ವಾಸಸ್ಥಳ ಪ್ರಮಾಣ ಪತ್ರ ವಿಳಂಬ?
ಜಗನ್ನಾಥ ಆರ್.ದೇಸಾಯಿ
ರಾಯಚೂರು: 371ನೇ ಕಲಂ ಜಾರಿಗೆ ಹೋರಾಡಿದ್ದ ಸಂಘಟನೆಗಳು ಈಗ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿ ಹೈ.ಕ.ದವರಿಗೆ ಅಗತ್ಯ ದಾಖಲೆ ದೊರಕಿಸಿಕೊಡಲೂ ಹೋರಾಡುವಂತಾಗಿದೆ. ಅಭ್ಯರ್ಥಿಗಳಿಗೆ ವಾಸಸ್ಥಳ ಪ್ರಮಾಣ ಪತ್ರ ನೀಡಿಕೆ ಹೊಣೆಯನ್ನು ಪೂರ್ವ ಸಿದ್ಧತೆಯಿಲ್ಲದೇ ಜಿಲ್ಲೆಗೆ ಹೊರಿಸಿರುವುದು ಗೊಂದಲ ಸೃಷ್ಟಿಸಿದ್ದು, ಪ್ರಕ್ರಿಯೆ ವಿಳಂಬಕ್ಕೂ ದಾರಿಯಾಗಿದೆ.
ನ. 6ರಂದು ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ರಾಜ್ಯ ಸರ್ಕಾರ ವಾಸಸ್ಥಳ ಪ್ರಮಾಣ ಪತ್ರ ನೀಡಿಕೆಗೆ ಸಂಬಂಧಿಸಿ ಮಾದರಿ ಕಳುಹಿಸಿದೆ. ಅದೇ ಮಾದರಿಯಲ್ಲಿ ಪ್ರಮಾಣ ಪತ್ರ ನೀಡಲು ಹೇಳಿದೆ. ಆದರೆ ಆ ಮಾದರಿಯ ತಂತ್ರಾಂಶದ ತಯಾರಿಸುವ ವಿಚಾರ ಗೊಂದಲಕ್ಕೆ ದಾರಿ ಮಾಡಿದೆ.
ಜಿಲ್ಲಾಡಳಿತ ವಿಳಂಬ: ರಾಜ್ಯ ಸರ್ಕಾರವು 2013ರ ನ.6ರಂದು ಆದೇಶ ಹೊರಡಿಸಿ ಹೈ.ಕ.ಭಾಗದ ನಿವಾಸಿಗಳಿಗೆ ವಾಸಸ್ಥಳ ಪ್ರಮಾಣ ಪತ್ರ ನೀಡಿಕೆಗೆ ನಮೂನೆ-12ರ ಮಾದರಿ ಜಿಲ್ಲಾಡಳಿತಗಳಿಗೆ ಕಳುಹಿಸಿ ಅರ್ಜಿ ಸಲ್ಲಿಸುವವರಿಗೆ ನೀಡಲು ಸೂಚಿಸಿದೆ. ನ.6 ರಂದು ಹೊರಡಿಸಿದ ಸೂಚನೆಯ ಜಾರಿಗೆ ಜಿಲ್ಲಾಡಳಿತ ವಿಳಂಬ ಮಾಡಿದೆ.
ಮಾಹಿತಿ ಕೇಂದ್ರ; ಡಿ.7ರಂದು ಜಿಲ್ಲಾಡಳಿತವು ನಮೂನೆ-12ರಲ್ಲಿ ಪ್ರಮಾಣ ಪತ್ರ ನೀಡಿಕೆಗೆ ಸಂಬಂಧಿಸಿ ಸೂಕ್ತ ತಂತ್ರಾಂಶ ತಯಾರಿಸಿ ಅಳವಡಿಸುವಂತೆ ನೆಮ್ಮದಿ ಕೇಂದ್ರದ ಹೆಚ್ಚುವರಿ ನಿರ್ದೇಶಕರಿಗೆ ಪತ್ರ ಬರೆದಿದೆ. ಸದ್ಯ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಪ್ರಮಾಣ ಪತ್ರಗಳನ್ನು ನೆಮ್ಮದಿ ಕೇಂದ್ರದ ಮೂಲಕವೇ ನೀಡಲಾಗುತ್ತಿದೆ.
