ಎಸ್ಮಾ ಕಾಯಿದೆ ಜಾರಿಗೆ ವಿರೋಧ
ಕ.ಪ್ರ.ವಾರ್ತೆ, ರಾಯಚೂರು, ಡಿ.5
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಲು ನೀಡಿದ ಅಧಿಕಾರವನ್ನು ಕಿತ್ತುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಸ್ಮಾ ಕಾಯಿದೆ ಜಾರಿಗೆ ಮುಂದಾಗಿರುವುದನ್ನು ಆಲ್ ಇಂಡಿಯಾ ಯುಟಿಯುಸಿ ಖಂಡಿಸಿದೆ.
ಈ ಕುರಿತು ಸಂಘಟನೆ ಜಿಲ್ಲಾಧ್ಯಕ್ಷ ವೀರೇಶ್ ಎನ್.ಎಸ್. ಪ್ರಕಟಣೆ ನೀಡಿದ್ದು, ಮುಷ್ಕರದ ಹಕ್ಕನ್ನು ಕಿತ್ತುಕೊಳ್ಳುವ ಕರಾಳ ಎಸ್ಮಾ ಮಸೂದೆಗೆ ಸರ್ಕಾರ ಸಮ್ಮತಿಸಿರುವುದು ಸರಿಯಲ್ಲ. ನೀರು, ವಿದ್ಯುತ್, ಸಾರಿಗೆ ಮುಂತಾದ ಅತ್ಯಾವಶ್ಯಕ ಸೇವೆಗಳಲ್ಲಿ ತೊಡಗಿರುವ ಸಿಬ್ಬಂದಿ ನೌಕರರು ಇನ್ನು ಮುಂದೆ ಮುಷ್ಕರ ನಡೆಸದಂತೆ ನಿಯಂತ್ರಿಸುವ ಹುನ್ನಾರ ಇದಾಗಿದೆ ಎಂದು ಟೀಕಿಸಿದ್ದಾರೆ.
ಅಪಾರ ತ್ಯಾಗ ಬಲಿದಾನಗಳ ಮೂಲಕ ಪಡೆದಿರುವ ಮುಷ್ಕರದ ಹಕ್ಕನ್ನು ಕಿತ್ತುಕೊಳ್ಳುವ ಮೂಲಕ ದುಡಿಯುವ ಜನರ ಹೋರಾಟಗಳನ್ನು ದಮನ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವು ಜನತಂತ್ರ ವಿರೋಧಿ ಕ್ರಮವಾಗಿದೆ. ಸರ್ಕಾರ ಹಾಗೂ ಮಾಲೀಕರು ಮೇಲಿಂದ ಮೇಲೆ ನೌಕರರನ್ನು ಶೋಷಣೆಗೊಳಪಡಿಸುತ್ತಿದ್ದಾರೆ. ಇಂಥ ಶೋಷಣೆ ವಿರುದ್ಧ ಹೋರಾಡದಂತೆ ತಡೆಯುವುದು ಸಮಂಜಸವಲ್ಲ ಎಂದು ದೂರಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ದಿನೇದಿನೇ ಏರುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ನೌಕರರ ಆದಾಯ ಇಳಿಕೆಯಾಗುತ್ತಿದೆ. ಸಿಬ್ಬಂದಿಗಳ ಕಾನೂನುಬದ್ಧ ಸವಲತ್ತುಗಳನ್ನು ಒಂದೊಂದಾಗಿ ಕಸಿದುಕೊಳ್ಳಲಾಗುತ್ತಿದೆ. ನೌಕರರು ಹಾಗೂ ಕಾರ್ಮಿಕರು ನ್ಯಾಯೋಚಿತ ಬೇಡಿಕೆಗಳನ್ನು ಪರಸ್ಪರ ತಿಳಿವಳಿಕೆ ಹಾಗೂ ಸೌಹಾರ್ದಯುತವಾದ ಚೌಕಾಸಿಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಇಚ್ಚಿಸುತ್ತಾರೆ. ಆದರೆ, ಆಡಳಿತ ಮಂಡಳಿಗಳು, ಮಾಲೀಕರು ಹಾಗೂ ಆಳುವ ವರ್ಗಗಳು ಈ ನ್ಯಾಯೋಚಿತ ಬೇಡಿಕೆಗಳನ್ನು ಪರಿಗಣಿಸಿ ಪರಿಹರಿಸಲು ಮುಂದಾಗದಿದ್ದಾಗ ಹೋರಾಟ ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಕರಾಳ ಕಾಯಿದೆ ಹಿಂತೆಗೆದುಕೊಳ್ಳಬೇಕೆಂದು ಸಂಘಟನೆ ಆಗ್ರಹಿಸುತ್ತದೆ. ಇಂಥಹ ದಮನಕಾರಿ ಕಾಯಿದೆ ಹಿಮ್ಮೆಟ್ಟಿಸಲು ಎಲ್ಲಾ ಕಾರ್ಮಿಕ ಸಂಘಟನೆಗಳು ಒಂದಾಗಿ ಐಕ್ಯ ಹೋರಾಟ ಬೆಳೆಸಲು ಮುಂದಾಗಬೇಕೆಂದು ಅವರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

