ರಾಯಚೂರು

ಜೆಡಿಎಸ್ ರಸ್ತೆ ತಡೆ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.2
ತಾಲೂಕಿನ ಹಂಚಿನಾಳ ಕ್ಯಾಂಪ್‌ನಲ್ಲಿ ವೆಂಕಟರಾವ್ ನಾಡಗೌಡರು ಶಾಸಕರಾಗಿದ್ದಾಗ ಎಚ್‌ಕೆಡಿಡಿ ಯೋಜನೆಯಡಿ ಮುಖ್ಯ ರಸ್ತೆಗೆ ನಿರ್ಮಿಸಿದ ಕಮಾನಿಗೆ ಕಾಂಗ್ರೆಸ್ ಕಾರ್ಯಕರ್ತರು ಕುಡಿದ ಅಮಲಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ದಿಢೀರ್ ರಸ್ತೆ ತಡೆ ಚಳವಳಿ ನಡೆಸಿದರು.
ಚಳವಳಿಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ತಾಲೂಕಾಧ್ಯಕ್ಷ ಎಂ.ಲಿಂಗಪ್ಪ, ನಾಡಗೌಡರು ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಶಾಸಕ ಬಾದರ್ಲಿ ಬೆಂಬಲಿಗರು ಸಹಿಸಲಾಗದೆ ಇಂತಹ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ಸಿಗರದ್ದು ಕೀಳುಮಟ್ಟದ ರಾಜಕೀಯ: ಜವಳಗೇರಾ, ಬೂದಿವಾಳ, ಅರಗಿನಮರ ಕ್ಯಾಂಪ್ ಮತ್ತಿತರ ಕಡೆಗಳಲ್ಲಿ ನಿರ್ಮಿಸಲಾಗಿರುವ ಬಸ್ ಶೆಲ್ಟರ್‌ಗಳಲ್ಲಿನ ನಾಡಗೌಡರ ಭಾವಚಿತ್ರಗಳನ್ನು ಚುನಾವಣಾ ಆಯೋಗದವರು ಚುನಾವಣೆ ಸಂದರ್ಭದಲ್ಲಿ ತೆಗೆದ ಮೇಲೆ ಈಗ ಪುನಃ ಅವರ ಭಾವಚಿತ್ರವನ್ನು ಹಾಕಲು ತೊಂದರೆ ಕೊಡುತ್ತಿದ್ದಾರೆ. ಆಯಾ ಗ್ರಾಮ ಹಾಗೂ ಕ್ಯಾಂಪ್‌ಗಳ ಪಿಡಿಒಗಳ ಮೇಲೆ ಒತ್ತಡ ಹೇರಿ ಭಾವಚಿತ್ರ ಹಾಕದಂತೆ ತಡೆಗಟ್ಟುತ್ತಿದ್ದಾರೆ. ಹಂಚಿನಾಳ ಕ್ಯಾಂಪ್‌ನ(ಶಾಂತಿನಗರ) ಮುಖ್ಯ ರಸ್ತೆಗೆ ಹಾಕಲಾಗಿದ್ದ ದೊಡ್ಡ ಕಮಾನನ್ನು ಕಲ್ಲು ತೂರಿ ವಿರೂಪಗೊಳಿಸಿರುವುದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಲಿಂಗಪ್ಪ ಆರೋಪಿಸಿದರು.
ಪೊಲೀಸ್, ಡಿಸಿಗೆ ದೂರು ನೀಡುವೆ: ಹಂಪನಗೌಡರು ತಮ್ಮ ಬೆಂಬಲಿಗರಿಗೆ ಇಂತಹ ವಿಷಯಗಳಲ್ಲಿ ಕುಮ್ಮಕ್ಕು ನೀಡಬಾರದು. ದ್ವೇಷದ ರಾಜಕಾರಣ ಕೈಬಿಟ್ಟು ಜನಮೆಚ್ಚುವ ಕೆಲಸ ಮಾಡಲಿ. ಪಿಡಿಒಗಳಿಗೆ ವಿನಾಕಾರಣ ಒತ್ತಡ ಹೇರಿ ಕಿರುಕುಳ ನೀಡಬಾರದು. ಒಂದು ವೇಳೆ ಸರ್ಕಾರದ ಆದೇಶ ಬಂದಿದ್ದರೆ ಬಹಿರಂಗಪಡಿಸಲಿ ತಾವು ಸಹಕರಿಸುವುದಾಗಿ ಹೇಳಿದ ಲಿಂಗಪ್ಪ, ಈ ಕುರಿತು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು. ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಈ ವೇಳೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಾಯಿರಾಮಕೃಷ್ಣ, ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ, ತಾಪಂ ಸದಸ್ಯ ಚಂದ್ರಭೂಪಾಲ ನಾಡಗೌಡ, ನಗರಸಭೆ ಸದಸ್ಯ ಶರಣಬಸವ ನಟೇಕಲ್, ಮುಖಂಡರಾದ ಜಹೀರ ರುಲ್ಲಾ ಹಸನ್, ಕೆ.ಜಿಲಾನಿಪಾಷಾ, ದೇವರೆಡ್ಡಿ, ಆರ್.ವಿ. ಸುಬ್ಬಾರಾವ್, ದಾಸರಿ ಸತ್ಯನಾರಾಯಣ, ತಿಮ್ಮಾರೆಡ್ಡಿ ಹುಡಾ, ಕೊಮಾರೆಪ್ಪ, ವೆಂಕಟೇಶ ನಂಜಲದಿನ್ನಿ, ವಿರೂಪಾಕ್ಷಗೌಡ, ದುಷ್ಮಂತಗೌಡ, ಮಹೇಶ ಮತ್ತಿತರರು ಭಾಗವಹಿಸಿದ್ದರು.
ವಾಹನ ಸಂಚಾರ ಅಸ್ತವ್ಯಸ್ತ: ಜೆಡಿಎಸ್ ಕಾರ್ಯಕರ್ತರು ದಿಢೀರ್ ರಸ್ತೆ ತಡೆ ಚಳವಳಿ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ಪೊಲೀಸರು ಆಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.