ರಾಯಚೂರು

ನುಡಿದಂತೆ ನಡೆಯದ ಅಧಿಕಾರಿಗಳು

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಡಿ.29
ತುಂಗಭದ್ರಾ ಎಡದಂಡೆ ಕಾಲುವೆಯ ಕಡೆಯ ಭಾಗದ ವಿವಿಧ ಉಪಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಮಾನವಿಯಲ್ಲಿ ಭಾನುವಾರ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾನವಿ ಪಟ್ಟಣದ ಬಸವ ವೃತ್ತದ ಬಳಿ ಜಮಾಯಿಸಿದ ರೈತರು ರಸ್ತೆ ಮಧ್ಯೆ ಕುಳಿತು ವಾಹನ ಸಂಚಾರ ತಡೆದು ಜಲ ಸಂಪನ್ಮೂಲ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ನೀರಿನ ಸಮರ್ಪಕ ನಿರ್ವಹಣೆಯಲ್ಲಿ ಇಲಾಖೆ ಎಡವಿದೆ. ರೈತರು ಅದರಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸರ್ಕಾರ ಮತ್ತು ಜಲಸಂಪನ್ಮೂಲ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೀರು ತುರ್ತು ಅಗತ್ಯ- ಅಧಿಕಾರಿ ಅಸಡ್ಡೆ: ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ತಾಲೂಕಿನ ರೈತರಿಗೆ ನೀರು ಹರಿಸುವ ಉಪ ಕಾಲುವೆಗಳಾದ 76, 82, 85 ಮತ್ತು 86ನೇ ಉಪಕಾಲುವೆಗಳ ವ್ಯಾಪ್ತಿಯಲ್ಲಿ ರೈತರು ಸದ್ಯ ಮಿತ ಬೆಳೆಗಳಾದ ಹತ್ತಿ, ಜೋಳ, ಮೆಣಸಿನಕಾಯಿ ಬೆಳೆದಿದ್ದಾರೆ. ರೈತರು ಬೆಳೆದ ಮಿತ ಬೆಳೆಗಳಿಗೆ ತುರ್ತುಗಿ ನೀರಿನ ಅವಶ್ಯಕತೆಯಿದೆ.
ಆದರೆ ಉಪಕಾಲುವೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡುವಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿ ವೀರಸಿಂಗ್ ನಾಯ್ಕ ನಿರ್ಲಕ್ಷ್ಯ ತೋರಿದ್ದಾರೆ. ಈ ಕುರಿತು ಅವರಿಗೆ ಅನೇಕ ಬಾರಿ ದೂರಿದರೂ ನೀರು ಹರಿಸುವಲ್ಲಿ ಅಸಡ್ಡೆ ಪ್ರದರ್ಶಿಸಿದ್ದಾರೆಂದು ಆರೋಪಿಸಿದರು.
ನುಡಿದಂಡೆ ನಡೆಯದ ಅಧಿಕಾರಿಗಳು: ಕಳೆದ ಅನೇಕ ದಿನಗಳಿಂದ ಉಪಕಾಲುವೆಗಳಿಗೆ ನೀರು ಹರಿಸಿಲ್ಲ. ಅದರಿಂದಾಗಿ ರೈತರು ಬೆಳೆದ ವಿವಿಧ ಬೆಳೆಗಳು ಸಂಪೂರ್ಣ ಒಣಗುತ್ತಿದ್ದು, ರೈತರು ಆತಂಕದಲ್ಲಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ.31ರ ವರೆಗೆ ಸಮರ್ಪಕ ನೀರು ಹರಿಸುವ ಭರವಸೆ ನೀಡಲಾಗಿದೆ. ಆದರೆ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ ಎಂದು ದೂರಿದರು.
ರಾಜ್ಯ ರೈತ ಸಂಘವು ಇತ್ತೀಚೆಗೆ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದ ನಂತರದಲ್ಲಿ ಇಲಾಖೆ ಅಧಿಕಾರಿಗಳು ರೈತರ ರಸ್ತೆ ತಡೆಗೆ ಬೆದರಿ ಕಾಟಾಚಾರಕ್ಕೆ ಕೆಲವೇ ಕೆಲ ಉಪಕಾಲುವೆಗಳಿಗೆ ಅಸಮರ್ಪಕ ನೀರು ಹರಿಸಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೀಕಿಸಿದರು.
