ರಾಯಚೂರು

ವೇತನ ತಾರತಮ್ಯ: ಜ.3ಕ್ಕೆ ಸಮಾವೇಶ

Published On :

ಕ.ಪ್ರ. ವಾರ್ತೆ  ರಾಯಚೂರು  ಡಿ.29
ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಸಂಖ್ಯೆಯ ಉಪನ್ಯಾಸಕರ ವೇತನ ನಿಗದಿಯಲ್ಲಿ ಸರ್ಕಾರ ತಾರತಮ್ಯ ಮಾಡಿದೆ. ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಕಳೆದ ಬಿಜೆಪಿ ಸರ್ಕಾರಕ್ಕೆ ಹಿರಿಯ ಅಧಿಕಾರಿ ಕುಮಾರ ನಾಯಕ ಸಲ್ಲಿಸಿರುವ ವರದಿಯ ಯಥಾವತ್ತು ಜಾರಿಗೆ ಆಗ್ರಹಿಸಿ ಜ.3ರಂದು ಮೈಸೂರಿನಲ್ಲಿ ಶೈಕ್ಷಣಿಕ ಸಮಾವೇಶ ಆಯೋಜಿಸಲಾಗಿದೆ.
ವೇತನ ತಾರತಮ್ಯ: ನಗರದಲ್ಲಿ ಭಾನುವಾರ ರಾಜ್ಯದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಪ್ಪ ಭಂಡಾರಿ ಈ ವಿಷಯ ತಿಳಿಸಿ, ರಾಜ್ಯದಲ್ಲಿ 3 ಮತ್ತು 4ನೇ ವೇತನ ಆಯೋಗಗಳ ಶಿಫಾರಸು ಜಾರಿವರೆಗೆ ರಾಜ್ಯದಲ್ಲಿನ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೇತನವು ತಹಸೀಲ್ದಾರರು, ಬಿಇಒಗಳು ವೈದ್ಯಾಧಿಕಾರಿಗಳ ಸಂಬಳಕ್ಕೆ ಸಮಾನವಾಗಿತ್ತು. ಆದರೆ ಮೂರು ಮತ್ತು ನಾಲ್ಕನೇ ವೇತನ ಆಯೋಗದ ವರದಿ ಜಾರಿ ವೇಳೆ ಉಪನ್ಯಾಸಕರಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು. ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ರು. 30 ಸಾವಿರ ಮೂಲವೇತನವಿದೆ. ಅದೇ ರೀತಿ ಕೇರಳದಲ್ಲಿ ರು. 25 ಸಾವಿರ ಮೂಲವೇತನವಿದ್ದು, ಕರ್ನಾಟಕದಲ್ಲಿ ಮಾತ್ರ ಮೂಲ ವೇತನವನ್ನು ರು. 22,800ಗೆ ನಿಗದಿ ಮಾಡಲಾಗಿದೆ ಎಂದು ದೂರಿದರು.
ವರದಿ: ಕಳೆದ 15 ವರ್ಷಗಳಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ವೇತನದಲ್ಲಿ ಆಗಿರುವ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಅನೇಕ ಬಾರಿ ಹೋರಾಟ ನಡೆಸಲಾಗಿದೆ. ಅದರಲ್ಲೂ ಕಳೆದ ವರ್ಷ ದ್ವಿತೀಯ ಪಿಯುಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಿದ ನಂತರ ಆಗಿನ ಸಿಎಂ ಯಡಿಯೂರಪ್ಪ ಅವರು ಆಗಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಕುಮಾರ ನಾಯಕ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವೇತನ ತಾರತಮ್ಯ ನಿವಾರಣೆಗೆ ಸಂಬಂಧಿಸಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಿತ್ತು.
ಸರ್ಕಾರಕ್ಕೆ ಈ ಕುರಿತ ವರದಿ ಸಲ್ಲಿಸಿ ಎರಡು ವರ್ಷಗಳೇ ಕಳೆದರೂ ವರದಿಯಲ್ಲಿನ ಅಂಶಗಳ ಜಾರಿಗೆ ಸರ್ಕಾರಗಳು ಹಿಂದೇಟು ಹಾಕಿವೆ. ಸದ್ಯದ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಮೈಸೂರಿನಲ್ಲಿ ಜ. 3ರಂದು ಶೈಕ್ಷಣಿಕ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಸಂಸದ ಎಚ್. ವಿಶ್ವನಾಥ್, ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ, ಹಿರಿಯ ಸ್ವಾತಂತ್ರ್ಯ ಹೋರಾಟಗಾ ದೊರೆಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಚರ್ಚೆ: ಸಮಾವೇಶದಲ್ಲಿ ಪಿಯುಸಿ ಫಲಿತಾಂಶ ಸುಧಾರಣೆ, ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ಪಾಲಕರು, ಮಕ್ಕಳ ಹೊಣೆಗಾರಿಕೆ, ಆಧುನಿಕ ಬೋಧನಾ ಪದ್ಧತಿ ಮತ್ತು ಪಠ್ಯಕ್ಕೆ ಉಪನ್ಯಾಸಕರ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ನೀತಿ ಬಗ್ಗೆ ಚರ್ಚಿಸಲಾಗುತ್ತದೆ ಎಂದು ವಿವರಿಸಿದರು.
  ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜಾಸಾಬ್ ಅಂಗಡಿ, ರಾಜ್ಯ ಕಾರ್ಯದರ್ಶಿ ಡಾ.ಕುಂಟೆಪ್ಪ ಗೌರೀಪುರ, ಜಿಲ್ಲಾ ಖಜಾಂಚಿ ಗೋವರ್ಧನ್ ರೆಡ್ಡಿ, ಪ್ರಾಚಾರ್ಯರ ಸಂಘದ ವಿಭಾಗೀಯ ಉಪಾಧ್ಯಕ್ಷ ಅಮರೇಶ್ ಸೇರಿ ಅನೇಕರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.