊತ್ತು. ಆದರೆ ಭೂತದ ಆಕಾರದಲ್ಲಿ ಆಕೃತಿಯನ್ನು ಕಂಡಿದ್ದು ನಿಜ. ಆದರೆ ಅದು ಭೂತವೋ, ಮತ್ತೊಂದೋ ಏನೆಂಬುದು ತಮಗೆ ಗೊತ್ತಿಲ್ಲ' ಎಂದು ಹೇಳಿದ್ದಾರೆ.
ವಿಡಿಯೋ, ಫೋಟೋ ತೆಗೆದು ಸಹ ಸಿಬ್ಬಂದಿಗೆ ತೋರಿಸಿದ್ದರಿಂದ ಅದು ಎಲ್ಲರ ಬಾಯಲ್ಲಿ ಸುಳಿದಾಡಿ ಬಣ್ಣ ಕಟ್ಟಿಕೊಂಡಿದೆ. ತಮ್ಮದಲ್ಲದ ತಪ್ಪಿಗೆ ವಿವಿ ಆವರಣದ ತುಂಬೆಲ್ಲಾ ಅನಗತ್ಯವಾಗಿ ಭೂತದ ವಿಷಯ ಹರಡಿದೆ. ತಮ್ಮ ಕೆಲಸಕ್ಕೆ ಇದರಿಂದ ಸಂಚಕಾರ ಬರುವ ಭೀತಿ ತಮಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಗ್ರಂಥಾಲಯದ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ವೈಜ್ಞಾನಿಕ ಯುಗದಲ್ಲಿ ದೆವ್ವ, ಭೂತದ ಅಸ್ತಿತ್ವ ನಂಬಲಾಗದು. ಆದರೆ ವಿವಿ ಆವರಣದಲ್ಲಿನ ಎಲ್ಲ ನಿವಾಸಿಗಳಲ್ಲಿ ಭೂತದ ವದಂತಿಯಿರುವುದಂತೂ ನಿಜ. ಆದರೆ ಅದು ಕಟ್ಟುಕಥೆಯಷ್ಟೇ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

