ರಾಯಚೂರು

ಶಿಕ್ಷಕ, ಉಪನ್ಯಾಸಕರ ಧರಣಿ

Published On :

ರಾಯಚೂರು: ಶಿಕ್ಷಕರು, ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿಯಿಂದ ಸಾಂಕೇತಿಕ ಧರಣಿ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಕೇಂದ್ರ ಮತ್ತು ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಅತ್ಯಂತ ಕಡಿಮೆ ಮೂಲ ವೇತನ ಪಡೆಯುತ್ತಿದ್ದಾರೆಂದು ಆರೋಪಿಸಿದರು.
ಮನವಿಗೆ ಸ್ಪಂದಿಸಲಿಲ್ಲ: ಕೇಂದ್ರ ಸರ್ಕಾರದ ರೀತಿಯಲ್ಲಿಯೇ ಮನೆ ಬಾಡಿಗೆ ಭತ್ಯೆ, ನಗರ ಭತ್ಯೆ ಹೆಚ್ಚಿಸುವಂತೆ ಸರ್ಕಾರಕ್ಕೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. 6ನೇ ವೇತನ ಆಯೋಗದ ಶಿಫಾರಸು ಅನುಷ್ಠಾನ ವೇಳೆ ಮನೆ ಬಾಡಿಗೆ ಭತ್ಯೆ ಮತ್ತು ನಗರ ಭತ್ಯೆಯನ್ನು 2001ರ ಗಣತಿಯಂತೆ ಪುನಾ ವರ್ಗೀಕರಿಸಿ ಪರಿಷ್ಕರಿಸಲಾಗಿತ್ತು. ಆದರೆ, ರಾಜ್ಯದ ಬಜೆಟ್ ನಲ್ಲಿ ಈ ಬಾರಿ ಕೇವಲ ಬೆಂಗಳೂರು ನಗರದವರಿಗೆ ಮಾತ್ರ ಮನೆ ಬಾಡಿಗೆ ಭತ್ಯೆಯನ್ನು ಶೇ. 25ರಿಂದ 30ಕ್ಕೇರಿಸಲಾಗಿದೆ ಎಂದು ದೂರಿದರು.
ಬೋಧಕ ವರ್ಗದವರಿಗೆ ಅನ್ಯಾಯ: ಬೆಂಗಳೂರು ನಗರದವರಿಗೆ ಮಾತ್ರ ಸರ್ಕಾರದ ನಿರ್ಧಾರದಿಂದ ಅನುಕೂಲವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಬೋಧಕ ವರ್ಗದವರಿಗೆ ಅನ್ಯಾಯವಾಗಿದೆ. ಗ್ರಾಮೀಣ ಭಾಗದಲ್ಲಿ ಐದು ಲಕ್ಷ ನೌಕರರಿದ್ದು ಅವರಿಗೆ ಸರ್ಕಾರ ಮನೆ ಬಾಡಿಗೆ ಭತ್ಯೆ ಹೆಚ್ಚಿಸದೇ ವಂಚಿಸಿದೆ ಎಂದು ಆರೋಪಿಸಿದರು.
ಮನೆ ಬಾಡಿಗೆ ಭತ್ಯೆ ನೀಡುವ ವೇಳೆ ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಸಂಖ್ಯೆಯ ಶಿಕ್ಷಕರನ್ನು ಸರ್ಕಾರ ಕಡೆಗಣಿಸಿರುವುದು ವಿಷಾದನೀಯ ಎಂದು ದೂರಿದ ಹೋರಾಟಗಾರರು, ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿನ ನೌಕರರಿಗೆ ಶೇ.30, ಶೇ.20 ಮತ್ತು ಶೇ.10ರಷ್ಟು ಮನೆ ಬಾಡಿಗೆ ಭತ್ಯೆ ನೀಡುವ ಮೂಲಕ ಸಮಾನತೆ ಕಾಪಾಡಿದಂತೆ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಬೇಡಿಕೆಗಳು: ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ನೀಡಲಾಗುವ ವಿಶೇಷ ವೇತನವನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು. ಸದ್ಯದ ವೇತನ ತಾರತಮ್ಯ ಹೋಗಲಾಡಿಸಬೇಕು. ಬೆಂಗಳೂರು ನಗರಕ್ಕೆ ಸೀಮಿತಗೊಳಿಸಿರುವ ಬಾಡಿಗೆ ಭತ್ಯೆಯನ್ನು ರಾಜ್ಯದ ಎಲ್ಲ ನೌಕರರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕ್ರಿಯಾ ಸಮಿತಿಯ ಪ್ರಮುಖರಾದ ಬಾಬು ಭಂಡಾರಿಗಲ್, ರಾಜಾಸಾಬ್ ಅಂಗಡಿ, ನರಸಪ್ಪ ಭಂಡಾರಿ, ರಾಜಶೇಖರ್ ದಿನ್ನಿ, ಅಬ್ದುಲ್ ಅಜೀಜ್, ಜಿ.ತಿಮ್ಮಣ್ಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.