ರಾಯಚೂರು

'ನಂದವಾಡಗಿ' ಶೀಘ್ರ ಆರಂಭ: ವಜ್ಜಲ್

Published On :

ಕ.ಪ್ರ. ವಾರ್ತೆ  ಮುದಗಲ್  ಡಿ.20
ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿರುವ ನಂದವಾಡಗಿ ಏತ ನೀರಾವರಿ ಯೋಜನೆಗೆ ಸರ್ಕಾರ ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣಕ್ಕೆ ಸಮೀಪದ ಕೋಮನೂರಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ ಕ್ರೂಢೀಕೃತ ಅನುದಾದಲ್ಲಿ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ 25 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಅಭಿವೃದ್ಧಿ ಕೆಲಸಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಅಭಿವೃದ್ಧಿಗೆ ಹಣ ಸದ್ವಿನಿಯೋಗ: ನಂದವಾಡಗಿ ಏತ ನೀರಾವರಿ ಯೋಜನಗೆ ಹಿಂದಿನ ಸರ್ಕಾರ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟಿದೆ. ಮುಖ್ಯಮಂತ್ರಿ, ನೀರಾವರಿ ಮಂತ್ರಿಗಳನ್ನು ಸಂಪರ್ಕಿಸಿ ಕಾಮಗಾರಿ ಟೆಂಡರ್ ಕರೆಯುವಂತೆ ಒತ್ತಾಯಿಸಲಾಗಿದೆ ಎಂದ ಅವರು, ಕಳೆದ 5 ವರ್ಷಗಳ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಸದ್ಬಳಕೆ ಮಾಡಲಾಗಿದೆ ಎಂದರು.
ಎರಡನೇ ಬಾರಿಗೂ ತಾಲೂಕಿನ ಜನ ಪುನಃ ಆಯ್ಕೆ ಮಾಡಿದ್ದು, ಕಳೆದ ಅವಧಿಯಲ್ಲಿ ತಾಲೂಕಿನ 70 ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಯಲ್ಲಿ ಸೇರಿಸಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
  ಈ ಅವಧಿಯಲ್ಲಿಯೂ ತಾಲೂಕಿನ ಎಲ್ಲ ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಯಲ್ಲಿ ಸೇರಿಸಿ ಅಭಿವೃದ್ಧಿಪಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಶಾಶ್ವತ ಕುಡಿವ ನೀರಿನ ಯೋಜನೆ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಿದೆ. ಆದ್ದರಿಂದ ಕೃಷ್ಣಾ ನದಿಯಿಂದ ಗ್ರಾಮಗಳಿಗೆ ಶಾಶ್ವತ ಕುಡಿವ ನೀರು ಯೋಜನೆಯನ್ನು ನಿರ್ಮಿಸಲು ಈಗಾಗಲೇ 75 ಕೋಟಿ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಸರ್ಕಾರ ಯೋಜನೆಗೆ ಒಪ್ಪಿಗೆ ನೀಡುವ ಹಂತದಲ್ಲಿದೆ ಎಂದರು.
ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೆ ಜನರು ಸಹಕಾರ ನೀಡಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಅಂದಾಗಲೇ ಅಭಿವೃದ್ಧಿಗೆ ಸಹಕರಿಸಿದಂತಾಗುತ್ತದೆ ಎಂದರು.
ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ: ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ನಾಗಪ್ಪ ಮೇಟಿ, ಶರಣಪ್ಪ ಕಾರಲಕುಂಟಿ ಮಾತನಾಡಿ, ಕೋಮಲಾಪೂರ ಗ್ರಾಮ ತಾಲೂಕಿನ ಕೊನೆಯ ಹಳ್ಳಿಯಾಗಿದ್ದು ಈವರೆಗೆ ಯಾವ ಜನಪ್ರತಿನಿಧಿಗಳೂ ಸುಳಿದಿರಲಿಲ್ಲ. ಶಾಸಕರು ಈಗಲಾದರೂ ರಸ್ತೆ, ಅಗಸಿ, ಕಲ್ಯಾಣಮಂಟಪ ಮುಂತಾದ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ತಾಪಂ ಸದಸ್ಯ ರುದ್ರಗೌಡ ಮಾತನಾಡಿದರು. ಅಮದಿಹಾಳ ಗ್ರಾಪಂ ಅಧ್ಯಕ್ಷೆ ಹನುಮಮ್ಮ ನಾಯಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆಡಿಎಸ್ ತಾಲೂಕಾಧ್ಯಕ್ಷ ಶಿವಾನಂದ ಐದನಾಳ, ಎಪಿಎಂಸಿ ನಿರ್ದೇಶಕ ಎಸ್.ಆರ್. ರಸೂಲ್, ಅಮಿರಬೇಗ ಉಸ್ತಾದ, ವೀರನಗೌಡ ಲೆಕ್ಕಿಹಾಳ, ಶಿವಾನಂದ, ಭರತಕುಮಾರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.