ರಾಯಚೂರು

ನೈಜೀರಿಯಾ ಪ್ರಜೆಗಳ ವಿಚಾರಣೆ

Published On :

ರಾಯಚೂರು: ಮೊಬೈಲ್‌ಗೆ ಸಂದೇಶ ಕಳಿಸಿ ವಂಚಿಸುತ್ತಿದ್ದ ನೈಜೀರಿಯಾ ಮೂಲದ ನಾಲ್ವರು  ಬೆಂಗಳೂರಿನಲ್ಲಿ ಬಂಧಿಸಿದ ಇಲ್ಲಿನ ಪೊಲೀಸರು ಅವರನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದ್ದಾರೆ.
ಬಂಧಿತರನ್ನು ನೈಜೀರಿಯಾದ ಲಾಗಸ್ ಪಟ್ಟಣದ ಇಲೋಜೋಬಿ ಏನಿಮನ್ ಕ್ಲಿನಿಮಿನಿಕ್, ಸಿವಿಲ್ ಎಂಜಿನಿಯರ್ ರೋನಾಲ್ಡ್ ಎನೇಜಿಬಿ, ಕೂದಲು ವ್ಯಾಪಾರಿ ಗಾಡವಿನ್, ಇಲೋಜೋಬೀ ಜೋಯಿಲ್ ಮ್ಯಾಕಲೋಸ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 3 ಲ್ಯಾಪ್‌ಟಾಪ್, 10 ಮೊಬೈಲ್ ವಶಪಡಿಸಿಕೊಂಡಿದ್ದು, ಆರೋಪಿಗಳು ಇದುವರೆಗೆ ವಂಚಿಸಿ ಪಡೆದ ಹಣವನ್ನು ಮುಂಬಯಿಯ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿರುವ ಬಗ್ಗೆ ಪೊಲೀಸರಿಗೆ ಸುಳಿವು ದೊರೆತಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಈ ನಾಲ್ವರು ಆರೋಪಿಗಳು ಜನರ ಮೊಬೈಲ್‌ಗೆ ಕಡಿಮೆ ಬೆಲೆಯಲ್ಲಿ ಐಫೋನ್ ಮೊಬೈಲ್ ನೀಡುವುದಾಗಿ ಸಂದೇಶ ಕಳಿಸುವ ಮೂಲಕ ವಂಚಿಸುತ್ತಿರುವುದು ಪತ್ತೆಯಾಗಿದೆ. ಕಡಿಮೆ ಬೆಲೆಗೆ ಐಫೋನ್ ನೀಡುವುದಾಗಿ ನಗರದ ಶಿವರಾಜ್ ಎಂಬುವವರಿಗೆ ವಂಚಿಸಿದ್ದರ ಬಗ್ಗೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳು ಕಡಿಮೆ ಬೆಲೆಗೆ ಐಪೋನ್ ನೀಡುವುದಾಗಿ ನಗರದ ಶಿವರಾಜ್ ಅವರಿಗೆ ನಂಬಿಸಿ 74065 09047 ಸಂಖ್ಯೆ ಬಳಸಿ ಇ-ಮೇಲ್ ಮಾಡಿದ್ದಾರೆ. ಮೂರು ಮೊಬೈಲ್‌ಗಳಿಗೆ 1.40 ಲಕ್ಷ ಬೆಲೆ ಕೇಳಿದ್ದಾರೆ. ಹಣವನ್ನು ಎಸ್‌ಬಿಐ ಖಾತೆ 20019476355ಗೆ ಜಮಾ ಮಾಡಲು ತಿಳಿಸಿದ್ದಾರೆ.
ಶಿವರಾಜ್ ಅವರು 2012ರ ಅ.10ರಂದು 15 ಸಾವಿರ, ಅ.11ರಂದು ಆಕ್ಸಿಸ್ ಬ್ಯಾಂಕ್ ಖಾತೆ ಸಂಖ್ಯೆ 91202002589827ಗೆ 88,500 ಜಮಾ ಮಾಡಿದ್ದಾರೆ. ಕಸ್ಟಮ್ಸ್ ಟ್ಯಾಕ್ಸ್ ಹಣ ನೀಡುವಂತೆ ಅ.12ರಂದು ದೂರವಾಣಿ ಕರೆ ಬಂದಿದ್ದರಿಂದ ಅ.13ರಂದು 20 ಸಾವಿರ ಆಕ್ಸಿಸ್ ಬ್ಯಾಂಕಿನ ಖಾತೆಗೆ ಜಮಾ ಮಾಡಿದ್ದರು. ಮೂರು ಐಫೋನ್‌ಗಳ ದರ ಹಾಗೂ ಕಸ್ಟಮ್ಸ್ ವೆಚ್ಚ ಸೇರಿ 1.23 ಲಕ್ಷ ಪಾವತಿಸಿದರೂ ಮತ್ತೆ ನೋಂದಣಿ ಟ್ಯಾಕ್ಸ್ ಭರಿಸಲು 35 ಸಾವಿರಕ್ಕೆ ಬೇಡಿಕೆಯಿಟ್ಟಾಗ ಸಂಶಯ ವ್ಯಕ್ತಪಡಿಸಿ ನಗರದ ಪಶ್ಚಿಮ ಪೊಲೀಸ್ ಠಾಣೆಗೆ ಶಿವರಾಜ್ ದೂರು ಸಲ್ಲಿಸಿದ್ದರು.
ಪಶ್ಚಿಮ ಠಾಣೆ ಅಪರಾಧ ವಿಭಾಗದ ಅಧಿಕಾರಿಗಳು, ಆರೋಪಿಗಳು ಬಳಕೆ ಮಾಡಿದ ಮೊಬೈಲ್‌ನ ಕರೆಗಳ ಮಾಹಿತಿಯಾಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಬೆಂಗಳೂರಿನಿಂದ ನಗರಕ್ಕೆ ಫೆ.24ರಂದು(ಭಾನುವಾರ) ಕರೆತರಲಾಗಿತ್ತು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರ ಹೆಸರು ಮತ್ತು ವಂಚಿಸಿದ ರೀತಿಯನ್ನು ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.