ನೆಮ್ಮದಿ ಕೇಂದ್ರಗಳಲ್ಲಿ ತಂತ್ರಾಂಶ ಅಳವಡಿಕೆ ಮಾಡಬೇಕೆಂಬುದು ಜಿಲ್ಲಾಡಳಿತದ ಮನವಿ. ಆದರೆ ತಂತ್ರಾಂಶವನ್ನು ನ್ಯಾಷನಲ್ ಇನ್ಫರ್ಮೆಟಿಕ್ ಸೆಂಟರ್(ಎನ್ಐಸಿ)ನವರು ತಯಾರಿಸಿ ನೆಮ್ಮದಿ ಕೇಂದ್ರಗಳಿಗೆ ಒದಗಿಸಿದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ ಎಂಬ ಮಾತು ನೆಮ್ಮದಿ ಕೇಂದ್ರದ ಮೇಲಧಿಕಾರಿಗಳಿಂದ ಕೇಳಿಬಂದಿದೆ ಎಂದು ಜಿಲ್ಲಾಡಳಿತದ ಮೂಲಗಳು ಹೇಳಿವೆ.
ಗೊಂದಲ: ತಂತ್ರಾಂಶ ತಯಾರಿ ಮತ್ತು ಅಳವಡಿಕೆಗೆ ಸಂಬಂಧಿಸಿ ಚರ್ಚೆ ಜಾರಿಯಲ್ಲಿದೆ. ಈ ಮಧ್ಯೆ ನೆಮ್ಮದಿ ಕೇಂದ್ರಗಳು ಈಗಾಗಲೇ ಅವ್ಯವಸ್ಥೆಯ ಗೂಡು ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಅನೇಕ ಸಂದರ್ಭದಲ್ಲಿ ನೆಮ್ಮದಿ ಕೇಂದ್ರಗಳು ತಾಂತ್ರಿಕ ತೊಂದರೆಯಿಂದ ಮುಚ್ಚಿದ್ದರಿಂದ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪಡೆಯಲು ಬಂದವರು ಬರಿಗೈಲಿ ಮರಳಿದ ಪ್ರಸಂಗಗಳೂ ಅನೇಕ ನಡೆದಿವೆ.
ಅಂಥ ಸಂದರ್ಭದಲ್ಲಿ ಅರ್ಜಿದಾರರ ಒತ್ತಡಕ್ಕೆ ಮಣಿದು ನೆಮ್ಮದಿ ಕೇಂದ್ರದ ಸಿಬ್ಬಂದಿಯು ದಾಖಲೆಗಳ ಮುದ್ರಿತ ಪ್ರತಿಗಳನ್ನು ಭರ್ತಿ ಮಾಡಿ ತಹಸೀಲ್ದಾರ್ ಅವರ ಸಹಿ ಪಡೆದು ವಿತರಿಸಿದ್ದೂ ಇದೆ. ನೆಮ್ಮದಿ ಕೇಂದ್ರಗಳಲ್ಲಿ ಇಂಥ ತಾಂತ್ರಿಕ ಸಮಸ್ಯೆಗಳು ಆಗಾಗ್ಗೆ ಕಾಣಬಹುದು.
ವಿಳಂಬ: 371ನೇ ಕಲಂ ಅಡಿ ವಾಸಸ್ಥಳ ಪ್ರಮಾಣ ಪತ್ರ ನೀಡಿಕೆ ವಿಚಾರದಲ್ಲಿ ಅನಗತ್ಯವಾಗಿ ತಂತ್ರಾಂಶ ಅಳವಡಿಕೆ ಒತ್ತಾಯ ಕೇಳಿಬಂದಿರುವುದು ಪ್ರಮಾಣ ಪತ್ರ ಪಡೆಯಲು ಕಾತರರಾಗಿರುವ ಈ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಅಡಚಣೆಯಾಗಿ ಪರಿಣಮಿಸಿದೆ.
