ಪ್ರಕಟವಾಯ್ತು ಎಐಬಿಪಿ ಟೆಂಡರ್
ಹುಣಸಗಿ: ಹಲವು ದಶಕಗಳ ಕಾಲುವೆ ನವೀಕರಣದ ಕನಸು ಇದೀಗ ಸಾಕಾರವಾಗಿದೆ. ಅದರಂತೆ ನಾರಾಯಣಪುರ ಎಡದಂಡೆಯ ಕಾಲುವೆಯ ಉದ್ದ ಒಟ್ಟು 78 ಕಿಮಿ ಇದ್ದು, ಅದರಲ್ಲಿ ಕಳೆದ ವರ್ಷ ರು. 200 ಕೋಟಿಯಲ್ಲಿ 25 ಕಿಮಿ ಕಾಲುವೆ ನವೀಕರಣ ಮಾಡಲಾಗಿತ್ತು.
ಕಾಲುವೆಗಳು: ಅದರಂತೆ ಈ ಬಾರಿಯು ಕೂಡಾ ಕೇಂದ್ರ ಸರಕಾರದ ಎಐಬಿಪಿ (ತ್ವರಿತ ನಿರಾವರಿ ಫಲಾನುಭವಿಗಳ ಯೋಜನೆ) ಅಡಿಯಲ್ಲಿ ನಾಲ್ಕೂವರೆ ಸಾವಿರ ಕೋಟಿ ರು.ಗಳಲ್ಲಿ ಕೃಷ್ಣಾ ಅಚ್ಚುಕಟ್ಟು ಯೋಜನೆಗೆ ಕೇಂದ್ರ ಸರ್ಕಾರ ಕೊಡ ಮಾಡಿದೆ. ಈದರಲ್ಲಿ ನಾರಾಯಣಪುರ ಎಡದಂಡೆ, ಬಲದಂಡೆ, ಶಹಾಪುರ , ಜೇವರ್ಗಿ, ಮುಡಬೋಳ, ಇಂಡಿ ಶಾಖಾ ಕಾಲುವೆಗಳು ಒಳಪಡುವವು.
ಇದಕ್ಕಾಗಿ ಶ್ರಮಿಸಿದ ಕೇಂದ್ರ ಮಂತ್ರಿಗಳಾದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ನೀರಾವರಿ ಮಂತ್ರಿ ಎಂ.ಬಿ ಪಾಟೀಲ ಅವರನ್ನು ಅಭಿನಂದಿಸುವುದಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪತ್ರಿಕೆಗೆ ತಿಳಿಸಿದ್ದಾರೆ.
ಕಚೇರಿಯ ಟೆಂಡರ್ ಪ್ರಕ್ರಿಯೆಗಳನ್ನು ಜನವರಿ ತಿಂಗಳಲ್ಲಿ ಮುಗಿಸಿ, ಗುತ್ತಿಗೆದಾರರಿಗೆ ಕಾಲುವೆ ನೀರು ನಿಲ್ಲಿಸುವ ಪೂರ್ವದಲ್ಲಿ ಸೈಟ್ ಹಸ್ತಾಂತರಿಸುವ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣ ಮಾಡಲಾಗುವುದು. ಕಾಮಗಾರಿ 90 ದಿವಸಗಳಲ್ಲಿ ಮಾಡಿ ಮುಗಿಸುವ ಕರಾರು ಹೊಂದಿದೆ. ಅಲಮಟ್ಟಿ ವಲಯ ಹೊರತು ಪಡಿಸಿ, ರಾಮಪುರ, ಭೀಗುಡಿ, ನಾರಾಯಣಪುರ ವಲಯಗಳ ಮುಖಾಂತರ ಮೊದಲ ಹಂತದಲ್ಲಿ ರು. 1400 ಕೋಟಿ ಕಾಮಗಾರಿ ಕೈಗೊಳ್ಳಲಾಗಿದೆ.
ನವೀಕರಣ: ಸುರಪುರ ತಾಲೂಕಿನ ನಾರಾಯಣಪುರ ವಲಯವೊಂದರಲ್ಲಿ ರು. 551 ಕೋಟಿಗಳ ಎರಡು ಪ್ಯಾಕೇಜ್ಗಳನ್ನು ನಾರಾಯಣಪುರ ವಲಯದ ಆಣೆಕಟ್ಟು ವಿಭಾಗದಿಂದ ಟೆಂಡರ್ ಕರೆಯಲಾಗಿದೆ. ಉಳಿದ 53 ಕಿ.ಮಿ ಗಳನ್ನು ನವೀಕರಣದಲ್ಲಿ ಹೊಸದಾಗಿ ನವೀಕರಣ ಮಾಡಲಾಗುವುದು. ಇದರಿಂದ ಹಲವು ದಶಕಗಳಿಂದ ಕಾಲುವೆ ಕುಸಿತ, ನೀರು ಪೋಲು, ರೈತರ ನಿರಂತರ ಆತಂಕ ದೂರವಾಗುವುದು. ಇನ್ನು ನಾಲ್ಕು ದಶಕಗಳ ಕಾಲ ರೈತರು ನಿಶ್ಚಿಂತೆಯಿಂದ ನೀರು ಪಡೆಯಬಹುದಾಗಿದೆ ಎನ್ನುವುದು ನೀರಾವರಿ ಅಧಿಕಾರಿಗಳ ಹೇಳಿಕೆ.
