ರಾಯಚೂರು

ಕರಾಟೆಯಲ್ಲಿ ಕಲ್ಪನಾ ಪ್ರಥಮ

Published On :

ಸಿಂಧನೂರು: ನಗರದ ಕನಕದಾಸ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕಲ್ಪನಾ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಡಿ.21, 22ರಂದು ಶಾದಿಮಹಲ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಾಂಪಿಯನಶಿಪ್‌ನಲ್ಲಿ ಭಾಗವಹಿಸಿದ್ದ ಕಲ್ಪನಾ ಮೂಕಣ್ಣ ಪ್ರಥಮ ಬಹುಮಾನ ಪಡೆಯುವ ಮೂಲಕ ಶಾಲೆಗೆ ಗೌರವ ತಂದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ, ವ್ಯವಸ್ಥಾಪಕ ಭೀಮಾಜಿ ಕುಲಕರ್ಣಿ, ಮುಖ್ಯಗುರು ನಾಗಲಿಂಗನಗೌಡ ಶುಭ ಹಾರೈಸಿದ್ದಾರೆ.
ಇಂದು ಕೈಕಲ್ಲು ಎತ್ತುವ ಸ್ಪರ್ಧೆ
ರಾಯಚೂರು: ತಾಲೂಕಿನ ಸಿದ್ರಾಂಪುರ ಗ್ರಾಮದಲ್ಲಿ ಶ್ರೀಖಾದರಲಿಂಗ ಜಗದ್ಗುರುಗಳ ಉರುಸು ಅಂಗವಾಗಿ ಡಿ.27ರಂದು ಕೈಕಲ್ಲು ಎತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಗ್ರಾಮದ ಯುವ ಕಾಂಗ್ರೆಸ್ ಮುಖಂಡ ಎಸ್. ನಹೀಂ ಪಾಷಾ ನೇತೃತ್ವದಲ್ಲಿ ನಡೆಯಲಿರುವ ಸ್ಪರ್ಧೆಗಳ ವಿಜೇತರಿಗೆ ಪ್ರಥಮ ಬಹುಮಾನವಾಗಿ ಆರು ತೊಲೆ ಬೆಳ್ಳಿ ಪದಕ ಹಾಗೂ ಎರಡನೇ ಬಹುಮಾನವಾಗಿ ನಾಲ್ಕು ತೊಲೆ ಬೆಳ್ಳಿಯ ಪದಕ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಯಸುವವರು ಡಿ.27ರಂದು ಸಿದ್ರಾಂಪುರ ಗ್ರಾಮದಲ್ಲಿ ಹಾಜರಿರುವಂತೆ ಕೋರಿದ್ದಾರೆ.
29ಕ್ಕೆ ಕ್ಯಾಲೆಂಡರ್ ಬಿಡುಗಡೆ
ರಾಯಚೂರು: ನಗರದಲ್ಲಿ ಡಿ.29ರಂದು ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ 2014ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸೇವಾ ಶ್ರೇಷ್ಠರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಇಲ್ಲಿನ ಬೋಳಮಾನದ್‌ಡಿ ರಸ್ತೆಯಲ್ಲಿರುವ ಶ್ರೀಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಡಿ.29ರಂದು ಸಂಜೆ 5ಕ್ಕೆ ಕಾರ್ಯಕ್ರಮ ವನ್ನು ನಿವೃತ್ತ ನ್ಯಾಯಾಧೀಶರಾದ ವಸಂತರಾವ್ ಬಾಗಲವಾಡ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ, ನಿವೃತ್ತ ಡಿಡಿಪಿಐ ಶೇಷಗಿರಿರಾವ್ ಕುಲಕರ್ಣಿ ವಹಿಸುವರು. ವಿದ್ವಾಂಸ ಮುರಳೀಧರಾಚಾರ್ಯ ಗಲಗಲಿ ಕ್ಯಾಲೆಂಡರ್ ಬಿಡುಗಡೆಗೊಳಿಸುವರು.
ಪರಶುರಾಮಗೆ ಪ್ರಥಮ ಸ್ಥಾನ
ಸಿಂಧನೂರು: ನಗರದ ಕನಕದಾಸ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಪರಶುರಾಮ ತಂ. ದುರುಗಪ್ಪ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ರಾಯಚೂರು ಇವರ ಜಂಟಿ ಆಶ್ರಯದಲ್ಲಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ  ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರು. 4 ಸಾವಿರ ಬಹುಮಾನ ಗಳಿಸಿದ್ದಾನೆ.  ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಆಡಳಿತಾಧಿಕಾರಿ ಎಂ. ದೊಡ್ಡ ಬಸವರಾಜ, ವ್ಯವಸ್ಥಾಪಕ ಭೀಮಾಜಿ ಕುಲಕರ್ಣಿ, ಮುಖ್ಯಗುರು ನಾಗಲಿಂಗನಗೌಡ, ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ ಪೂಜಾರ್ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓಂಕಾರ್ ಫಿಲಂಸ್ ಬೆಳ್ಳಿ ಹಬ್ಬ; ಹಲವರಿಗೆ ಸನ್ಮಾನ
ರಾಯಚೂರು: ನಗರದಲ್ಲಿ ಇತ್ತೀಚೆಗೆ ಓಂಕಾರ್ ಫಿಲಂಸ್ ಸಂಸ್ಥೆಯಿಂದ ಬೆಳ್ಳಿ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಜಿ ಶಾಸಕ ಪಾಪಾರೆಡ್ಡಿ ಉದ್ಘಾಟಿಸಿದರು.
ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾರಾಯಣಪ್ಪ, ಆರ್ಯವೈಶ್ಯ ಸಮಾಜದ ಮುಖಂಡ ಲಕ್ಷ್ಮೀಪತಿ ಗಾಣದಾಳ, ಹಿರಿಯ ವಕೀಲ ಬಸವರಾಜಪ್ಪ, ಚನ್ನಮಲ್ಲಿಕಾರ್ಜುನ ಗೌಡ ಮತ್ತಿತರರು ಪಾಲ್ಗೊಂಡಿದ್ದರು. ಈ ವೇಳೆ ಪಿಲಂಸ್ ನ ನಿರ್ಮಾಣಪಕ ಸಿದ್ದೇಶ ವಿರಕ್ತಮಠ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ರಾಯಚೂರು: ನಗರದಲ್ಲಿ ಇತ್ತೀಚೆಗೆ ಓಂಕಾರ್ ಫಿಲಂಸ್ ಸಂಸ್ಥೆಯಿಂದ ಬೆಳ್ಳಿ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಜಿ ಶಾಸಕ ಪಾಪಾರೆಡ್ಡಿ ಉದ್ಘಾಟಿಸಿದರು.
ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾರಾಯಣಪ್ಪ, ಆರ್ಯವೈಶ್ಯ ಸಮಾಜದ ಮುಖಂಡ ಲಕ್ಷ್ಮೀಪತಿ ಗಾಣದಾಳ, ಹಿರಿಯ ವಕೀಲ ಬಸವರಾಜಪ್ಪ, ಚನ್ನಮಲ್ಲಿಕಾರ್ಜುನ ಗೌಡ ಮತ್ತಿತರರು ಪಾಲ್ಗೊಂಡಿದ್ದರು. ಈ ವೇಳೆ ಪಿಲಂಸ್ ನ ನಿರ್ಮಾಣಪಕ ಸಿದ್ದೇಶ ವಿರಕ್ತಮಠ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಜೈವಿಕ ಇಂಧನ ಅಭಿವೃದ್ಧಿ ಜಾಗೃತಿ
ಸಿಂಧನೂರು: ಜಿಪಂ, ತಾಪಂ, ಗ್ರಾಮ್ ಸೀಡ್ ಸಂಸ್ಥೆ ರಾಯಚೂರು ಹಾಗೂ ಸಾಧನಾ ಸಂಸ್ಥೆ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬಾದರ್ಲಿ, ಅಲಬನೂರು, ಗಿಣಿವಾರ, ಬೆಳಗುರ್ಕಿ, ವಿರುಪಾಪುರ, ದೇವರಗುಡಿ ಹಾಗೂ ಗುಂಜಳ್ಳಿ ಗ್ರಾಮಗಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಬರಿದಾಗುತ್ತಿರುವ ನೈಸರ್ಗಿಕ ಇಂಧನದ ಬದಲಿಗೆ ಪರ್ಯಾಯ ರೂಪದಲ್ಲಿ ಬೇವು, ಹೊಂಗೆ, ಜತ್ರೋಪ, ಸಿಮರೂಬ ಮರಗಳ ಬೀಜಗಳಿಂದ ಜೈವಿಕ ಇಂಧನ ಉತ್ಪಾದಿಸುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು.
