2006ರ ಸಿಇಟಿ ಕಾಯ್ದೆಗೆ ವಿರೋಧ
ಕ.ಪ್ರ. ವಾರ್ತೆ ರಾಯಚೂರು ಡಿ.20
ರಾಜ್ಯ ಸರ್ಕಾರ 2006ರ ಸಿಇಟಿ ಕಾಯಿದೆ ಜಾರಿಗೆ ಮುಂದಾಗಿರುವ ಕ್ರಮವನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರದ ಅಣಕು ಶವಯಾತ್ರೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಂಘಟನೆಯ ನೂರಾರು ಕಾರ್ಯಕರ್ತರು ಸರ್ಕಾರದ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಸರ್ಕಾರ 2006 ಸಿಇಟಿ ಕಾಯಿದೆ ಜಾರಿಗೆ ತರುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತರನ್ನು ಉನ್ನತ ಶಿಕ್ಷಣದಿಂದ ದೂರವಿರಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಟೀಕಿಸಿದರು.
ಕಂಟಕ: ಸಮಾಜದಲ್ಲಿನ ದುರ್ಬಲ ವರ್ಗಗಳಿಗೆ ಸರ್ಕಾರ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಸೋತಿದ್ದು, ಸದ್ಯ 2006ರ ಸಿಇಟಿ ಕಾಯಿದೆ ಜಾರಿ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಂಟಕ ತರುವ ಕಾರ್ಯಕ್ಕೆ ಉದ್ದೇಶಿಸಿದೆ ಎಂದು ಟೀಕಿಸಿದರು.
ಬಡಕೂಲಿಕಾರ್ಮಿಕರ ಮಕ್ಕಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವ್ಯಾಸಂಗ ಮಾಡದಂತೆ ತಡೆಯುವ ಹುನ್ನಾರ ಇದಾಗಿದೆ. ಈ ಹಿಂದೆ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸುವ ಅಂಕದ ಆಧಾರದಲ್ಲಿ ವಿವಿಧ ಕಾಲೇಜುಗಳಿಗೆ ಪ್ರವೇಶ ಸರಾಗವಾಗಿ ಸಿಗುತ್ತಿತ್ತು. ಆದರೆ ಸದ್ಯ ಸರ್ಕಾರದ ನೂತನ ನೀತಿಯಿಂದಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಲಿದೆ ಎಂದು ಆರೋಪಿಸಿದರು.
ಖಾಸಗಿ ಪಾಲು: ಸರ್ಕಾರ 2006 ಸಿಇಟಿ ಕಾಯಿದೆ ಜಾರಿಗೆ ತಂದಲ್ಲಿ ಸದ್ಯ ಸರ್ಕಾರಿ ಕೋಟಾದಲ್ಲಿ ಎಂಜಿನಿಯರಿಂಗ್ ಪ್ರವೇಶಕ್ಕೆ ಸೀಟಿನ ಪ್ರಮಾಣವು ಶೇ.45 ಹಾಗೂ ವೈದ್ಯಕೀಯ ವಿಭಾಗದಲ್ಲಿ ಶೇ.40ಕ್ಕೆ ಹಾಗೂ ದಂತ ವೈದ್ಯಕೀಯ ವಿಭಾಗದಲ್ಲಿನ ಕೋಟಾ ಶೇ.35 ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿದ್ದು, ಅದರಿಂದ ಬಡ ಪ್ರತಿಭಾವಂತರು ವಂಚಿತರಾಗಲಿದ್ದಾರೆಂದು ದೂರಿದರು.
ಸರ್ಕಾರದ ಹೊಸ ನೀತಿಯ ಜಾರಿಯಿಂದಾಗಿ ರಾಜ್ಯದ ಯಾವುದೇ ಖಾಸಗಿ ಅನುದಾನ ರಹಿತ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಸರ್ಕಾರದ ಕೋಟಾ ಅಡಿ ಒಂದು ಸೀಟು ಲಭ್ಯವಿರದಂತಾಗುತ್ತದೆ. ಇದುವರೆಗೆ ಜಾರಿಯಲ್ಲಿರುವ ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆಯು 1993ರಲ್ಲಿ ಆರಂಭಗೊಂಡಿದ್ದು, ದೇಶಕ್ಕೆ ಮಾದರಿಯಾಗಿದೆ. ಆದರೆ 2002ರಲ್ಲಿ ನ್ಯಾಯಾಲಯದ ತೀರ್ಪಿನ ನಂತರ ಖಾಸಗಿ ಕಾಲೇಜುಗಳು ಪ್ರತಿ ವರ್ಷ ಸರ್ಕಾರದ ವಿರುದ್ಧ ಪ್ರವೇಶಕ್ಕೆ ಸಂಬಂಧಿಸಿ ಸಮರ ಸಾರುತ್ತಿವೆ ಎಂದು ಆರೋಪಿಸಿದರು.
ಲಾಬಿ: ಹಾಲಿ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಅವುಗಳ ಅಣತಿಯಂತೆಯೇ ಕಾಯಿದೆ ರೂಪಿಸುತ್ತಿರುವುದು ಬಡವರಿಗೆ ಕಂಟಕಪ್ರಾಯವಾಗಿದೆ. ರಾಜ್ಯ ಸರ್ಕಾರ ಕೂಡಲೇ ಬಡ ಮತ್ತು ಮಧ್ಯಮವರ್ಗದವರ ವಿರೋಧಿ ನೀತಿ ಜಾರಿ ಮಾಡಬಾರದು ಎಂದು ಆಗ್ರಹಿಸಿದರು. ಎಬಿವಿಪಿಯ ಜಿಲ್ಲಾ ಸಹ ಸಂಚಾಲಕ ವಿಜಯ, ಭೀಮಾಶಂಕರ್, ಸಿದ್ದಣ್ಣ, ಭಾನುತೇಜ, ವಿದ್ಯಾರ್ಥಿಗಳಾದ ಕವಿತಾ, ಪದ್ಮಾ, ವಿನೋದ, ರಾಜೇಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹೋರಾಟದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