ಲಿಖಿತ ಮಾಹಿತಿ ನೀಡಿದರೆ ಚಳವಳಿ ಹಿಂದಕ್ಕೆ: ಅಧಿಕಾರಿಗಳು ಜ.1ರಿಂದ ಮಾ.31ರ ವರೆಗೆ ಯಾವ ಉಪ ಕಾಲುವೆಗಳಿಗೆ ಎಷ್ಟು ಪ್ರಮಾಣದಲ್ಲಿ ಮತ್ತು ವಾರಾಬಂದಿ ಪ್ರಕಾರ ಎಷ್ಟು ದಿನ ನೀರು ಹರಿಸುತ್ತೇವೆ ಎಂಬುದನ್ನು ಲಿಖಿತ ಮಾಹಿತಿ ಮತ್ತು ಭರವಸೆ ನೀಡಿದಲ್ಲಿ ರೈತರು ನಡೆಸುತ್ತಿರುವ ರಸ್ತೆ ತಡೆ ಚಳವಳಿ ಹಿಂಪಡೆಯುವುದಾಗಿ ಪಟ್ಟುಹಿಡಿದರು.
ಈ ವೇಳೆ ಸ್ಥಳಕ್ಕೆ ಧಾವಿಸಿದ ಜಲಸಂಪನ್ಮೂಲ ಇಲಾಖೆಯ ಇಇ ವೀರಸಿಂಗ್ ನಾಯ್ಕ ಮಾತನಾಡಿ, 76ನೇ ಉಪ ಕಾಲುವೆಗೆ ಜ.1ರಿಂದ 10ರವರೆಗೆ, 82ನೇ ಉಪಕಾಲುವೆಗೆ ಡಿ.28ರಿಂದ ಜ.1ರವರೆಗೆ, 85ನೇ ಉಪಕಾಲುವೆಗೆ ಈಗಾಗಲೇ ನೀರು ಹರಿಸಲಾಗುತ್ತಿದ್ದು, ನೀರಿನ ಮಟ್ಟ ಕಾಯ್ದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಹೋರಾಟ ಹಿಂದಕ್ಕೆ: ಅದೇ ರೀತಿ 89ನೇ ಉಪಕಾಲುವೆಗೆ ಜ.1ರಿಂದ ವಾರಾಬಂದಿಯಂತೆ ಸಮರ್ಪಕ ನೀರು ಹರಿಸಲಾಗುತ್ತದೆ ಎಂದು ಭರವಸೆ ನೀಡಿದ ನಂತರ ಹೋರಾಟಗಾರರು ರಸ್ತೆ ತಡೆ ಹಿಂಪಡೆದರು.
  ಈ ವೇಳೆ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ, ವಿಶ್ವನಾಥರೆಡ್ಡಿ ಜೀನೂರು, ದೊಡ್ಡ ಬಸನಗೌಡ, ನರಸಪ್ಪ ಯಾದವ, ವೆಂಕಟರಾವ್ ಜೀನೂರು ಕ್ಯಾಂಪ್, ಬಸಪ್ಪ ಪೂಜಾರಿ ನೀರಮಾನವಿ, ಭೀಮೇಶ್ವರರಾವ್, ತಾಲೂಕು ಅಧ್ಯಕ್ಷ ಬಾಲಾಜಿಸಿಂಗ್, ಯಂಕಪ್ಪ ಕಾರಬಾರಿ, ಬಸನಗೌಡ ಮಾಲಿಪಾಟೀಲ್, ಬಾಬುರಾವ್ ತಡಕಲ್, ನರಸಿಂಗ್ ರಾವ್, ಮುದ್ದಣ್ಣ ಗವಿಗಟ್ಟು, ರಮೇಶ ಗೋರ್ಕಲ್ ಸೇರಿದಂತೆ ಅನೇಕರಿದ್ದರು. ತಹಸೀಲ್ದಾರ್ ಎಂ.ಐ. ಶಹನೂರು, ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.
ರೈತರು ಬೆಳೆದ ಮಿತ ಬೆಳೆಗಳಿಗೆ ಹರಿಸಲು ಉಪಕಾಲುವೆಗಳಿಗೆ ನೀರು ಬಿಡುವ ವ್ಯವಸ್ಥೆ ಮಾಡುವಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿ ವೀರಸಿಂಗ್ ನಾಯ್ಕ ನಿರ್ಲಕ್ಷ್ಯ ತೋರಿದ್ದಾರೆ. ಈ ಕುರಿತು ಅವರಿಗೆ ಅನೇಕ ಬಾರಿ ದೂರಿದರೂ ನೀರು  ಹರಿಸುವಲ್ಲಿ ಅಸಡ್ಡೆತನವನ್ನು ಪ್ರದರ್ಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.