ಏಡ್ಸ್ಗೆ ಜನಜಾಗೃತಿಯೇ ಔಷಧ
ಕನ್ನಡಪ್ರಭ ವಾರ್ತೆ ರಾಯಚೂರು ಡಿ.12
ಎಚ್ಐವಿ ಸೋಂಕು ಮತ್ತು ಏಡ್ಸ್ ರೋಗಗಳ ಹರಡುವಿಕೆ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದ್ದು, ಪರಿಣಾಮವಾಗಿ ರೋಗಿಗಳ ಸಂಖ್ಯೆಯಲ್ಲಿ ಈಚಿನ ದಿನಗಳಲ್ಲಿ ಇಳಿಕೆಯಾಗಿದೆ. ಇನ್ನೂ ಅನೇಕರಿಗೆ ಮಾರಕ ರೋಗದ ಬಗ್ಗೆ ಮಾಹಿತಿ ತಿಳಿಸಿಕೊಡುವ ಅವಶ್ಯಕತೆಯಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ.ಜಿ.ಎಂ. ಪಾಟೀಲ್ ಕರೆ ನೀಡಿದರು.
ಅವರು ನಗರದ ರಾಯಚೂರು ಮೆಡಿಕಲ್ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಡಿ.1ರಂದು ವಿಶ್ವದೆಲ್ಲೆಡೆ ವಿಶ್ವ ಏಡ್ಸ್ ದಿನಾಚರಣೆ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಔಷಧಿಯಿಲ್ಲ: ಎಚ್ಐವಿ ಸೋಂಕಿತರು ಹಾಗೂ ಏಡ್ಸ್ಪೀಡಿತರು ಎಲ್ಲರಂತೆಯೇ ಸಹಜ ಬದುಕು ಸಾಗಿಸಬಹುದಾಗಿದೆ. ಮಾರಕ ಏಡ್ಸ್ ರೋಗಕ್ಕೆ ಯಾವುದೇ ಔಷಧಿಯಿಲ್ಲ. ಆದರೆ ರೋಗ ಬಾರದಂತೆ ಮತ್ತು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದೊಂದೇ ಮಾರ್ಗ ಎಂದು ಹೇಳಿದರು.
ಎಚ್ಐವಿ ಸೋಂಕು ಮತ್ತು ಏಡ್ಸ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಚಾರ ಕಾರ್ಯ ಮಾಡಬೇಕಿದೆ. ಜನಜಾಗೃತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಸರ್ಕಾರ ಪ್ರಕಟಿಸಿದ್ದು, ಅವುಗಳ ಅನುಷ್ಠಾನದ ಮೂಲಕ ರೋಗಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.
ಸಹಕಾರ ಅಗತ್ಯ: ಮತ್ತೊಬ್ಬ ನ್ಯಾಯಾಧೀಶ ಮಹಮದ್ ಮುಜಾಹಿದ್ ಉಲ್ಲಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಐವಿ ಸೋಕುಂ ಮತ್ತು ಏಡ್ಸ್ ರೋಗಗಳ ಹರಡುವಿಕೆ ತಡೆಗೆ ಅನೇಕ ಕಾರ್ಯಕ್ರಮಗಳ ಜಾರಿಗೆ ತಂದಿವೆ.
ಈ ಕಾರ್ಯಕ್ರಮಗಳಡಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ದೊರೆಯುತ್ತಿದ್ದು, ಪೀಡಿತರು ರೋಗ ಹರಡದಂತೆ ತಡೆಯುವ ಕಾರ್ಯದಲ್ಲಿ ಕೈ ಜೋಡಿಸಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾರಾಯಣಪ್ಪ ಮಾತನಾಡಿ, ಏಡ್ಸ್ ರೋಗಕ್ಕೆ ಯಾವುದೇ ಔಷಧಿಯಿಲ್ಲ. ವಿಜ್ಞಾನಿಗಳು 1988ರಿಂದ ಸತತ ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇನ್ನೂ ಪರಿಹಾರ ಸಾಧ್ಯವಾಗಿಲ್ಲ. ಸದ್ಯಕ್ಕೆ ರೋಗ ಬಾರದಂತೆ ಸುರಕ್ಷಿತ ಮಾರ್ಗೋಪಾಯಗಳ ಅನುಸರಿಸುವುದೊಂದೇ ಪರಿಹಾರವಾಗಿದೆ ಎಂದು ಹೇಳಿದರು.
ಹೆಚ್ಚು ರೋಗಿಗಳು: ವಿಶ್ವದಲ್ಲಿ ಸದ್ಯ 33.2ಮಿಲಿಯನ್ ನಷ್ಟು ಜನ ಎಚ್ಐವಿ ಮತ್ತು ಏಡ್ಸ್ ಬಾಧಿತರಿದ್ದಾರೆ. ವಿಶ್ವದಲ್ಲಿಯೇ ಅತಿ ಹೆಚ್ಚು ರೋಗಿಗಳು ದಕ್ಷಿಣ ಆಫ್ರಿಕಾದಲ್ಲಿದ್ದು, ನಂತರದ ಸ್ಥಾನದಲ್ಲಿ ನೈಜಿರಿಯಾ ಮತ್ತು ಭಾರತ ದೇಶಗಳಿವೆ. ದೇಶದಲ್ಲಿ ಮಣಿಪುರದಲ್ಲಿ ಹೆಚ್ಚಿನ ರೋಗಿಗಳಿದ್ದು, ನಂತರದ ಸ್ಥಾನದಲ್ಲಿ ಆಂಧ್ರ ಮತ್ತು ಕರ್ನಾಟಕಗಳಿವೆ ಎಂದು ವಿವರಿಸಿದರು.
ದೇಶದಲ್ಲಿ ಸರ್ಕಾರಗಳು ಜಾರಿಗೆ ತಂದ ವಿವಿಧ ಜಾಗೃತಿ ಕಾರ್ಯಕ್ರಮಗಳಿಂದಾಗಿ ರೋಗ ಹರಡುವಿಕೆ ಪ್ರಮಾಣ ತಗ್ಗಿದೆ. ರೋಗ ಹರಡುವಿಕೆ ಮತ್ತು ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ತಲುಪಿಸುವುದು ಆಡಳಿತದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅವಶ್ಯಕ ಎಂದು ಮನವಿ ಮಾಡಿದರು.
ಹಿರಿಯ ವೈದ್ಯ ಡಾ.ಶಂಕ್ರಪ್ಪ ಮುದ್ಗಲ್ ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಭಾನುರಾಜ್, ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ಡಾ. ಬಾಲಸುಬ್ರಹ್ಮಣ್ಯ, ಡಾ.ರಾಹುಲ್, ಪ್ರಭು ಪಾಟೀಲ್ ವಕೀಲರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