ಗುಂಜಳ್ಳಿ ಗ್ರಾಪಂ ವ್ಯಾಪ್ತಿಯ ಬೊಮ್ಮನಾಳ ಗ್ರಾಮದ ಮುಖಂಡರಾದ ಹನುಮರಡ್ಡಿ, ದೇವರಗುಡಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ ಮಾತನಾಡಿದರು. ಕುರಿತು ಹಮ್ಮಿಕೊಂಡ ಅರಿವು ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ಜಿ.ಎಸ್. ಶಿವರುದ್ರಪ್ಪಗೆ ಶ್ರದ್ಧಾಂಜಲಿ
ಸಿಂಧನೂರು: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಮೇರು ಪರ್ವತವಾಗಿದ್ದ ಜಿ.ಎಸ್. ಶಿವರುದ್ರಪ್ಪನವರ ನಿಧನದಿಂದ ಕನ್ನಡ ನಾಡಿಗೆ ಅಪಾರ ಹಾನಿಯಾಗಿದೆ ಎಂದು ಬಸವ ಯೋಗ ಸಮಿತಿ ಅಧ್ಯಕ್ಷ ಶಿವಣ್ಣ.ಹ.ಸಣ್ಣಪ್ಪನವರ ಅಭಿಪ್ರಾಯಪಟ್ಟಿದ್ದಾರೆ. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎದೆ ತುಂಬಿ ಹಾಡುವೆ ಮತ್ತಿತರ ಹಾಡುಗಳು ಜನಮಾನಸವಾಗಿತ್ತು ಎಂದು ಭಾವುಕರಾಗಿ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಮಧುಸೂಧನ ಗುಪ್ತಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಚ್. ಮಲ್ಲಿಕಾರ್ಜುನ ಹೂನೂರು, ಸತ್ಯನಾರಾಯಣ ಶ್ರೇಷ್ಟಿ, ಭಾಸ್ಕರ, ವೆಂಕಟೇಶ, ಶಾಂತಪ್ಪ ಚಿಂಚರಕಿ, ಕರೇಗೌಡ ಕುರಕುಂದಿ, ಶಾಮಣ್ಣ ವೀರೇಶಪ್ಪ ಶಿರಗುಂಪಿ, ಶಿರೋಳ, ಬಸಪ್ಪ ಮುರಾಳ, ಅಯ್ಯಪ್ಪ ಬೂದಿವಾಳ, ವರಾಜ ವಕೀಲರು, ಪಂಪಾಪತಿ ಸಿದ್ರಾಂಪೂರ, ಪ್ರಕಾಶ ಶಿರಗುಂಪಿ, ಲಿಂಗರಾಜ, ಗುಂಡಪ್ಪ ಬಳಿಗಾರ ಇದ್ದರು.
ನಾಳೆ ಲೋಕಾ ಭೇಟಿ
ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಡಿ.28ರಂದು ಜಿಲ್ಲಾ ಲೋಕಾಯುಕ್ತರು ಪ್ರವಾಸ ಕೈಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ. ಅಂದು ದೇವದುರ್ಗದ ಪ್ರವಾಸಿ ಮಂದಿರದಲ್ಲಿ ಬೆ.10ರಿಂದ ಮ.2ರ ವರೆಗೆ ಅವರು ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ತಮ್ಮ ದೂರುಗಳನ್ನು ಸ್ಥಳದಲ್ಲಿಯೇ ಲಭ್ಯವಿರುವ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಲು ಸೂಚಿಸಲು ಲೋಕಾಯುಕ್ತ ಜಿಲ್ಲಾ ಎಸ್ಪಿ ಅಂಬಣ್ಣ ಚಿಪ್ಪಾರ ತಿಳಿಸಿದ್ದಾರೆ.
ನೀರು, ತೆರಿಗೆ, ಪಡಿತರ, 'ಖಾತ್ರಿ' ಚರ್ಚೆ
ಮುದಗಲ್: ಪಟ್ಟಣ ಸಮೀಪದ ನಾಗಲಾಪುರ ಗ್ರಾಪಂ ಕಾರ್ಯಾಲಯದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಅನುಸೂಯ ಗ್ಯಾನನಗೌಡ ವಹಿಸಿದ್ದರು. ಸಭೆ ಆರಂಭದಲ್ಲಿ ಸದಸ್ಯರನ್ನು ಸ್ವಾಗತಿಸಿದ ಪಿಡಿಒ ಚನ್ನಮಲ್ಲಯ್ಯ ಸ್ವಾಮಿ ಕನ್ನಾಳ, ಹಿಂದಿನ ಸಭೆಯ ನಡುವಳಿಗಳನ್ನು ಓದಿ ದೃಢೀಕರಿಸಿದರು. 2012- 13ನೇ ಸಾಲಿನ 13ನೇ ಹಣಕಾಸು ಯೋಜನೆಯ ವಿಷಯ ಪ್ರಸ್ತಾಪಿಸಿದಾಗ ಸದಸ್ಯರು ಕ್ರಿಯಾಯೋಜನೆ ತಯಾರಿಸಿದ ವಿಷಯ ಸದಸ್ಯರಿಗೆ ತಿಳಿದಿಲ್ಲ, ಸಭೆಯಲ್ಲಿ ಕ್ರಿಯಾಯೋಜನೆ ಹಾಜರುಪಡಿಸಿ ಜಮಾ- ಖರ್ಚು ನೀಡುವಂತೆ ಸೂಚಿಸಿದರು. ನಂತರ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದ ಅಂಗಡಿಗಳ ತೆರವು, ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ ಸೇರಿದಂತೆ ಗ್ರಾಪಂನ ಕುಡಿಯುವ ನೀರು, ತೆರಿಗೆ, ಖಾತ್ರಿ ಯೋಜನೆ ಹಾಗೂ ಪಡಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಆದೇಶ ನಾಯಕ, ಲಾಲಪ್ಪ ರಾಠೋಡ, ಸೋಮಶೇಖರ ಪೂಜಾರಿ, ವಿಜಯ ಇಲಕಲ್ಲ, ಲಕ್ಷ್ಮವ್ವ ಸೇರಿದಂತೆ ಪಂಚಾಯಿತಿ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ, ನೀರುಪಾದಿ, ಹನುಮಂತಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.