ರಾಯಚೂರು

ಸ್ಮಶಾನ ಜಾಗ ವಿವಾದ ಸುಖಾಂತ್ಯ

Published On :

ಕ.ಪ್ರ. ವಾರ್ತೆ ಲಿಂಗಸ್ಗೂರು ಡಿ.18
ಪಟ್ಟಣದ ಪುರಸಭೆ ವ್ಯಾಪ್ತಿಯ ಹುಲಿಗುಡ್ಡ ಗ್ರಾಮದ ಮಹಿಳೆಯೊಬ್ಬಳು ಬುಧವಾರ ಮೃತಪಟ್ಟ ಪರಿಣಾಮ ಶವಸಂಸ್ಕಾರ ನಡೆಸಲು ಸ್ಮಶಾನ ಜಾಗ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಅಧಿಕಾರಿಗಳ ಮತ್ತು ಗ್ರಾಮಸ್ಥರ ಮಧ್ಯೆ ತೀವ್ರ ಚರ್ಚೆಗೆ ಗ್ರಾಸವಾಯಿತು.
ಗ್ರಾಮದ ಗಂಗಮ್ಮ ವಿರೂಪಾಕ್ಷಪ್ಪ(35) ಎಂಬುವರು ಬುಧವಾರ ಮೃತ ಪಟ್ಟಿದ್ದು, ಹಲವು ವರ್ಷಗಳಿಂದ ಶವಸಂಸ್ಕಾರ ಮಾಡುತ್ತಾ ಬಂದಿರುವ ಜಾಗದಲ್ಲಿ ಈಗ ಶವಸಂಸ್ಕಾರ ಮಾಡುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಸ. ಆಯುಕ್ತ ಟಿ.ಯೋಗೇಶ್, ತಹಸೀಲ್ದಾರ್ ಜಿ.ಎಸ್. ಮಹಾಜನ್, ಡಿವೈಎಸ್‌ಪಿ ಅನಿತಾ ಹದ್ದಣ್ಣವರ್, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ್, ಸಿಪಿಐ ವರದರಾಜ್ ಆಗಮಿಸಿ ಗ್ರಾಮಸ್ಥರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಒತ್ತುವರಿ: ಗ್ರಾಮದ ಲಿಟ್ಲ್ ಫ್ಲವರ್ ಶಾಲೆ ಬಳಿ ಇರುವ ಜಾಗದಲ್ಲಿ ಹಲವು ವರ್ಷಗಳಿಂದ ಶವಸಂಸ್ಕಾರ ಮಾಡುತ್ತಾ ಬರಲಾಗುತ್ತಿದೆ. ಆದರೆ ಶಾಲೆ ಆಡಳಿತ ಮಂಡಳಿ ಸ್ಮಶಾನ ಜಾಗ ಒತ್ತುವರಿ ಮಾಡಿದ್ದು, ಇದರಿಂದ ಶವಸಂಸ್ಕಾರಕ್ಕೆ ತೊಂದರೆಯಾಗಿದೆ. ಗ್ರಾಮದ ಮಹಿಳೆ ಮೃತರಾಗಿದ್ದಾರೆ. ಈ ಹಿಂದೆ ಶವಸಂಸ್ಕಾರ ಮಾಡುತ್ತಾ ಬಂದಿರುವ ಜಾಗದಲ್ಲಿ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ಸಹಾಯಕ ಆಯುಕ್ತ ಟಿ. ಯೋಗೇಶ್ ಮಾತನಾಡಿ, ಶಾಲಾ ಆಡಳಿತ ಮಂಡಳಿ ಜಾಗ ಒತ್ತುವರಿ ಮಾಡಿದ ಕುರಿತು ದೂರು ಆಧರಿಸಿ ಈಗಾಗಲೇ ಸಂಬಂಧಪಟ್ಟ ಸರ್ವೆ ನಂ.ಜಮೀನು ಸಮಗ್ರವಾಗಿ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. ಸರ್ಕಾರದ ದಾಖಲೆಗಳಲ್ಲಿ ಸ್ಮಶಾನ ಜಾಗ ಎಂದು ಯಾವುದೇ ದಾಖಲೆ ಇರುವುದಿಲ್ಲ. ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಜಾಗ ಇರುವುದರಿಂದ ಆ ಜಾಗದಲ್ಲಿ ಶವಸಂಸ್ಕಾರ ಮಾಡಲು ಬರುವುದಿಲ್ಲ. ಕಾರಣ ಸರ್ಕಾರದಿಂದ ಜಾಗ ನೀಡಲಾಗುವುದು. ಅಲ್ಲಿಯೇ ಶವಸಂಸ್ಕಾರ ನಡೆಸುವಂತೆ ಮನವಿ ಮಾಡಿದರು.