ಏನಿದು ಎಂಸಿಪಿಸಿ?: ನಾರಾಯಣಪುರ ಎಡದಂಡೆಯ ನಾಲೆಯ ಕೋಡೆಕಲ್, ಹುಣಸಗಿ ಮುದನೂರು, ಕೆಂಬಾವಿ ಸೇರಿ 53 ಕಿ.ಮೀ ಕಾಲುವೆ, 29 ಎಮ್ಸಿಪಿಸಿ(ಮಾಸ್ ಕಾಂಕ್ರೀಟ್ ಕಲ್ವರ್ಟ್ ಪೈಪ್) ಸೇತುವೆಗಳನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೊದಲು ಎಮ್ಸಿಪಿಸಿ ಸೇತುವೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇತುವೆಯ ಕೆಳಗಡೆ ಸೋರುತ್ತಿದ್ದವು. ಇವುಗಳ ಶಾಶ್ವತ ಪರಿಹಾರಕ್ಕೆ ಸಾಕಷ್ಟು ಅನುದಾನ ಬೇಕಾಗುತ್ತಿತ್ತು. ಈ ಮೊದಲೂ ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಇವುಗಳ ದುರಸ್ತಿ ಸಾಧ್ಯವಾಗಿರಲಿಲ್ಲ.
ಹುಣಸಗಿ ವಿತರಣಾ ಕಾಲುವೆ ನವೀಕರಣ: ರಾಜನಕೋಳೂರಿನಿಂದ ಮುಖ್ಯಕಾಲುವೆಯಿಂದ ಆರಂಭವಾಗುವ ಹುಣಸಗಿ ವಿತರಣಾ ಕಾಲುವೆ, 550 ಕ್ಯುಸೆಕ್ ನೀರು ಹರಿವ ಸಾಮರ್ಥ್ಯ ಹೊಂದಿದ್ದು, ಕಾಲುವೆ ಸಂಪೂರ್ಣ ಹಾಳಾಗಿತ್ತು. ಅದನ್ನು ಕೂಡಾ ನವೀಕರಣ ಸಂದರ್ಭದಲ್ಲಿ ಪುನಃ ನವೀಕರಣ ಮಾಡುತ್ತಿದೆ. ಕಾಲುವೆ ಉದ್ದ 11 ಕಿಮಿ ಇದೆ. ಇದರೊಂದಿಗೆ ಕಕ್ಕೆರಿ, ಕಾಮನಟಗಿ, ದೇವತ್ಕಲ್, ತಿಂಥಣಿಗೆ ಹರಿಯುವ ಸಿದ್ದಾಪುರ ವಿತರಣಾ ಕಾಲುವೆಯ ನವೀಕರಣ ಕೈ ಬಿಟ್ಟಿದ್ದು ರೈತರಿಗೆ ಬೇಸರ ತಂದಿದೆ.
ಒಟ್ಟು ಮೂರು ವರ್ಷಗಳ ಹಂತ ಹಂತದ ಕಾರ್ಯಕ್ರಮ ಇದಾಗಿದ್ದು, ಪ್ರತಿ ವರ್ಷ ಇಡಿ ಕಾಲುವೆ ಜಾಲವನ್ನು ನವೀಕರಣ ಮಾಡಲಾಗುವುದು. ಒಂದು ಬಾರಿ ಮುಖ್ಯ ಕಾಲುವೆ, ಶಾಖಾ ಕಾಲುವೆ ನವೀಕರಣ ಮಾಡಿದ ನಂತರ ಮುಂದಿನ ಹಂತ ವಿತರಣಾ ಕಾಲುವೆಗಳದ್ದು. ಒಟ್ಟಾರೆ ಇಡೀ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲವನ್ನು ಪೂರ್ಣ ನವೀಕರಣ ಮಾಡಲಾಗುವುದು. ಇದರಲ್ಲಿ, ಯಾವುದೇ ಆತಂಕ ಬೇಡ ಎಂದು ನೀರಾವರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

