ರಾಯಚೂರು

'ನಂದವಾಡಗಿ' ಜಾರಿಗೆ ಆಗ್ರಹ

Published On :

ಕ.ಪ್ರ. ವಾರ್ತೆ, ಮುದಗಲ್, ಡಿ.16
ಲಿಂಗಸ್ಗೂರು ರಸ್ತೆಯಲ್ಲಿರುವ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಂದವಾಡಗಿ ಏತ ನೀರಾವರಿ ಯೋಜನೆ ಜಾರಿಗೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಲಿಂಗಸ್ಗೂರು ಮತ್ತು ದೇವದಾಸಿ ಮಹಿಳಾ ವಿಮೋಚನಾ ಸಂಘ ಮುದಗಲ್ ಜಂಟಿಯಾಗಿ ರಸ್ತಾ ರೋಕೋ ನಡೆಸಿದರು.
ಬೆಲೆ ನಿಗದಿಗೆ ಒತ್ತಾಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯದಲ್ಲಿಯ ಜನತೆ ಅವಲಂಬಿತವಾಗಿರುವ ಕೃಷಿ ನಾಶಕ್ಕೆ ಕಾರಣರಾಗುತ್ತಿದ್ದು, ಕೃಷಿ ವಿರೋಧಿ ನೀತಿ ಚಟುವಟಿಕೆಯನ್ನು ಸ್ಥಗಿತಗೊಳಿಸಿ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ನಂದವಾಡಗಿ ಏತ ನೀರಾವರಿ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು. ಡಾ. ಸ್ವಾಮಿನಾಥನ್ ವರದಿಯಾನುಸಾರ ಉತ್ಪನ್ನದ ಒಟ್ಟಾರೆ ವೆಚ್ಚಕ್ಕೆ ಶೇ.50 ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸಬೇಕು.
ಬತ್ತಕ್ಕೆ ರು. 2000, ಹತ್ತಿಗೆ ರು. 6500, ತೊಗರಿಗೆ ರು. 6450, ಮೆಕ್ಕೆ ಜೋಳಕ್ಕೆ ರು. 2000, ಪ್ರತಿ ಕ್ವಿಂಟಲ್‌ಗೆ ಮತ್ತು ಕಬ್ಬಿಗೆ ರು. 3150 ಪ್ರತಿ ಟನ್ನಿಗೆ ನಿಗದಿಪಡಿಸಬೇಕು. ಸಾಲದ ಬಾಧೆಗೆ ಒಳಗಾಗಿ ಆತ್ಮಹತ್ಯೆಗೊಳಗಾಗುತ್ತಿರುವುದನ್ನು ತಡೆಯಲು ಕೇರಳ ಮಾದರಿಯಲ್ಲಿ ಸಾಲಮುಕ್ತ ಕಾಯ್ದೆಯನ್ನು ಜಾರಿಗೆ ತರಬೇಕು.
ಪರಿಹಾರ ನೀಡಿ: ಸಮರ್ಪಕ ವಿದ್ಯುತ್, ಗುಡಿಸಲು ಮುಕ್ತ ರಾಜ್ಯಕ್ಕಾಗಿ ನಿವೇಶನರಹಿತ ಕುಟುಂಬಗಳಿಗೆ ಕೇರಳ ರಾಜ್ಯದ ಮಾದರಿಯಲ್ಲಿ ಪ್ರತಿ ಕುಟುಂಬಕ್ಕೆ 5 ಗುಂಟೆ ನಿವೇಶನ ಸಹಿತ ಮನೆ ಮಂಜೂರು ಮಾಡಿ ಅದರಲ್ಲಿಯೇ ಕೃಷಿ ನಡೆಸಲು ಎಲ್ಲ ರೀತಿಯ ಸಹಾಯಕೊಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಯಾಗಿ ಜಾರಿಗೊಳಿಸಿ, ಕೂಲಿ ದರವನ್ನು ರು. 300ಕ್ಕೆ ಮತ್ತು ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಗ್ರಾಮ ಪಂಚಾಯತಿಯಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಕೂಲಿಕಾ ವಿರೋಧಿ ನೀತಿ ತಡೆಯಬೇಕು.
ವಿವಿಧ ಬೇಡಿಕೆ: ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಬೇಕು. ಸತ್ತ ದನಗಳಿಗೆ ತಲಾ 50 ಸಾವಿರ, ಹಾಗೂ ಕುರಿಗಳಿಗೆ 25 ಸಾವಿರ ಪರಿಹಾರ ನೀಡಬೇಕು. ಎನ್ನುವ ಹಲವಾರು ಬೇಡಿಕೆಗಳನ್ನು ಮುಖ್ಯಮಂತ್ರಿಗೆಳಿಗೆ ಸ್ಥಳೀಯ ಪ್ರಭಾರಿ ಉಪ ತಹಸೀಲ್ದಾರ್ ಲಕ್ಷ್ಮಣಗೆ ಸಲ್ಲಿಸಲಾಯಿತು.
ರಸ್ತಾ ರೋಕೋದಲ್ಲಿ ಕೆಪಿಆರ್‌ಎಸ್‌ನ ತಾಲೂಕು ಪ್ರಧಾನ ಕಾರ್ಯದರ್ಶಿ ಹನುಮಂತ ಕಾರಲಕುಂಟಿ, ಗೌರವಾಧ್ಯಕ್ಷ ಪರಶುರಾಮ ಹಲ್ಕಾವಟಗಿ, ನಾಗಲಾಪುರ ಘಟಕದ ಅದ್ಯಕ್ಷ ಆಂಜನೇಯ ನಾಗಲಾಪೂರ, ಎಸ್‌ಎಫ್‌ಐನ ರಂಗನಾಥ ಹಟ್ಟಿ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಹುಲಿಗೆಮ್ಮ ಕುದುರೆ, ರತ್ನಾ ಮಸ್ಕಿ, ಸರೋಜಾ ಮೆದಿಕಿನಾಳ, ಹುಲಿಗೆಮ್ಮ ಕುಣಿಕೆಲ್ಲೂರ, ದೇವಮ್ಮ ಮುದಗಲ್ಲ, ದುರುಗಮ್ಮ ಮುದಗಲ್ಲ, ಪರಶುರಾಮ ಗೊರೆಬಾಳ, ಮುತ್ತಣ್ಣ ಮುದಗಲ್ಲ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.