ಪರ್ಯಾಯ ನೀರಿನ ವ್ಯವಸ್ಥೆ ಆರಂಭ
ಕನ್ನಡಪ್ರಭ ವಾರ್ತೆ ರಾಯಚೂರು ಜು.6
ಆರ್ಸೆನಿಕ್ ಯುಕ್ತ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಶನಿವಾರದಿಂದಲೇ ಸಮರ್ಪಕವಾಗಿ ಟ್ಯಾಂಕರ್ ಮೂಲಕ ಶುದ್ಧ ಕುಡಿವ ನೀರು ಒದಗಿಸಲಾಗುತ್ತಿದೆ ಎಂದು ಜಿಪಂ ಸಿಇಒ ಜ್ಞಾನಪ್ರಕಾಶ್ ತಿಳಿಸಿದರು.
ಶನಿವಾರ 'ಕನ್ನಡಪ್ರಭ'ಕ್ಕೆ ಮಾತನಾಡಿ, ಜಿಲ್ಲೆಯಲ್ಲಿ ಆರ್ಸೆನಿಕ್ಯುಕ್ತ ಕುಡಿಯುವ ನೀರು ಪಡೆಯುತ್ತಿದ್ದ 44 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿವ ನೀರೊದಗಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ತಾವು ಈಗಾಗಲೇ ದೇವದುರ್ಗ, ಲಿಂಗಸ್ಗೂರು ತಾಲೂಕುಗಳಿಗೆ ಭೇಟಿ ನೀಡಿ ನೀರೊದಗಿಸುವ ಕಾರ್ಯ ಪರಿಶೀಲಿಸಿದ್ದಾಗಿ ತಿಳಿಸಿದರು.
ಶುದ್ಧ ನೀರು: ಲಿಂಗಸ್ಗೂರು ತಾಲೂಕಿನ ಹಟ್ಟಿ, ಮೇದಿನಾಪುರ, ಯಲಗಟ್ಟಾ, ವೀರಾಪುರ, ನಿಲೋಗಲ್, ಗೆಜ್ಜಲಗಟ್ಟಾ, ಮಾನವಿ ತಾಲೂಕಿನ ಪಾಮನಕಲ್ಲೂರು ಸೇರಿ 44 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರೊದಗಿಸುವ ಕಾರ್ಯಾರಂಭಗೊಂಡಿದೆ. ನೀರು ಪರೀಕ್ಷಿಸಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ 250 ಮನೆಗಳಿರುವ ಗ್ರಾಮಗಳಿಗೆ ಎರಡು ಟ್ಯಾಂಕರ್ ಮೂಲಕ ಕುಡಿವ ನೀರು ಪೂರೈಸಲಾಗುತ್ತಿದೆ. ಆರ್ಸೆನಿಕ್ಯುಕ್ತ ಕೊಳವೆಬಾವಿ ಮತ್ಚು ತೆರೆದ ಬಾವಿಗಳ ನೀರು ಬಳಸದಂತೆ ಜಾಗೃತಿ ಈಗಾಗಲೇ ಮೂಡಿಸಲಾಗಿದೆ. ಜಿಲ್ಲಾಡಳಿತದ ಬಳಿ ಅನುದಾನದ ಕೊರತೆಯಿಲ್ಲ. ಜಿಲ್ಲಾಧಿಕಾರಿಗಳೂ ಸಹ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆಂದು ಹೇಳಿದರು.
ಟ್ಯಾಂಕರ್ ಮೂಲಕ ಪೂರೈಕೆ: ಸದ್ಯ ಟ್ಯಾಂಕರ್ಗಳ ಕೊರತೆ ಎದುರಾಗಿದ್ದು, ಲಭ್ಯವಿರುವ ಟ್ಯಾಂಕರ್ಗಳ ಮೂಲಕವೇ ಎಲ್ಲ ಗ್ರಾಮಗಳಿಗೆ ನೀರೊದಗಿಸುವ ಕಾರ್ಯ ಜಾರಿಯಲ್ಲಿದೆ. ಮುಂದಿನ ಒಂದೆರಡು ದಿನದಲ್ಲಿ ಹೆಚ್ಚುವರಿ ಟ್ಯಾಂಕರ್ಗಳನ್ನು ಪಡೆದು ನೀರಿನ ಪೂರೈಕೆ ವ್ಯವಸ್ಥೆ ಸುಧಾರಿಸುವುದಾಗಿ ತಿಳಿಸಿ, ಆಯಾ ತಾಲೂಕುಗಳ ತಾಪಂ ಮತ್ತು ಗ್ರಾಪಂ ಆಡಳಿತಗಳನ್ನು ಈ ಕಾರ್ಯದಲ್ಲಿ ತೊಡಗಿಸಲಾಗುತ್ತಿದೆ ಎಂದರು.
ಪ್ರತಿಯೊಂದು ಟ್ಯಾಂಕರ್ನಲ್ಲಿ 2500 ಸಾವಿರ ಲೀಟರ್ ನೀರು ಸಾಗಿಸಲಾಗುತ್ತಿದೆ. ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗದಂತೆ ಎಲ್ಲ ಎಚ್ಚರಿಕೆ ಕೈಗೊಳ್ಳಲಾಗುತ್ತಿದೆ. ಶನಿವಾರ ಬೆಳಗ್ಗೆ ಆರಂಭದಲ್ಲಿ ನೀರಿಗಾಗಿ ನೂಕು ನುಗ್ಗಲಾಗಿತ್ತು. ಆದರೆ ಆನಂತರ ಸಮರ್ಪಕ ನೀರೊದಗಿಸುವ ಮೂಲಕ ಸಮಸ್ಯೆ ನಿವಾರಿಸಲಾಗಿದೆ ಎಂದು ಹೇಳಿದರು. ಆರ್ಸೆನಿಕ್ಯುಕ್ತ ಗ್ರಾಮಗಳಿಗೆ ಟ್ಯಾಂಕರ್ಗಳು ಮುಂದಿನ ದಿನಗಳಲ್ಲಿ ತಲುಪದಿದ್ದಲ್ಲಿ ಜಿಪಂನ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ- 1800-4250880 ಅಥವಾ 08532-225658 ಈ ನಂಬರಿಗೆ ಕರೆ ಮಾಡುವ ಮೂಲಕ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