ತಡೆಯಾಜ್ಞೆ: 2008ರಿಂದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿದೆ. ಅಲ್ಲದೆ ತಹಶೀಲ್ದಾರರು 2008 ಮೇ 28ರಂದು ಸ್ಥಳ ಪರಿಶೀಲನೆ ಮಾಡಿ ಸ.ನಂ.78/3ರ ದಕ್ಷಿಣ ಭಾಗದಲ್ಲಿ ರುದ್ರ ಭೂಮಿ ಕಬಳಿಸಿದ್ದನ್ನು ದೃಢಪಡಿಸಿ ಸ್ಮಶಾನ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಿಸದಂತೆ ಅತಿಕ್ರಮಣಕಾರರಿಗೆ ನೋಟೀಸು ನೀಡಿರುತ್ತಾರೆ. 2008 ಡಿ.3 ರಂದು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಸ.ನಂ.78/10ಸ್ಮಶಾನ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಿರುತ್ತಾರೆ. ವಿವಾದಿತ ಜಮೀನನ್ನು ಸರಿಯಾಗಿ ಸರ್ವೆ ನಡೆಸದೆ ಶಾಲಾ ಆಡಳಿತ ಮಂಡಳಿ ಪರ ಅಧಿಕಾರಿಗಳು ಒಲವು ತೋರುತ್ತಿದ್ದಾರೆ. ಸದರಿ ಜಮೀನಿನಲ್ಲಿ ಸುಮಾರು ಒಂದು ಎಕರೆ ಜಮೀನು ಕಬಳಿಕೆಯಾಗಿದೆ. ಹುಲಿಗುಡ್ಡ ಗ್ರಾಮದಲ್ಲಿನ ಸ್ಮಶಾನ ಸ್ಥಳವನ್ನು ಶವ ಸಂಸ್ಕಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ರಸ್ತೆ ಬದಿ ಶವಸಂಸ್ಕಾರ ನಡೆಸಲಾಗುವುದು. ಇಲ್ಲದಿದ್ದರೆ ಶವ ತಹಸೀಲ್ದಾರ್ ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದರು.
ಸ್ಮಶಾನ ವ್ಯವಸ್ಥೆ: ನಂತರ ಅಧಿಕಾರಿಗಳು ಗ್ರಾಮಸ್ಥರಿಗೆ ಖಾಸಗಿ ವ್ಯಕ್ತಿಯೊಬ್ಬರ ಬಡಾವಣೆಯಲ್ಲಿನ ನಾಗರಿಕ ಸೌಲಭ್ಯಕ್ಕೆ ಮೀಸಲಿರುವ ಜಾಗದಲ್ಲಿ ಸ್ಮಶಾನಕ್ಕೆ ಜಾಗೆ ಒದಗಿಸುವುದಾಗಿ ಹೇಳಿ ಪರಿಶೀಲನೆಗೆ ತೆರಳಿ ಗ್ರಾಮಸ್ಥರಿಗೆ ತೋರಿಸಲಾಯಿತು. ಇದಕ್ಕೆ ಗ್ರಾಮಸ್ಥರು ಈ ಜಾಗದಲ್ಲಿ ದೊಡ್ಡ ದೊಡ್ಡ ಹಾಸು ಬಂಡೆಗಳು ತುಂಬಿವೆ. ಇಲ್ಲಿ ಶವಸಂಸ್ಕಾರಕ್ಕೆ ಅನಾನುಕೂಲವಾಗಲಿದೆ ಎಂದು ವಿರೋಧ ವ್ಯಕ್ತಪಡಿಸಿದರು. ನಂತರ ಗ್ರಾಮದ ಸಮೀಪದ ಅರಣ್ಯ ಇಲಾಖೆ ವ್ಯಾಪ್ತಿಯ ಜಾಗೆಯಲ್ಲಿ 2 ಎಕರೆ ಜಮೀನು ಸ್ಮಶಾನಕ್ಕೆ ನೀಡಲು ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಜಾಗ ಸ್ವಚ್ಛಗೊಳಿಸಿ ಮೂಲ ಸೌಕರ್ಯ ಕಲ್ಪಿಸಿಕೊಡಲಾಗುವುದೆಂದು ಗ್ರಾಮಸ್ಥರ ಮನ ಒಲಿಸುವ ಪ್ರಯತ್ನ ಕೊನೆಗೂ ಯಶಸ್ವಿಯಾಯಿತು. ತದನಂತರ ಗ್ರಾಮದ ಮೃತ ಮಹಿಳೆ ಗಂಗಮ್ಮ ವಿರುಪಾಕ್ಷಪ್ಪ ಮೃತದೇಹ ಅರಣ್ಯ ಇಲಾಖೆ ಜಾಗೆಯಲ್ಲಿ ಶವಸಂಸ್ಕಾರ ನಡೆಸಿದರು. ಚರ್ಚೆಯಲ್ಲಿ ಗ್ರಾಮದ ಮುಖಂಡರಾದ ನಾಗರಾಜ ತಿಪ್ಪಣ್ಣ, ಅಮರಯ್ಯಸ್ವಾಮಿ, ಮಹಾದೇವಪ್ಪ, ಯಮನೂರು, ಬಸಪ್ಪ, ಮಲ್ಲಪ್ಪ ನಾಯಕ, ಶಿವಮ್ಮ, ಶರಣಮ್ಮ, ಹುಲಿಗೆಮ್ಮ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.