ಪ್ರಮಾಣ ಪತ್ರ: ರಾಜ್ಯದಲ್ಲಿ ಶೀಘ್ರದಲ್ಲಿಯೇ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕಾತಿಗೆ ಚಾಲನೆ ದೊರೆಯುವ ಎಲ್ಲ ಸಾಧ್ಯತೆಯಿದೆ. ಅಂಥ ಸಂದರ್ಭದಲ್ಲಿ ಈ ಭಾಗದ ಅಭ್ಯರ್ಥಿಗಳು ಕಡ್ಡಾಯವಾಗಿ ವಾಸಸ್ಥಳ ಪ್ರಮಾಣ ಪತ್ರದ ದಾಖಲೆ ಅರ್ಜಿಯೊಂದಿಗೆ ಲಗತ್ತಿಸಿದರೆ ಮಾತ್ರ ಹೈ.ಕ.ಕ್ಕೆ ನಿಗದಿಯಾಗುವ ಕೋಟಾದಡಿ ಅರ್ಹತೆ ಪಡೆಯುತ್ತಾರೆ. ಪ್ರಮಾಣ ಪತ್ರ ಪಡೆದು ಸಲ್ಲಿಸದಿದ್ದಲ್ಲಿ ಸೌಲಭ್ಯದಿಂದ ವಂಚಿತರಾಗುವುದು ಖಚಿತ. ಇಲ್ಲಿನ ಉದ್ಯೋಗಾಕಾಂಕ್ಷಿಗಳು ಹಾಗೂ ವಿವಿಧ ಕೋರ್ಸುಗಳಿಗೆ ಪ್ರವೇಶ ಪಡೆಯಬಯಸುವವರು ಸದ್ಯ ವಾಸಸ್ಥಳ ಪ್ರಮಾಣ ಪತ್ರದ ತಂತ್ರಾಂಶಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿರುವುದರಿಂದ ಸೌಲಭ್ಯ ವಂಚಿತರಾಗುವ ಭೀತಿಯಿದೆ.
ಈ ಕುರಿತು ಕನ್ನಡಪ್ರಭಕ್ಕೆ ಮಾತನಾಡಿದ ಜನಸಂಗ್ರಾಮ ಪರಿಷತ್ ರಾಜ್ಯ ಸಂಚಾಲಕ ಹಾಗೂ ಹೈ.ಕ.ಭಾಗದ ಹೋರಾ ಟಗಾರ ರಾಘವೇಂದ್ರ ಕುಷ್ಟಗಿ, ಜಿಲ್ಲಾಡಳಿತ ಜಿಲ್ಲೆಯ ಎಲ್ಲರಿಗೂ ವಾಸಸ್ಥಳ ಪ್ರಮಾಣ ಪತ್ರ ನೀಡಿಕೆಗೆ ಸಂಬಂಧಿಸಿ ಶ್ರಮ ವಹಿಸಿ ದುಡಿಯಬೇಕು. ತಂತ್ರಾಂಶಕ್ಕಾಗಿ ಕಾಯದೇ ಪ್ರಮಾಣ ಪತ್ರದ ಮಾದರಿಯನ್ನು ಭರ್ತಿ ಮಾಡಿ ತಹಸೀಲ್ದಾರರ ಸಹಿ ಪಡೆದು ವಿತರಿಸಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ಅನರ್ಹರಿಗೆ ದಾಖಲೆಗಳು ದೊರೆಯದಂತೆ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಮೀಸಲಾತಿ: ಹೈ.ಕ. ಭಾಗದಲ್ಲಿ ವಾಸಸ್ಥಳ ಪ್ರಮಾಣ ಪತ್ರ ನೀಡಿಕೆ ಕಾರ್ಯ ಅಭಿಯಾನದ ಮಾದರಿಯಲ್ಲಿ ನಡೆಯಬೇಕು. ಅರ್ಹರಿಗೆ ಪ್ರಮಾಣ ಪತ್ರ ಖಾತರಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಅನ್ಯರಿಗೆ ಮೀಸಲಾತಿ ಸೌಲಭ್ಯದ ಲಾಭ ದೊರೆಯದಂತೆ ಕಟ್ಟೆಚ್ಚರ ವಹಿಸಬೇಕೆಂಬುದು ಹೈ.ಕ. ಭಾಗದ ಜಿಲ್ಲೆಯ ಹೋರಾಟಗಾರರ ಒತ್ತಾಸೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

